ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿವಾಣಿಜ್ಯ ಹಾಗೂ ಎಂಬಿಎ ನಿಕಾಯದ ಡೀನ್ ಆಗಿರುವ ಪ್ರಾಧ್ಯಾಪಕ ಡಾ.ಲಕ್ಷ್ಮಣ ಪಿ. ಅವರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಣ ನಿಕಾಯದ ಡೀನ್ ಆಗಿರುವ ಸಹ ಪ್ರಾಧ್ಯಾಪಕ ಡಾ.ವೆಂಕಟೇಶ್ ಕೆ. ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅವರ ಅಧಿಕಾರಾವಧಿ ಮಾರ್ಚ್ 26ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕುಲಾಧಿಪತಿಯಾಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಿರ್ದೇಶನದಂತೆ ಡಾ.ಲಕ್ಷ್ಮಣ ಪಿ. ಅವರು ಹಂಗಾಮಿ ಕುಲಪತಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.
‘ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆಯ ಪ್ರಕಾರ ಹಂಗಾಮಿ ಕುಲಪತಿಯನ್ನು ನೇಮಕ ಮಾಡಬೇಕಾದರೆ ಸೀನಿಯರ್ ಮೋಸ್ಟ್ ಡೀನ್‌ಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಡೀನ್‌ಗಳ ಸೇವಾಹಿರಿತನದಲ್ಲಿ ನಾಲ್ಕು ಡೀನ್‌ಗಳ ಪೈಕಿ ನಾನು ಮೊದಲ ಸ್ಥಾನದಲ್ಲಿರುವುದರಿಂದ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯಪಾಲರಿಗೆ ಇ–ಮೇಲ್ ಮೂಲಕ ಮನವಿ ಸಲ್ಲಿಸಿದ್ದೇನೆ. ರಾಜ್ಯಪಾಲರ ಕಚೇರಿಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಡಾ.ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
***
ಹಂಗಾಮಿ ಕುಲಪತಿ ನೇಮಕಾತಿ ವಿಚಾರದಲ್ಲಿ ಡಾ.ವೆಂಕಟೇಶ್ ಅವರು ಅತೃಪ್ತಿ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಖಾಸಗಿಯಾಗಿ ದೂರು ಸಲ್ಲಿಸಿರಬಹುದೇನೋ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ.
- ಡಾ.ಲಕ್ಷ್ಮಣ ಪಿ., ಹಂಗಾಮಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.