ADVERTISEMENT

ಬೆನಕಪ್ಪನ ಪ್ರತಿಷ್ಠಾಪನೆಯೇ ಗ್ರಾಮೀಣರ ಪ್ರತಿಷ್ಠೆ

ಶ್ವೇತಾ ಜಿ.
Published 2 ನವೆಂಬರ್ 2024, 7:23 IST
Last Updated 2 ನವೆಂಬರ್ 2024, 7:23 IST
   

ದೀಪಾವಳಿ ಹಬ್ಬ ಎಂದಾಗ ಗ್ರಾಮೀಣ ಮಹಿಳೆಯರಿಗೆ ಮೊದಲು ನೆನಪಾಗುವುದು ಬೆನಕಗಳು. ದೀಪಾವಳಿ ದಿನದಂದು ಸಿಹಿ ತಿನಿಸುಗಳ ತಯಾರಿಗಿಂತ ಮೊದಲು ಬೆನಕಗಳ ತಯಾರಿ ನಡೆಯುತ್ತದೆ. ಬೆಳಕಿನ ಹಬ್ಬದಲ್ಲಿ ಬೆನಕಗಳ ಪಾತ್ರ ಬಹುಮುಖ್ಯ. ತಾಲ್ಲೂಕಿನಾದ್ಯಂತ ಬೆನಕಗಳ ತಯಾರಿ, ಆಚರಣೆ ಇಂದಿಗೂ ಇದೆ.

ಹಳ್ಳಿ ಜನರು ದೀಪಾವಳಿಯಂದು ನಸುಕಿನಲ್ಲಿಯೇ ಎದ್ದು, ಪ್ರತಿ ಮನೆಗೆ ಒಬ್ಬರಂತೆ ತಂಗಡಿಕೆ (ಹಳದಿ ಬಣ್ಣದ) ಹೂ ತರಲು ಹೋಗುವರು. ಅಲ್ಲಿ ಜಮೀನಿನಲ್ಲಿ ಫಸಲಿಗೆ ಬಂದಿದ್ದ ಎಲ್ಲಾ ಬೆಳೆಗಳಲ್ಲಿ ಒಂದಷ್ಟು ಗಿಡಗಳನ್ನು ತರುವರು. ಅವರು ಬರುವ ವೇಳೆಗಾಗಲೇ ಮನೆ ಶುಚಿಗೊಳಿಸಿರಬೇಕು. ನಂತರ ತಂಗಡಿಕೆ ಹೂವನ್ನು ಮನೆಮುಂದೆ ಮತ್ತು ಮನೆ ತುಂಬೆಲ್ಲಾ ಹರಡಬೇಕು. ಹಿಂದಿನ ಕಾಲದಲ್ಲಿ ಮನೆಯಲ್ಲೆಲ್ಲಾ ಬಂಗಾರ ಹರಡುತ್ತಿದ್ದರು. ಅದರ ಸಂಕೇತವಾಗಿ ದೀಪಾವಳಿಯಂದು ಬಂಗಾರದ ಬಣ್ಣದ ಹೂ ಹರಡಬೇಕು ಎಂಬುದು ಇಲ್ಲಿಯವರ ನಂಬಿಕೆ.

ಬೆನಕಪ್ಪ ತಯಾರಿಕೆ:

ADVERTISEMENT

ಹಿಂದೆ ಸಗಣಿಯಿಂದ ಮನೆ ಸಾರಿಸಲಾಗುತ್ತಿತ್ತು. ಪ್ರಸ್ತುತ ಆ ಪದ್ಧತಿಯಿಲ್ಲ. ಹಾಗಾಗಿ ಒಲೆ ಅಥವಾ ಅಂಗಳವನ್ನು ಸಗಣಿಯಿಂದ ಸಾರಿಸಲಾಗುತ್ತದೆ. ನಂತರ ಬೆನಕಪ್ಪನ ತಯಾರಿ ನಡೆಯುತ್ತದೆ. ಸಗಣಿಯನ್ನು ದುಂಡಾಗಿ ಮಾಡಿ, ಅದಕ್ಕೆ ರಾಗಿ ಕಡ್ಡಿ, ಜೋಳದ ತೆನೆ, ಉತ್ರಾಣಿ ಕಡ್ಡಿ, ತುಂಬೆ, ತಂಗಡಿಕೆ, ಬ್ರಹ್ಮದಂಡೆ, ಸಜ್ಜೆ, ನವಣೆ, ಮಾವಿನಸೊಪ್ಪು, ಅಣ್ಣೆಸೊಪ್ಪು ಸೇರಿದಂತೆ 5, 9, 11 ಅಥವಾ 21 ರೀತಿಯ ಬೆಳೆಗಳನ್ನು ಅದರಲ್ಲಿ ಜೋಡಿಸಲಾಗುತ್ತದೆ. ಈ ವರ್ಷದಲ್ಲಿ ಬೆಳೆದಿರುವ ಫಸಲು ಉತ್ತಮ ಇಳುವರಿ ನೀಡಲೆಂದು ಈ ರೀತಿ ಪೂಜಿಸಲಾಗುತ್ತದೆ. ಆ ಬೆನಕಗಳನ್ನು ಪ್ರತಿ ಬಾಗಿಲುಗಳ ಪಕ್ಕದಲ್ಲಿ ಹಾಗೂ ಒಲೆಯ ಪಕ್ಕದಲ್ಲಿಟ್ಟು ಪೂಜೆ ನೇರವೇರಿಸಲಾಗುವುದು.

ಲಕ್ಷ್ಮೀಪೂಜೆ:

ದೀಪಾವಳಿಯೆಂದರೇ ಅದೊಂದು ಲಕ್ಷ್ಮೀಯ ಹಬ್ಬದಂತೆ, ಪ್ರತಿ ಮನೆ ಹಾಗೂ ಅಂಗಡಿಗಳಲ್ಲಿಯೂ ಸಹ ಲಕ್ಷ್ಮೀ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಲಾಗುತ್ತದೆ. ದೀಪಾವಳಿಯ ಅಮಾವಾಸ್ಯೆ ದಿನದಂದು ಈ ಹಬ್ಬ ಆಚರಿಸಿದರೆ, ಲಕ್ಷ್ಮೀ ನೆಲೆಸುವಳು ಎಂಬುದು ಇಲ್ಲಿಯವರ ನಂಬಿಕೆ.

ಬೂದಿಯಲ್ಲಿ ರಂಗೋಲಿ:

ದೀಪಾವಳಿ ಹಬ್ಬದ ಮರುದಿನ ಪಟಾಕಿಯಲ್ಲಿನ ಬೂದಿಯಿಂದ ಹೊಸ್ತಿಲ ಮೇಲೆ ರಂಗೋಲಿ ಬಿಡಲಾಗುತ್ತದೆ. ಪೂಜಿಸಿದ ಎಲ್ಲಾ ಬೆನಕವನ್ನು ಒಗ್ಗೂಡಿಸಿ ಮನೆ ಮೇಲೆ ಇಡಲಾಗುವುದು. ಚೆನ್ನಾಗಿ ಮಳೆ–ಬೆಳೆ ಆಗಿ ಬದುಕು ಹಸನಾಗಲಿ ಎಂಬುದು ಈ ಆಚರಣೆ ಉದ್ದೇಶ. ಕ್ರಮೇಣ ದೀಪಾವಳಿಯ ಕೆಲ ಸಂಪ್ರದಾಯಗಳು ನಶಿಸುತ್ತಿವೆ. ಹಳ್ಳಿಗಳಲ್ಲಿಯೂ ಕೆಲ ಆಚರಣೆಗಳು ಮಾರ್ಪಾಡುಗೊಂಡಿವೆ. ಹಿಂದಿನ ಕಾಲದ ಹಬ್ಬ ಅಚರಣೆಗಿದ್ದ ಮಹತ್ವ ಕಡಿಮೆಯಾಗುತ್ತಿದೆ. ಕೆಲವೆಡೆ ಸಂಪ್ರದಾಯ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.