ಚಿತ್ರದುರ್ಗ: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪಯೋಜನೆಯಡಿ (ಟಿಎಸ್‌ಪಿ) ನಿಗದಿಯಾಗಿರುವ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಎಲ್ಲ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಎಸ್‌ಸಿಪಿ–ಟಿಎಸ್‌ಪಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಸೇರಿ ಎಲ್ಲ ಇಲಾಖೆಗೆ ನಿಗದಿಯಾದ, ಬಿಡುಗಡೆಯಾದ ಅನುದಾನ ಹಾಗೂ ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಅನುದಾನ ಹಂಚಿಕೆ ಮಾಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬ ಧೋರಣೆ ಅನುಸರಿಸುತ್ತಿರುವ ಮೀನುಗಾರಿಕೆ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ₹ 48 ಕೋಟಿ ಅನುದಾನ ಮೀಸಲಿಟ್ಟು, ₹ 9 ಕೋಟಿ ವೆಚ್ಚದ ಕಾಮಗಾರಿಯನ್ನು ಮಾತ್ರ ಕೈಗೆತ್ತಿಕೊಂಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
‘ಮೂರನೇ ತ್ರೈಮಾಸಿಕ ಅವಧಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮೀಸಲಿಟ್ಟ ಅನುದಾನದಲ್ಲಿ ಶೇ 50ಕ್ಕಿಂತ ಹೆಚ್ಚು ವೆಚ್ಚ ಮಾಡಬೇಕಾಗಿತ್ತು. ಆದರೆ, ಈವರೆಗೆ ಗಮನ ಹರಿಸದೇ ಇರುವುದು ಲೋಪ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.