ADVERTISEMENT

ಕೊಟ್ಟ ಮಾತಿನಂತೆ ಜಾತಿ ಗಣತಿ ಬಿಡುಗಡೆಗೊಳಿಸಿ

ಮಹಾ ಒಕ್ಕೂಟದ ರಾಜ್ಯ ಘಟಕದ ಸಂಚಾಲಕ ಬಿ.ಟಿ.ಜಗದೀಶ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:33 IST
Last Updated 14 ಅಕ್ಟೋಬರ್ 2024, 16:33 IST
ಬಿ.ಟಿ.ಜಗದೀಶ್‌
ಬಿ.ಟಿ.ಜಗದೀಶ್‌   

ಚಿತ್ರದುರ್ಗ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಿಡುಗಡೆಗೆ ಒತ್ತಾಯಿಸಿ ಅ. 16ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುತ್ತಿದೆ. ಶೋಷಿತ ಸಮುದಾಯಗಳು ಭಾಗವಹಿಸಲಿವೆ ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಘಟಕದ ಸಂಚಾಲಕ ಬಿ.ಟಿ.ಜಗದೀಶ್‌ ತಿಳಿಸಿದರು.

‘ಎಲ್ಲ ಬಡವರ ಸ್ಥಿತಿಗತಿಗಳನ್ನು ಅವಲೋಕಿಸಿ ಸಮೀಕ್ಷೆ ನಡೆಸಲಾಗಿದೆ. ಆಕ್ಷೇಪಗಳಿಗೆ ಮುಕ್ತ ಆಹ್ವಾನ ಇರುವುದರಿಂದ ಅ. 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘1.60 ಲಕ್ಷ ಸಿಬ್ಬಂದಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಇದಕ್ಕಾಗಿ ₹ 159 ಕೋಟಿ ಖರ್ಚು ಮಾಡಲಾಗಿದೆ. ಜಾತಿಗಣತಿ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ವರದಿ ಬಹಿರಂಗವಾದರೆ ಜಾತಿಗಳ ವಸ್ತು ಸ್ಥಿತಿ ತಿಳಿಯಲಿದೆ. ಆಗ ಪೂರಕ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗ ಅವಕಾಶ ಮತ್ತು ಶೈಕ್ಷಣಿಕ ಸೌಲಭ್ಯ ಲಭಿಸಿಲ್ಲ. ಅಹಿಂದ ವರ್ಗಗಳಲ್ಲಿ ಅರಿವು ಮತ್ತು ಸಂಘಟನೆಯ ಕೊರತೆಯೇ ಮುಖ್ಯ ಕಾರಣವಾಗಿದೆ’ ಎಂದು ತಿಳಿಸಿದರು.

‘ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನ ಮರೆಯಬಾರದು. ಕೊಟ್ಟ ಮಾತಿನಂತೆ ಈಗ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿ ‘ನಾವು ನುಡಿದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್‍ನ ಎಲ್ಲ ಶಾಸಕರು ಸಿದ್ಧರಿರಬೇಕು. ಜಾತಿ ಜನಸಂಖ್ಯೆ ಎಷ್ಟಿದೆ ಎನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗುತ್ತದೆ. ಜತೆಗೆ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಇಲ್ಲವಾದರೆ ಸಮ ಸಮಾಜ ಕಟ್ಟಲು ಸಾಧ್ಯವಿಲ್ಲ’ ಎಂದು ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.

ಒಕ್ಕೂಟದ ಸಂಚಾಲಕ ಡಿ.ದುರುಗೇಶ್‌, ಪ್ರಧಾನ ಕಾರ್ಯದರ್ಶಿ ಎಚ್‌.ಮಂಜಪ್ಪ, ಕೆಪಿಸಿಸಿ ಕುಶಲಕರ್ಮಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಆರ್‌. ಪ್ರಸನ್ನ ಕುಮಾರ್‌, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಸಿ.ನಿರಂಜನ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.