ಚಿತ್ರದುರ್ಗ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಗರದ ವೈದ್ಯರೊಬ್ಬರಿಗೆ ₹ 1.27 ಕೋಟಿ ವಂಚಿಸಿದ್ದ ಪ್ರಕರಣವನ್ನು ಇಲ್ಲಿಯ ಸಿಇಎನ್ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಠಾಣೆ ಪೊಲೀಸರು ಭೇದಿಸಿದ್ದು, ಅಸ್ಸಾಂ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
ಪಬನ್ ಕುಮಾರ್, ಜಾಕೀರಾ ಬೋರಾ ಬಂಧಿತ ಆರೋಪಿಗಳು. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಿದ್ದ ₹ 16.89 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
ಆಗಸ್ಟ್ 21ರಂದು ವೈದ್ಯರಿಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ್ದ ವಂಚಕರು ಲೆಕ್ಕಪರಿಶೋಧನೆಯ ಬೆದರಿಕೆಯೊಡ್ಡಿ ಪ್ರತ್ಯೇಕ ಖಾತೆಯೊಂದಕ್ಕೆ ಹಣ ಹಾಕಿಸಿಕೊಂಡು ವಂಚಿಸಿದ್ದರು.
ನಂತರ ತಮ್ಮ ಹಣದ ಬಗ್ಗೆ ಯಾವುದೇ ಮಾಹಿತಿ ಬಾರದಿದ್ದಾಗ ವಂಚನೆಯ ವಿಷಯ ಗೊತ್ತಾಗಿ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್‌ಪಿ ಈಶ್ವರ ನಾಯ್ಕ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
‘ಆರೋಪಿಗಳನ್ನು ನಗರಕ್ಕೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಉಳಿಕೆ ಹಣದ ವಿವರವನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.