ADVERTISEMENT

ಹೊಳಲ್ಕೆರೆ: ಕೆರೆಗಳಿಗಿಲ್ಲ ತಡೆಗೋಡೆ, ತಪ್ಪದ ಜೀವ ಹಾನಿ

ಹೆದ್ದಾರಿ ರಸ್ತೆಯಲ್ಲಿರುವ ಕೆರೆಗಳ ಏರಿಗೆ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಸಾಂತೇನಹಳ್ಳಿ ಸಂದೇಶ ಗೌಡ
Published 19 ನವೆಂಬರ್ 2024, 5:38 IST
Last Updated 19 ನವೆಂಬರ್ 2024, 5:38 IST
ಹೊಳಲ್ಕೆರೆಯ ಹಿರೇಕೆರೆ ಏರಿಯಲ್ಲಿ ತಡೆಗೋಡೆ ಇಲ್ಲದೆ ರಸ್ತೆಗೆ ಹೊಂದಿಕೊಂಡೇ ನೀರು ನಿಂತಿರುವ ದೃಶ್ಯ
ಹೊಳಲ್ಕೆರೆಯ ಹಿರೇಕೆರೆ ಏರಿಯಲ್ಲಿ ತಡೆಗೋಡೆ ಇಲ್ಲದೆ ರಸ್ತೆಗೆ ಹೊಂದಿಕೊಂಡೇ ನೀರು ನಿಂತಿರುವ ದೃಶ್ಯ   

ಹೊಳಲ್ಕೆರೆ: ಒಂದು ಕಡೆ ಪ್ರಪಾತ ಮತ್ತೊಂದು ಕಡೆ ಆಳ ನೀರು. ಇವೆರಡರ ಮಧ್ಯದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಇಲ್ಲವೇ ನೀರಿನಲ್ಲಿ ಬೀಳುವ ಆತಂಕ...

ಇದು ತಾಲ್ಲೂಕಿನಲ್ಲಿರುವ ಕೆರೆಗಳ ಏರಿಯ ಮೇಲಿರುವ ಮುಖ್ಯರಸ್ತೆಗಳಲ್ಲಿನ ಸಂಚಾರಿಸುವ ವಾಹನ ಸವಾರರ ಸ್ಥಿತಿ.

ಇಲ್ಲಿನ ದಾವಣಗೆರೆ ರಸ್ತೆಯಲ್ಲಿರುವ ಹಿರೇಕೆರೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಈ ಕೆರೆಯ ಏರಿ ಸುಮಾರು 2 ಕಿ.ಮೀ. ಉದ್ದವಿದೆ. ಕೆರೆಯ ಎಡಭಾಗದ ಏರಿಯ ಪಕ್ಕದಲ್ಲಿ ಪ್ರಪಾತವಿದ್ದು, ಅಲ್ಲಲ್ಲಿ ಹಳೆಯ ಕಾಲದ ಬಾವಿಗಳೂ ಇವೆ. ಬಲಕ್ಕೆ ಕೆರೆಯ ತುಂಬಾ ಅಪಾರ ಜಲರಾಶಿ ರಸ್ತೆಗೆ ತಗುಲುವಂತೆ ಇದೆ. ಈ ಕೆರೆಯ ಎರಡೂ ಕಡೆಗಳಲ್ಲಿ ತಡೆಗೋಡೆಯಾಗಲೀ, ಕಬ್ಬಿಣದ ಸುರಕ್ಷತಾ ಪಟ್ಟಿಯಾಗಲೀ ಇಲ್ಲ. ಕೆರೆ ಏರಿ ಅಂಕು ಡೊಂಕಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಚಾಲಕರು ತಮ್ಮ ವಾಹನವನ್ನು ಕೆರೆಗೆ ಬೀಳಿಸುವ ಆತಂಕ ಇದೆ. ರಾತ್ರಿ ವೇಳೆ ಕೆರೆ ಕಾಣಿಸುವುದೇ ಇಲ್ಲ. ಕೆರೆಯ ಸ್ಥಿತಿಗತಿ ಗೊತ್ತಿರದ ಅಪರಿಚತ ಚಾಲಕರಾದರೆ ಕೆರೆಗೆ ಬೀಳುವ ಸಾಧ್ಯತೆ ಹೆಚ್ಚು.

ADVERTISEMENT

ಎರಡು ವರ್ಷಗಳ ಕೆಳಗೆ ಈ ಕೆರೆ ಕೋಡಿ ಬಿದ್ದಾಗ ಬೆಳಗಿನ ಜಾವದ 3.30ರ ಸುಮಾರಿಗೆ ಕಾರೊಂದು ಕೆರೆಯಲ್ಲಿ ಬಿದ್ದಿತ್ತು. ಅದೃಷ್ಟವಶಾತ್‌ ಅಲ್ಲೇ ಮೀನಿನ ಬಲೆ ಬೀಸುತ್ತಿದ್ದ ಮೀನುಗಾರರ ತಂಡ ಕಾರಿನಲ್ಲಿದ್ದ 11 ಜನರನ್ನು ರಕ್ಷಿಸಿತ್ತು. ನಂತರದಲ್ಲಿ ಅನೇಕ ಬಾರಿ ವಾಹನಗಳು ಕೆರೆಗೆ ಬಿದ್ದಿವೆ.

ತಾಲ್ಲೂಕಿನ ಹೊಸದುರ್ಗ ರಸ್ತೆಯಲ್ಲಿರುವ ಬೊಮ್ಮನಕಟ್ಟೆ ಕೆರೆಯೂ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಕೆರೆ ಏರಿಯ ಮೇಲೆ ತಡೆಗೋಡೆ ಅಥವಾ ಸುರಕ್ಷಿತ ಕಬ್ಬಿಣದ ಪಟ್ಟಿಗಳಿಲ್ಲ. ಭಾನುವಾರವಷ್ಟೇ ಕೆರೆಗೆ ಕಾರು ಬಿದ್ದಿದ್ದರಿಂದ ಅತ್ತೆ, ಸೊಸೆ ಸಾವನ್ನಪ್ಪಿದರು. ಈ ಘಟನೆಗಿಂತ ಮೊದಲೂ ಹಲವು ವಾಹನಗಳು ಕೆರೆಗೆ ಬಿದ್ದಿವೆ. ಹಿಂದೊಮ್ಮೆ ಮದುವೆ ದಿಬ್ಬಣದ ಲಾರಿಯೊಂದು ಕೆರೆ ಏರಿ ಪಕ್ಕದ ಪ್ರಪಾತಕ್ಕೆ ಬಿದ್ದು, ಏಳೆಂಟು ಜನ ಮೃತಪಟ್ಟಿದ್ದರು.

ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ-13ರ ಪಕ್ಕದಲ್ಲಿರುವ ದುಮ್ಮಿ ಕೆರೆಗೂ ಯಾವುದೇ ತಡೆಗೋಡೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಕೆರೆ ಏರಿ ಹೆಚ್ಚು ಎತ್ತರವಿದ್ದು, ಕೆಳಗೆ ಬಿದ್ದರೆ ಭಾರಿ ಅನಾಹುತ ನಿಶ್ಚಿತ. ಗ್ರಾಮೀಣ ಭಾಗದಿಂದ ನಿತ್ಯ ಪಟ್ಟಣದ ಖಾಸಗಿ ಶಾಲೆಗಳಿಗೆ ಅನೇಕ ಬಸ್‌ಗಳು ಮಕ್ಕಳನ್ನು ಕರೆದುಕೊಂಡು ಬರುತ್ತವೆ. ಕೆರೆ ಏರಿಯ ಮೇಲೆ ತಡೆಗೋಡೆ ಇಲ್ಲದೆ ಆತಂಕದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಕೆರೆಯ ಸುತ್ತ ತಂತಿ ಬೇಲಿ ಇಲ್ಲದಿರುವುದರಿಂದ ಎಮ್ಮೆ, ದನ, ಕುರಿ, ಮೇಕೆ ಕಾಯುವವರು, ಬಟ್ಟೆ ತೊಳೆಯುವವರು ಕೆರೆಯೊಳಗೆ ಜಾರಿಬಿದ್ದು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಕೆರೆಗಳಿಗೆ ರಕ್ಷಣಾ ಗೋಡೆ ನಿರ್ಮಿಸುವ ಮೂಲಕ ಸಾರ್ವಜನಿಕರ ಹಿತ ಕಾಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಎಸ್.ಸಿದ್ದರಾಮಪ್ಪ

Highlights - ಕೆರೆ ಏರಿ ಮೇಲೆ ಹಾದು ಹೋಗಿರುವ ಹೆದ್ದಾರಿ ಎಚ್ಚರ ತಪ್ಪಿದರೆ ವಾಹನ ಕೆರೆಗೆ ಬೀಳುವ ಆತಂಕ ರಾತ್ರಿ ವೇಳೆಯಲ್ಲೇ ನಡೆಯುವ ಅನಾಹತ ಸರಣಿ

Quote - ಹೊಳಲ್ಕೆರೆ: ಒಂದು ಕಡೆ ಪ್ರಪಾತ ಮತ್ತೊಂದು ಕಡೆ ಆಳ ನೀರು. ಇವೆರಡರ ಮಧ್ಯದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಇಲ್ಲವೇ ನೀರಿನಲ್ಲಿ ಬೀಳುವ ಆತಂಕ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.