ADVERTISEMENT

ವಿ.ವಿ. ಸಾಗರಕ್ಕೆ ಕ್ರಸ್ಟ್‌ ಗೇಟ್ ಅಳವಡಿಕೆ: ರೈತ ಸಂಘದ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:10 IST
Last Updated 26 ಅಕ್ಟೋಬರ್ 2024, 14:10 IST
ಹೊಸದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿದರು
ಹೊಸದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿದರು    

ಹೊಸದುರ್ಗ: ‘ತಾಲ್ಲೂಕಿನ ವಿ.ವಿ. ಸಾಗರ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಸಿ, ನೀರನ್ನು ಬೇರೆಡೆಗೆ ಹರಿಯಿಸುವ ಬದಲು, ಜಿಲ್ಲೆಯ ಜನರಿಗೆ ಅನುಕೂಲವಾಗುವಂತಹ ಕಾರ್ಯ ಮಾಡಬೇಕು. ಕ್ರಸ್ಟ್ ಗೇಟ್ ಅಳವಡಿಕೆ ಬೇಡ’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಅಭಿಪ್ರಾಯಪಟ್ಟರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿವಿ ಸಾಗರಕ್ಕೆ ಕ್ರಸ್ಟ್ ಗೇಟ್ ಅಳವಡಿಸುವುದರ ಕುರಿತು ಸಾಧಕ ಬಾಧಕಗಳ ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ವಿವಿ ಸಾಗರದ ಹಿನ್ನೀರಿನಲ್ಲಿ ತಾಲ್ಲೂಕಿನ ರೈತರ ಸ್ಥಿತಿ ಗತಿ ತಿಳಿಯಲು ಈಗಾಗಲೇ ತಹಶೀಲ್ದಾರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಾಜ್ಯದಲ್ಲಿಯೇ ಮೊದಲ ಅಣೆಕಟ್ಟು ವಿವಿ ಸಾಗರ ಆಗಿದ್ದು, ಅದನ್ನು ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಕ್ರಸ್ಟ್ ಗೇಟ್ ಅಳವಡಿಸುವ ಬದಲು ತಾಲ್ಲೂಕಿನಲ್ಲಿ ಸೂಕ್ತವಾದ ಸ್ಥಳದಲ್ಲಿ ತಜ್ಞರ ಸಲಹೆ ಪಡೆದು, ಬ್ಯಾರೇಜ್ ನಿರ್ಮಿಸಿ, ಲಿಫ್ಟ್ ಮಾಡುವ ಮೂಲಕ ಸುತ್ತಲಿನ ಕೆರೆಗಳಿಗೆ ನೀರು ತುಂಬಿಸಬಹುದು’ ಎಂದು ಹೇಳಿದರು.

ADVERTISEMENT

‘ಜಲಾಶಯ 125 ಅಡಿ ತಲುಪುವ ಮುನ್ನವೇ ಈ ಕಾರ್ಯ ಮಾಡಿದರೆ ಹೆಚ್ಚಿನ ನೀರು ಮಾತ್ರ ವಿವಿ ಸಾಗರ ಜಲಾಶಯ ತಲುಪುತ್ತದೆ. ಕೆರೆಗಳು ಭರ್ತಿ ಆಗುವುದರಿಂದ ತಾಲ್ಲೂಕಿನ ರೈತರಿಗೂ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಮಳೆ ನೀರು ದೊರೆತಾಗ ಅದರ ಸದ್ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಸ್ವಲ್ಪ ತ್ಯಾಗವೂ ಅವಶ್ಯ’ ಎಂದು ಅಭಿಪ್ರಾಯಪಟ್ಟರು.

‘2022ರಲ್ಲಿ ವಿವಿ ಸಾಗರದ ಹಿನ್ನೀರಿನಲ್ಲಿ ತಾಲ್ಲೂಕಿನ ರೈತರು ಅಪಾರ ನಷ್ಟ ಅನುಭವಿಸಿದರು. ಅವರಿಗೆ ಪರಿಹಾರ ನೀಡಿಲ್ಲ. ಅವರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಹಿನ್ನೀರಿನ ರೈತರ ಬಗ್ಗೆ ಮಾತನಾಡಲು ಶಾಸಕರಿಗೆ ನೈತಿಕತೆ ಇಲ್ಲ’ ಎಂದು ಗುಡುಗಿದರು.

ಈ ವೇಳೆ ರೈತ ಸಂಘದ ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಸಿದ್ದರಾಮಣ್ಣ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಯಲಪ್ಪ, ಹೊಸದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಬೋರೇಶ್ ಸೇರಿ ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ ರೈತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.