ಮೊಳಕಾಲ್ಮುರು: ರೇಷ್ಮೆ ಸೀರೆಗೆ ಪ್ರಸಿದ್ಧವಾದ ಮೊಳಕಾಲ್ಮುರು ತಾಲ್ಲೂಕು ಪ್ರಕೃತಿದತ್ತ ಸೀತಾಫಲ ಹಣ್ಣಿಗೂ ಹೆಸರಾಗಿದೆ.
ಇಲ್ಲಿರುವ ಬೆಟ್ಟಗಳಲ್ಲಿ ಸಾವಿರಾರು ಸೀತಾಫಲ ಮರಗಳು ಪ್ರಕೃತಿದತ್ತವಾಗಿ ಬೆಳೆದಿದ್ದು, ಪ್ರತಿವರ್ಷ ಸೆಪ್ಟೆಂಬರ್‌ನಿಂದ ಹಣ್ಣಿನ ಸುಗ್ಗಿ ಆರಂಭವಾಗಿ ನವೆಂಬರ್‌ಗೆ ಕೊನೆಯಾಗುತ್ತದೆ. ಪ್ರಸಕ್ತ ವರ್ಷ ಉತ್ತಮ ಮುಂಗಾರು ಸುರಿದ ಕಾರಣ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಉತೃಷ್ಟವಾಗಿದೆ. ಇಲ್ಲಿ ಬೆಳೆಯುವ ಹಣ್ಣುಗಳ ರುಚಿ ವಿಶಿಷ್ಟವಾಗಿದ್ದು, ಅನೇಕರು ಮಾರುಹೋಗಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಬೆಳೆಯುವ ಸಿತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ.
ತಾಲ್ಲೂಕಿನಲ್ಲಿ ಪ್ರಮುಖವಾಗಿ ಮೊಳಕಾಲ್ಮುರು, ಹಾನಗಲ್, ಕಾಟನಾಯನಕಹಳ್ಳಿ, ನುಂಕಿಮಲೆ ಬೆಟ್ಟ, ಕೂಗೆಬಂಡೆ, ಎದ್ದಲಬೊಮ್ಮಯ್ಯನಹಟ್ಟಿ, ಕೋನಸಾಗರ, ಮರ್ಲಹಳ್ಳಿ, ಪೂಜಾರಹಟ್ಟಿ, ಹಿರೇಕೆರೆಹಳ್ಳಿ ರಸ್ತೆ, ಗುಡೇಕೋಟೆ ರಸ್ತೆ, ಬೊಮ್ಮದೇವರಹಳ್ಳಿ ಸುತ್ತಮುತ್ತ ಇರುವ ಗುಡ್ಡಗಾಡಿನಲ್ಲಿ ಪ್ರಕೃತಿದತ್ತವಾಗಿ ಸೀತಾಫಲ ಗಿಡಗಳು ಬೆಳೆದಿದೆ. ಇದರ ಹೊಣೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ.
‘ಅಲ್ಲಿ ಸಿಗುವ ಹಣ್ಣುಗಳನ್ನು ಪ್ರಮುಖವಾಗಿ ಮೊಳಕಾಲ್ಮುರು ಪಟ್ಟಣ, ರಾಯಾಪುರ, ಹಾನಗಲ್ ಕ್ರಾಸ್, ರಾಂಪುರ ಮತ್ತು 150 ‘ಎ’ ಹೆದ್ದಾರಿ ಬದಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡಲಾಗುತ್ತದೆ. ಗುತ್ತಿಗೆ ಪಡೆದವರು ಮತ್ತು ಹಣ್ಣು ಕೀಳಲು ಹೋಗುವ ಕಾರ್ಮಿಕರಿಂದ ಸಂಗ್ರಹಿಸಿ ನಿತ್ಯ ದಾವಣಗೆರೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಗೆ ಕಳಿಸಲಾಗುತ್ತದೆ. ಪ್ರತಿ ಪುಟ್ಟಿ ಮತ್ತು ಪ್ಲಾಸ್ಟಿಕ್ ಚೀಲದ ಲೆಕ್ಕದಲ್ಲಿ ಕಾಯಿ ದರ ನಿಗದಿಪಡಿಸಲಾಗಿದೆ. ಪ್ರತಿ ಪುಟ್ಟಿಗೆ ₹ 300ರಿಂದ ₹ 400 ಮತ್ತು ಪ್ರತಿ ಚೀಲಕ್ಕೆ ₹ 700– ₹ 800 ದರವಿದೆ’ ಎಂದು ಹಣ್ಣಿನ ವ್ಯಾಪಾರಿ ಪಟ್ಟಣದ ಸಿದ್ದಣ್ಣ ಹೇಳಿದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಹೆಚ್ಚು ಇಳುವರಿ ಬಂದಿದೆ. ಇದರಿಂದ ದರ ಕುಸಿತವಾಗಿದೆ. ಜತೆಗೆ ಮಳೆ ಬಿಡುವು ನೀಡದ ಕಾರಣ ಗಿಡದಲ್ಲೇ ಕಾಯಿ ಹಣ್ಣಾಗಿ ಉದುರುತ್ತಿವೆ. ಪ್ರಸಕ್ತ ವರ್ಷ ಸಾಕಷ್ಟು ಕಾಯಿ ಕೀಳಲು ಆಗದೆ ಗಿಡದಲ್ಲೇ ಹಾಳಾಗಿವೆ’ ಎಂದರು.
‘ಕಳೆದ 3 ವರ್ಷ ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಸೀತಾಫಲ ಕಾಯಿಯನ್ನು ಮಾರಾಟಕ್ಕೆ ಹರಾಜು ಹಾಕಿರಲಿಲ್ಲ. ಈ ವರ್ಷ ಅಂದಾಜು 3,970 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿನ ಗಿಡಗಳಿಂದ ಕಾಯಿ ಪಡೆಯಲು ₹ 32,981ಕ್ಕೆ ಹರಾಜು ಹಾಕಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಶ್ರೀಹರ್ಷ ಹೇಳಿದರು.
‘2 ತಿಂಗಳಿಗೂ ಹೆಚ್ಚು ಕಾಲ ಹಣ್ಣಿನ ಸೀಜನ್ ಇರುತ್ತದೆ. ಈ ಸಮಯದಲ್ಲಿ ದಿನಗೂಲಿಗೆ ಹೋಗುವ ಅನೇಕರು ಸಮೀಪದ ಬೆಟ್ಟಕ್ಕೆ ತೆರಳಿ ಕಾಯಿ ಕಿತ್ತು ತಂದು ಮಾರಾಟ ಮಾಡುವ ಮೂಲಕ ದಿನಕ್ಕೆ ₹ 200ರಿಂದ ₹ 300 ಆದಾಯ ಗಳಿಸುತ್ತಾರೆ. 100ರಿಂದ 150 ಜನರಿಗೆ ಇದು ಉದ್ಯೋಗ ನೀಡುತ್ತದೆ. ಅರಣ್ಯ ಇಲಾಖೆ ಹರಾಜು ಹಾಕುವುದರಿಂದ ಅವರು ಹಣ್ಣು ಕಿತ್ತು ತರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಂದಿನ ವರ್ಷದಿಂದ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಸ್ಥಳೀಯ ವ್ಯಾಪಾರಿಗಳು ಮನವಿ ಮಾಡಿದರು.
‘ನಸುಕಿನಲ್ಲಿ ಬೆಟ್ಟಕ್ಕೆ ತೆರಳಿ ಸೀತಾಫಲ ಬಿಡಿಸಿ ತರಬೇಕು. ಕರಡಿ, ಚಿರತೆ ಭಯ ಇದೆ. ಅರಣ್ಯ ಇಲಾಖೆ ಹರಾಜು ಹಾಕುವುದರಿಂದ ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ’ ಎಂದು ಹಣ್ಣಿನ ವ್ಯಾಪಾರಿ ಪಾಪಕ್ಕ ತಿಳಿಸಿದರು.
ರಾಜ್ಯದಾದ್ಯಂತ ಸೀತಾಫಲ ಹುಣಸೆಮರದ ಹರಾಜು ಪ್ರತಿವರ್ಷ ಮಾಡಲಾಗುತ್ತದೆ. ಇದರಿಂದ ಕಾಡಿಗೆ ನುಗ್ಗಿ ದಾಂಧಲೆ ಮಾಡುವವರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.
-ಶ್ರೀಹರ್ಷ ವಲಯ ಅರಣ್ಯಾಧಿಕಾರಿ ಮೊಳಕಾಲ್ಮುರು
ಪಟ್ಟಣ ಸುತ್ತಮುತ್ತ ಕೋತಿಗಳು ಕರಡಿ ಕಾಟ ಹೆಚ್ಚಿದೆ. ಅವು ಆಹಾರ ಅರಸಿ ಬೆಟ್ಟದಿಂದ ಕೆಳಗೆ ಬರುತ್ತವೆ. ಸೀತಾಫಲ ಹಣ್ಣಿನ ಸೀಜನ್‌ನಲ್ಲಿ ಅವುಗಳಿಗೆ ಆಹಾರ ಸಿಗುತ್ತಿತ್ತು. ಹರಾಜು ಅಗತ್ಯವಿರಲಿಲ್ಲ
-ರಾಮಚಂದ್ರಪ್ಪ ಮೊಳಕಾಲ್ಮುರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.