ADVERTISEMENT

ಚಿತ್ರದುರ್ಗ: ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಿದ್ಧತೆ

ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಪ್ರಕ್ರಿಯೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 31 ಮೇ 2024, 15:29 IST
Last Updated 31 ಮೇ 2024, 15:29 IST
ಟಿ.ವೆಂಕಟೇಶ್‌
ಟಿ.ವೆಂಕಟೇಶ್‌   

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜೂನ್‌ 4ರಂದು ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಅಂದು ಮಧ್ಯಾಹ್ನ 12.30 ವೇಳೆಗೆ ಫಲಿತಾಂಶ ಪ್ರಕಟಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದರು.

‘ಮತ ಎಣಿಕೆ ಪ್ರಕ್ರಿಯೆ ಅಂದು ಬೆಳಿಗ್ಗೆ 8ರಿಂದ ಆರಂಭವಾಗಲಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದ್ದು, ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. 8 ವಿಧಾನಸಭಾ ಕ್ಷೇತ್ರ ಹಾಗೂ ಅಂಚೆ ಮತಪತ್ರಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಏ.26ರಂದು ಮತದಾನ ನಡೆದಿದ್ದು, ಮತಯಂತ್ರಗಳು ಸರ್ಕಾರಿ ವಿಜ್ಞಾನ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಕೊಠಡಿಯಲ್ಲಿ ಮತಯಂತ್ರಗಳನ್ನು ಭದ್ರಪಡಿಸಲಾಗಿದೆ. ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿದ್ದು, ಗೆಜೆಟೆಡ್‌ ಅಧಿಕಾರಿಗಳು ನಿತ್ಯ ಮೂರು ಪಾಳಿಯಲ್ಲಿ ನಿಗಾ ಇಟ್ಟಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಪ್ರತಿ ಕೊಠಡಿಗೆ 14 ಟೇಬಲ್‌:

‘ಅಂಚೆ ಮತ್ರಪತ್ರಗಳ ಎಣಿಕೆ ಹಾಗೂ ಮತಯಂತ್ರಗಳ ಎಣಿಕೆ ಪ್ರಕ್ರಿಯೆ ಏಕಕಾಲಕ್ಕೆ ಆರಂಭವಾಗಲಿದೆ. ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಂಡ ಬಳಿಕವೇ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. 9 ಕೊಠಡಿಗಳಲ್ಲಿ ಎಣಿಕೆ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ 14 ಟೇಬಲ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಟೇಬಲ್‌ಗೆ ಮೂವರು ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕೆ ಪ್ರಕ್ರಿಯೆ ಮೇಲೆ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇರಲಿದೆ’ ಎಂದು ಹೇಳಿದರು.

‘20 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರಿಂದ ಎಣಿಕೆ ಪ್ರಕ್ರಿಯೆ ಕೊಂಚ ನಿಧಾನವಾಗುವ ಸಾಧ್ಯತೆ ಇದೆ. 19ರಿಂದ 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನ ಮಾಹಿತಿಯನ್ನು ಚುನಾವಣಾ ಆಯೋಗ ನಿಗದಿಪಡಿಸಿದ ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತದೆ. 6,900 ಅಂಚೆ ಮತಪತ್ರಗಳು ಇದ್ದು, 11 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಉಮೇದುವಾರರು ಮತ ಎಣಿಕೆ ಕಾರ್ಯಕ್ಕೆ ಏಜೆಂಟರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಏಜೆಂಟರು ಪೆನ್ನು ಮತ್ತು ಬಿಳಿ ಹಾಳೆಯ ಹೊರತಾಗಿ ಯಾವುದೇ ರೀತಿಯ ವಿದ್ಯುನ್ಮಾನ ಯಂತ್ರ, ನೀರಿನ ಬಾಟಲಿ, ಇನ್ನಿತರ ವಸ್ತುಗಳನ್ನು ತರುವಂತಿಲ್ಲ. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮುರು, ಹಿರಿಯೂರು ಮತ್ತು ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯಲಿದೆ’ ಎಂದು ಹೇಳಿದರು.

ಭದ್ರತೆಗೆ 1,800 ಸಿಬ್ಬಂದಿ:

‘ಚುನಾವಣೆ ಘೋಷಣೆಯಾದಾಗಿನಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೂನ್‌ 4ರಂದು ಗೃಹರಕ್ಷಕ ದಳ ಸೇರಿ 1,800 ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಮಾಹಿತಿ ನೀಡಿದರು.

‘ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದರ್ಜೆಯ ಇಬ್ಬರು, ಡಿವೈಎಸ್‌ಪಿ ದರ್ಜೆಯ ಮೂವರು ಹಾಗೂ 18 ಇನ್‌ಸ್ಪೆಕ್ಟರ್‌, 51 ಪಿಎಸ್‌ಐಗಳು ಭದ್ರತೆಯ ಹೊಣೆ ಹೊತ್ತಿದ್ದಾರೆ. ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಮೂರು ತುಕಡಿ ನಿಯೋಜಿಸಲಾಗಿದೆ. ರಾಜಕೀಯ ಪಕ್ಷಗಳ ಕಚೇರಿ, ಅಭ್ಯರ್ಥಿಗಳು ಹಾಗೂ ಮುಖಂಡರ ಮನೆ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ. ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್ ಇದ್ದರು.

ವಿಧಾನಸಭಾ ಕ್ಷೇತ್ರ;ಮತಗಟ್ಟೆ;ಮೇಜು ಮೊಳಕಾಲ್ಮುರು;285;21 ಚಳ್ಳಕೆರೆ;260;19 ಚಿತ್ರದುರ್ಗ;288;21 ಹಿರಿಯೂರು;287;21 ಹೊಸದುರ್ಗ;242;18 ಹೊಳಲ್ಕೆರೆ;299;22 ಶಿರಾ;267;20 ಪಾವಗಡ;240;18

4ರವರೆಗೆ ಮದ್ಯ ಮಾರಾಟ ನಿಷೇಧ

ವಿಧಾನಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಅಂಗವಾಗಿ ಜೂನ್‌ 1ರಿಂದ 4ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ‘ಜೂನ್‌ 3ರಂದು ವಿಧಾನಪರಿಷತ್‌ ಚುನಾವಣೆಯ ಮತದಾನ ನಡೆಯುತ್ತಿರುವುದರಿಂದ ಜೂನ್‌ 1ರಿಂದ 3ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ನಡೆಯುತ್ತಿರುವುದರಿಂದ ಅಂದು ಕೂಡ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾಹಿತಿ ನೀಡಿದರು. ‘ಮತ ಎಣಿಕೆ ದಿನದಂದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ 144ಸೆಕ್ಷನ್ ಜಾರಿಗೊಳಿಸಲಾಗುತ್ತಿದೆ. ಅಂದು ಅಭ್ಯರ್ಥಿಗಳು ವಿಜಯೋತ್ಸವ ಸಭೆ-ಸಮಾರಂಭಗಳನ್ನು ನಡೆಸದಂತೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.