ಪರಶುರಾಂಪುರ: ನಾಡಿನಾದ್ಯಂತ ಕಳೆದ ವಾರವೇ ದೀಪಾವಳಿ ಆಚರಿಸಲಾಗಿದೆ. ಆದರೆ, ಪರಶುರಾಂಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಳ್ಳಿ ಸೊಗಡಿನ ದೀವಳಿಗೆ ಅಥವಾ ಎತ್ತಿನ ಹಬ್ಬ ಆಚರಿಸುವುದು ವಾಡಿಕೆ. ಅಂತೆಯೇ ಹೋಬಳಿ ವ್ಯಾಪ್ತಿಯಲ್ಲಿ ಹಬ್ಬ ಆಚರಣೆಗೆ ಸಿದ್ಧತೆಗಳು ಸಡಗರ, ಸಂಭ್ರಮದಿಂದ ಸಾಗಿವೆ.
ಬಹುತೇಕ ಗ್ರಾಮಗಳಲ್ಲಿ ದೀಪಾವಳಿ ಅಮಾವಾಸ್ಯೆ ಕಳೆದ ನಂತರ 7ನೇ ದಿನ , 9ನೇ ದಿನ 11ನೇ ದಿನ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ದಿನ ಎತ್ತುಗಳಿಗೆ ಸ್ನಾನ ಮಾಡಿಸಿ, ಹೂಗಳಿಂದ ಅಲಂಕರಿಸಿ ಕುಚ್ಚು, ಗೆಜ್ಜೆಗಳನ್ನು ಕಟ್ಟಿ, ಮೈಮೇಲೆ ಜೂಲು ಹೊದಿಸಿ ದೇವರಂತೆ ಸಿಂಗರಿಸಿ ಗೋಧೂಳಿ ಸಮಯದಲ್ಲಿ ಊರಿನ ಹೊರ ವಲಯದಲ್ಲಿ ಹಾಕುವ ಈಡಿನ ಬಳಿಗೆ ಊರಿನ ಎಲ್ಲಾ ಎತ್ತುಗಳನ್ನು ಕೆರೆತರಲಾಗುತ್ತದೆ.
ಹೋಬಳಿಯ ಚಿಕ್ಕ ಚೆಲ್ಲೂರು, ಚೌಳೂರು ಮತ್ತು ಪಿಲ್ಲಹಳ್ಳಿಯಲ್ಲಿ ಮೊದಲು ಎತ್ತಿನ ಹಬ್ಬ ಪ್ರಾರಂಭಗಾಗಿ ನವೆಂಬರ್ ಅಂತ್ಯದ ಜಾಜೂರು, ಪಗಡಲಬಂಡೆ, ಪರಶುರಾಂಪುರ, ಕರೆಕಲೆಹಟ್ಟಿ, ದೊಡ್ಡಗೊಲ್ಲರಹಟ್ಟಿ, ಜುಂಜರಗುಂಟೆ, ತಿಮ್ಮಣ್ಣ ನಾಯಕನಕೋಟೆ, ದೊಡ್ಡಚೆಲ್ಲೂರು ಸೇರಿ ಬಹುತೇಕ ಹಳ್ಳಿಗಳಲ್ಲಿ ಎತ್ತಿನ ಹಬ್ಬವನ್ನು ಆಚರಿಸಲಾಗುತ್ತದೆ.
ಎತ್ತುಗಳಿಗೆ ಕಿಚ್ಚು ಹಾಯಿಸುವುದು: ಊರಿನ ಹೊರ ವಲಯದಲ್ಲಿ ಹಾಕುವ ಈಡು (ಕಿಚ್ಚು)ಗೆ ಸೂರ್ಯ ಮುಳುಗುತ್ತಿದ್ದಂತೆ ಬೆಂಕಿ ಹಾಕಲಾಗುತ್ತದೆ. ಎತ್ತುಗಳನ್ನು ಕರೆತಂದು ಕಿಚ್ಚು ಹಾಯಿಸುವ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ. ಈ ವೇಳೆ ಯುವಕರು ಮತ್ತು ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ದೀವಳಿಗೆ ಹಬ್ಬಕ್ಕೆ ತಂಗಟೆ ಹೂ ವಿಶೇಷ: ಗ್ರಾಮದ ತಳವಾರ ನಾಯಕ ಕೈವಾಡಸ್ಥರು ಎತ್ತಿನ ಹಬ್ಬ ದಿನ ಗೊತ್ತು ಮಾಡಿ ಪ್ರತಿ ಮನೆಗೂ ತಂಗಟೆ ಹೂವನ್ನು ಮೂರು ದಿನ ನೀಡುತ್ತಾರೆ. ಇದು ಹಬ್ಬದ ಆಚರಣೆಯ ಸೂಚನೆ. ನಂತರ ಪ್ರತಿ ಮನೆಯಿಂದ ಅಕ್ಕಿ ಮತ್ತು ರಾಗಿ ಹಿಟ್ಟು ಸಂಗ್ರಹಿಸಿ, ನೀಡಿದಷ್ಟು ಹಣ ತೆಗೆದುಕೊಂಡು ಹಬ್ಬದ ದಿನ ಈಡು ಇಡುವ ಸ್ಥಳದಲ್ಲಿ ಮುದ್ದೆ ಮತ್ತು ಬದನೆಕಾಯಿ ಬಜ್ಜಿ ಪ್ರಸಾದ ಸಿದ್ಧಪಡಿಸಿ ನೀಡುತ್ತಾರೆ. ಈ ಸಂಪ್ರದಾಯ ಗಿಂದಿನಿಂದಲೂ ನಡೆದು ಬಂದಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.
ಕಿಚ್ಚು ಹಾಯಿಸಿದ ಬಳಿಕ ಮನೆಗಳಿಗೆ ಬರುವ ಎತ್ತುಗಳೆದುರು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿ, ಆರತಿ ಬೆಳಗಿ ಒಳಗಡೆ ಕರೆದುಕೊಂಡು ಹಬ್ಬದ ಊಟ ಬಡಿಸುತ್ತಾರೆ. ಎತ್ತು ಮನೆಯೊಳಗೆ ಎಡಗಾಲು ಅಥವಾ ಬಲಗಾಲು ಯಾವುದನ್ನು ಮೊದಲು ಇಡುತ್ತದೆ ಎಂಬುದನ್ನೂ ರೈತರು ಗಮನಿಸುತ್ತಾರೆ. ಬಲಗಾಲು ಇಟ್ಟರೆ ಶುಭ ಮತ್ತು ಎಡಗಾಲು ಇಟ್ಟರೆ ಆ ಎತ್ತಿಗೆ ಈ ಮನೆಯ ಋಣ ತೀರಿತು ಎಂದು ನಂಬುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.