ADVERTISEMENT

ಪರಶುರಾಂಪುರ | ಸತತ ಮಳೆ; ಕೃಷಿಕರ ಕೈಗೆಟುಕದ ಫಸಲು

ಜೆ.ತಿಮ್ಮಯ್ಯ
Published 21 ಅಕ್ಟೋಬರ್ 2024, 7:28 IST
Last Updated 21 ಅಕ್ಟೋಬರ್ 2024, 7:28 IST
ಪರಶುರಾಂಪುರ ಸಮೀಪದ ಮೊದೂರು ಗ್ರಾಮದಲ್ಲಿ ರೈತರು ಮೆಕ್ಕೆಜೋಳ ಒಣಗಿಸಲು ತಾಡಪಾಲ್ ಹೊದಿಸಿರುವುದು
ಪರಶುರಾಂಪುರ ಸಮೀಪದ ಮೊದೂರು ಗ್ರಾಮದಲ್ಲಿ ರೈತರು ಮೆಕ್ಕೆಜೋಳ ಒಣಗಿಸಲು ತಾಡಪಾಲ್ ಹೊದಿಸಿರುವುದು   

ಪರಶುರಾಂಪುರ: ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಮಳೆ ಬರುತ್ತಿದ್ದು, ರೈತರ ಬದುಕು ಅತಂತ್ರಕ್ಕೀಡಾಗಿದೆ.

ಈ ಭಾಗದ ಪ್ರಮುಖ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಸಿರಿಧಾನ್ಯ ಬೆಳೆಗಳು ಕಟಾವಿಗೆ ಬಂದಿದ್ದು, ಜಮೀನಿಗೆ ನುಗ್ಗಿರುವ ಮಳೆ ನೀರಿನಲ್ಲಿ  ತೇಲುತ್ತಿವೆ.

ಹೋಬಳಿ ವ್ಯಾಪ್ತಿಯ ಮೊದೂರು, ಜಾಜೂರು, ನಾಗಗೊಂಡನಹಳ್ಳಿ, ಪಗಡಲಬಂಡೆ, ಕೊರ್ಲಕುಂಟೆ, ಬೊಮ್ಮನಕುಂಟೆ, ಜುಂಜರಗುಂಟೆ, ಪುರ್ಲಹಳ್ಳಿ, ಸೂರನಹಳ್ಳಿ, ಚೌಳೂರು, ಟಿ.ಎನ್.ಕೋಟೆ, ದೊಡ್ಡಚೆಲ್ಲೂರು, ಓಬನಹಳ್ಳಿ, ಮಹದೇವಪುರ, ಸಿದ್ದೇಶ್ವರನದುರ್ಗ, ಕ್ಯಾದಿಗುಂಟೆ, ಪಿಲ್ಲಹಳ್ಳಿ, ಗೌರಿಪುರ ಸೇರಿ ಬಹುತೇಕ ಹಳ್ಳಿಯ ರೈತರು ಶೇಂಗಾ  ಬೆಳೆದಿದ್ದು ಈಗ ಕಟಾವಿಗೆ ಬಂದಿದೆ.

ADVERTISEMENT

ಆದರೆ, ಕಟಾವು ಮಾಡಲು ಮಳೆಯು ಬಿಡುವು ನೀಡುತ್ತಿಲ್ಲ. ಕಟಾವು ಮಾಡದೆ ಹಾಗೇ ಬಿಟ್ಟರೆ ಶೇಂಗಾ ಕಾಯಿಗಳು ಭೂಮಿಯಲ್ಲಿಯೇ ಮೊಳಕೆ ಒಡೆಯುತ್ತದೆ ಎಂಬ ಭಯ ಕೆಲವು ರೈತರದ್ದು. ಹಾಗಾಗಿ ಮಳೆಯಲ್ಲಿಯೇ ಶೇಂಗಾ ಕಟಾವು ಮಾಡಿದ್ದು, ಗಿಡಗಳೆಲ್ಲಾ ಮಳೆಯಲ್ಲಿ ತೋಯ್ದು ದನ– ಕರು ಮತ್ತು ಮೇಕೆ– ಕುರಿಗಳಿಗೆ ಮೇವಾಗಬೇಕಿದ್ದ ಶೇಂಗಾ ಹೊಟ್ಟು ಸಂಪೂರ್ಣ ಕಪ್ಪಾಗಿದೆ. ಅಂತೆಯೇ ಜಾನುವಾರುಗಳಿಗೆ ಮೇವಿನ ಕೊರತೆ ಆಗುವ ಸಾಧ್ಯತೆ ಇದ್ದು, ರೈತರ ಚಿಂತೆ ಹೆಚ್ಚಿಸಿದೆ.

ಮೊದೂರು ಗ್ರಾಮದ ರೈತರು ಕಟಾವು ಮಾಡಿರುವ ಮೆಕ್ಕೆಜೋಳ ಮೊಳಕೆ ಒಡೆಯುತ್ತವೆ ಎಂಬ ಭಯದಿಂದ ಊರಿನ ದೇವಸ್ಥಾನದ ಬಳಿ ತಾಡಪಾಲ್ ಹೊದಿಸಿದ್ದಾರೆ. ಮತ್ತೊಂದಡೆ ಶೇಂಗಾ ಬೆಲೆಯು ಒಂದು  ಕ್ವಿಂಟಲ್‌ಗೆ ₹ 3,500– ₹ 4,000 ಹಾಗೂ ಮೆಕ್ಕಜೋಳದ ಬೆಲೆ ₹ 2,200ಕ್ಕೆ ಕುಸಿದಿದೆ.

ಶೇಂಗಾಕ್ಕೆ ಕನಿಷ್ಠ ₹ 9,500 ಹಾಗೂ ಮೆಕ್ಕೆಜೋಳಕ್ಕೆ ₹ 3,500 ಬೆಲೆ ನಿಗದಿ ಮಾಡಬೇಕು. ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಭಾಗದ ರೈತರಿಗೆ ಉಗ್ರಾಣ ವ್ಯವಸ್ಥೆ ಕಲ್ಪಿಸುವತ್ತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಪಿ.ಮಹದೇವಪುರದ ರೈತ ಗೊವಿಂದ ರೆಡ್ಡಿ ಅವರ ಜಮೀನಿನಲ್ಲಿ ಕಟಾವು ಮಾಡಿದ ಶೇಂಗಾ ಮೊಳಕೆ ಒಡೆದಿರುವುದು
ವಾರದಿಂದ ಮಳೆ ಸುರಿಯುತ್ತಿದ್ದು ರೈತರ ಬೆಳೆಗಳು ಹಾನಿಗೊಳಗಾಗಿವೆ. ರೈತರಿಗೆ ಸೂಕ್ತ ನೆರವು ಮತ್ತು ಬೆಳೆಗಳಿಗೆ ದರ ನಿಗದಿ ಮಾಡಬೇಕು.
ಹೇಮಂತ್ ರೈತ ಮೊದೂರು
ಸತತ ಮಳೆಯಿಂದ ಕಟಾವು ಮಾಡಿದ ಶೇಂಗಾ ಮೊಳೆಕೆ ಒಡೆದಿದೆ. ಅದರ ಹೊಟ್ಟು ಸಂಪೂರ್ಣ ಕಪ್ಪಾಗಿದೆ
ಗೊವಿಂದ ರೆಡ್ಡಿ ರೈತ ಪಿ.ಮಹದೇವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.