ADVERTISEMENT

ಚಿತ್ರದುರ್ಗ | ಶಿಥಿಲಾವಸ್ಥೆಯಲ್ಲಿ ಡಿಡಿಪಿಐ ಕಚೇರಿ; ಆತಂಕದಲ್ಲಿ ಸಿಬ್ಬಂದಿ

ಸಿಬ್ಬಂದಿಗೆ ಎದುರಾಗಿದೆ ಜೀವ ಭಯ; ಮಾಮೂಲಿಯಾಗಿದೆ ವಿದ್ಯುತ್‌ ಸ್ಪರ್ಶ

ಕೆ.ಪಿ.ಓಂಕಾರಮೂರ್ತಿ
Published 4 ನವೆಂಬರ್ 2024, 6:35 IST
Last Updated 4 ನವೆಂಬರ್ 2024, 6:35 IST
ಚಿತ್ರದುರ್ಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಶಿಥಿಲಗೊಂಡಿರುವುದು
ಚಿತ್ರದುರ್ಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಶಿಥಿಲಗೊಂಡಿರುವುದು   

ಚಿತ್ರದುರ್ಗ: ಪಾಚಿಗಟ್ಟಿರುವ ಗೋಡೆಗಳು, ನೀರು ಜಿನುಗುತ್ತಾ ಶಕ್ತಿ ಕಳೆದುಕೊಂಡಿರುವ ಛಾವಣಿ, ಮುರಿದ ಕಿಟಕಿಗಳು, ಕಟ್ಟಡ ತುಂಬಾ ಎಲ್ಲೆಂದರಲ್ಲಿ ಬೆಳೆದಿರುವ ಗಿಡಗಳು, ವಿದ್ಯುತ್‌ ಸ್ಪರ್ಶದ ಭಯ.. ಇದು ನೂರಾರು ಶಾಲೆಗಳ ಶಿಕ್ಷಕರು, ಸಿಬ್ಬಂದಿ ಪೊರೆಯುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಶಾಖೆಯ ಕಚೇರಿ (ಡಿಡಿಪಿಐ) ಕಟ್ಟಡದ ಸ್ಥಿತಿ..!

ನಗರದ ಜಿಲ್ಲಾಧಿಕಾರಿ ನಿವಾಸದ ಕೂಗಳತೆಯಲ್ಲಿರುವ ಜಾಗದಲ್ಲಿ ಬೃಹತ್ ಅರಳಿ ಮರದ ನೆರಳಿನಲ್ಲಿರುವ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ. ಇದರ ಆಯಸ್ಸನ್ನು ಕಚೇರಿ ಪ್ರವೇಶಿಸಲು ಹಾಕಿರುವ ಕಲ್ಲಿನ ಮೆಟ್ಟಿಲುಗಳೇ ಹೇಳುತ್ತವೆ.

ಕಚೇರಿಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿ ಸುಮಾರು ವರ್ಷಗಳೇ ಕಳೆದಿವೆ. ಅನೇಕ ಬಾರಿ ಚಿಕ್ಕಪುಟ್ಟ ದುರಸ್ತಿ ಕಾರ್ಯ ನಡೆಸಲಾಗಿದೆ. ಆದರೂ, ಅಲ್ಲಿನ ಸಿಬ್ಬಂದಿ ಆತಂಕದಲ್ಲೇ ನಿತ್ಯ ಕಾರ್ಯ ನಿರ್ವಹಿಸುವಂತಾಗಿದೆ.

ADVERTISEMENT

ಉಪನಿರ್ದೇಶಕರು, ಶಿಕ್ಷಣಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ, ಪತ್ರಾಂಕಿತ ಸಹಾಯಕರು, ವಿಷಯ ಪರಿವೀಕ್ಷಕರು, ಲೆಕ್ಕ ಅಧೀಕ್ಷಕರು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿ ಒಟ್ಟು 47 ಜನ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 14 ಜನ ಮಹಿಳೆಯರಿದ್ದಾರೆ.

ಕಟ್ಟಡದ ಮೇಲೆ ಮಳೆ ನೀರು ನಿಲ್ಲುವ ಕಾರಣ ಗಿಡಗಂಟೆ ಬೆಳೆದಿವೆ. ಇದರಿಂದ ನೀರು ಇಳಿದು ಗೋಡೆಗಳು ಶಿಥಿಲಾವಸ್ಥೆ ತಲುಪಿವೆ. ಛಾವಣಿಯಿಂದ ನೀರು ಜಿನುಗುವುದು, ಕಾಂಕ್ರೀಟ್‌, ಗಾರೆ ಉದುರುವುದು ಸಾಮಾನ್ಯವಾಗಿದೆ. ಇದರಿಂದ ಕಂಪ್ಯೂಟರ್‌ಗಳು, ದಾಖಲೆಗಳು ಹಾಳಾಗುತ್ತಿವೆ. ಇರುವುದರಲ್ಲಿ ಸಭಾಂಗಣ ಕೊಂಚ ಸುಸ್ಥಿತಿಯಲ್ಲಿದೆ. ಆದರೆ, ಮುಖ್ಯ ಕಟ್ಟಡದ ಗೋಡೆಗಳು ಶಿಥಿಲಗೊಂಡಿರುವುದರಿಂದ ಯಾವ ಕ್ಷಣದಲ್ಲಿಯಾದರೂ ಅಪಾಯ ಖಚಿತ ಎನ್ನುವಂತಾಗಿದೆ.

‘ಕಚೇರಿಯ ಕಾರಿಡಾರ್‌ನಲ್ಲಿ ಹಾಕಿರುವ ಕಬ್ಬಿಣದ ಗ್ರಿಲ್‌ಗಳನ್ನು ಮುಟ್ಟಬೇಡಿ ವಿದ್ಯುತ್ ಸ್ಪರ್ಶಿಸುತ್ತದೆ’ ಎಂದು ಸಿಬ್ಬಂದಿಯು ಕಚೇರಿಗೆ ಬರುವವರಿಗೆ ಹೇಳುವಷ್ಟರ ಮಟ್ಟಕ್ಕೆ ಕಟ್ಟಡ ದುಃಸ್ಥಿತಿ ತಲುಪಿದೆ.

ಪ್ರತಿ ಕೊಠಡಿಯಲ್ಲೂ ಗೋಡೆಯಿಂದ ದೂರದಲ್ಲೇ ತಮ್ಮ  ಟೇಬಲ್‌, ಕುರ್ಚಿಗಳನ್ನು ಹಾಕಿಕೊಂಡು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪಾಚಿಯ ವಾಸನೆಗೆ ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 47 ಸಿಬ್ಬಂದಿಗೂ ಇರುವುದು ನಿರ್ವಹಣೆಯಿಲ್ಲದ ಎರಡು ಶೌಚಾಲಯ. ನೀರಿನ ಸಂಪರ್ಕ ಇದ್ದೂ ಇಲ್ಲದಂತಿದೆ. ಇದರಿಂದ ಮಹಿಳಾ ಸಿಬ್ಬಂದಿ ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ.

ಶುದ್ಧ ಕುಡಿಯವ ನೀರಿನ ಘಟಕ ಹಾಳಾಗಿ ಮೂಲೆ ಸೇರಿದ್ದು, ಸಿಬ್ಬಂದಿ ಮನೆಯಿಂದಲೇ ಕುಡಿಯುವ ನೀರು ತರುವ ಸ್ಥಿತಿಯಿದೆ. ಮುಖ್ಯ ಕಟ್ಟಡದ ಹಿಂಭಾಗದಲ್ಲಿರುವ ಕಟ್ಟಡಗಳ ಸ್ಥಿತಿ ಸಹ ಭಿನ್ನವಾಗಿಲ್ಲ.

ಚಿತ್ರದುರ್ಗ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯು ನಿರ್ವಹಣೆ ಕಾರಣಕ್ಕೆ ಕೊಂಚ ಸುಸ್ಥಿತಿಯಲ್ಲಿದೆ. ಹೊಳಲ್ಕೆರೆ, ಹಿರಿಯೂರು ಕಚೇರಿಗಳು ಸುಸಜ್ಜಿತವಾಗಿದ್ದು, ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗದಲ್ಲಿ ಸಮಸ್ಯೆಯ ಗೂಡಾಗಿವೆ.

ಉಪನಿರ್ದೇಶಕರ ಕಟ್ಟಡದಲ್ಲಿ ಮಳೆ ನೀರು ಗೋಡೆಯ ಮೇಲೆ ಇಳಿದಿರುವುದು  ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಉಪನಿರ್ದೇಶಕರ ಕಟ್ಟಡದಲ್ಲಿ ಛಾವಣಿಯ ಕಾಂಕ್ರಿಟ್ ಬಿದ್ದಿರುವುದು
ಮೊಳಕಾಲ್ಮುರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಥಿಲಗೊಂಡಿರುವುದು
ಹೊಸದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಹಂದಿಗಳಿರುವುದು

ಬುನಾದಿಗೆ ಸೀಮಿತವಾದ ಹೊಸ ಕಟ್ಟಡ

ಮೊಳಕಾಲ್ಮುರು: ‘ಒಮದು ದೇಶದ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ. ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂಬ ಮಾತುಗಳು ಎಲ್ಲರ ಬಾಯಲ್ಲೂ ಸರ್ವೇಸಾಮಾನ್ಯ. ಆದರೆ ಶಿಕ್ಷಣ ವ್ಯವಸ್ಥೆಯನ್ನು ತಾಲ್ಲೂಕಿನಲ್ಲಿ ನಿರ್ವಹಿಸುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೇ ದುಃಸ್ಥಿತಿ ತಲುಪಿದೆ. ಕಚೇರಿಗೆ ಸ್ವಂತ ಕಟ್ಟಡ ಇದ್ದೂ ಇಲ್ಲದಂತಾಗಿದೆ. ಮಾದರಿ ಬಾಲಕಿಯರ ಶಾಲೆ ಆವರಣದಲ್ಲಿನ ಹಳೆ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಣೆಯಾಗುತ್ತಿದೆ. ಛಾವಣಿ ಸೋರುವ ಕಾರಣ ಹಲವು ಸಲ ದುರಸ್ತಿ ಕಂಡಿದೆ. 10ಕ್ಕೂ ಹೆಚ್ಚು ಸಿಬ್ಬಂದಿ ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಣ್ಣ ಜಾಗದಲ್ಲೇ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಭಾಂಗಣವೂ ಕಿರಿದಾಗಿದ್ದು ಹತ್ತಾರು ಜನರು ಶಿಕ್ಷಕರು ಭೇಟಿಗೆ ಹೋದರೆ ಕೂರಲು ಸ್ಥಳವಿಲ್ಲದೆ ನಿಂತು ಮಾತನಾಡಬೇಕಿದೆ. ಕಸ್ತೂರಬಾ ಬಾಲಿಕಾ ಶಾಲೆಯ ಪಕ್ಕದಲ್ಲಿ 2022ರಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು  ಭೂಸೇನಾ ನಿಗಮ ನಿರ್ಮಾಣದ ಹೊಣೆ ಹೊತ್ತಿದೆ. ಬಿಡುಗಡೆಯಾದ ಅನುದಾನದಲ್ಲಿ ಬುನಾದಿ ಮಾತ್ರ ನಿರ್ಮಿಸಲಾಗಿದೆ. ನಂತರ ಅನುದಾನ ಮಂಜೂರಾಗದ ಪರಿಣಾಮ ಕಾಮಗಾರಿ ಸ್ಥಗಿತವಾಗಿದೆ. ಅನುದಾನ ನೀಡುವಂತೆ ಶಾಸಕ ಎನ್‌.ವೈ. ಗೋಪಾಲಕೃಷ್ಣ ಹಾಗೂ ಡಿಡಿಪಿಐ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಇಒ ನಿರ್ಮಲಾದೇವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಗಡಿ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೊಳಕಾಲ್ಮುರು ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಶೇ 30ರಷ್ಟು ಇದೆ. ಅತಿಥಿ ಶಿಕ್ಷಕರ ಮೂಲಕ ಬೋಧನೆ ಮಾಡಿಸಲಾಗುತ್ತಿದೆ. ಶಿಕ್ಷಣ ಅವ್ಯವಸ್ಥೆಗೆ ಬಿಇಒ ಕಚೇರಿ ಸ್ಥಿತಿಗತಿ ಹಿಡಿದ ಕನ್ನಡಿಯಾಗಿದೆ ಎಂಬ ಆರೋಪವೂ ದಟ್ಟವಾಗಿದೆ.

-ಕೊಂಡ್ಲಹಳ್ಳಿ ಜಯಪ್ರಕಾಶ

ಎದುರಾಗಿದೆ ನಿರ್ವಹಣೆ ಕೊರತೆ

ಹೊಸದುರ್ಗ: ಪಟ್ಟಣದಲ್ಲಿ ನಿರ್ಮಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೇಲ್ನೋಟಕ್ಕೆ ಸುಸಜ್ಜಿತವಾಗಿದೆ. ಆದರೆ ಬಸಿ ನೀರಿನಿಂದಾಗಿ (ಸೀಪೇಜ್) ವರ್ಷದಿಂದ ವರ್ಷಕ್ಕೆ ಶಿಥಿಲಾವಸ್ಥೆಗೆ ತಲುಪುತ್ತಿದೆ. 2017ರಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆಗೆ ಪ್ರವೇಶ ದ್ವಾರದ ಛಾವಣಿ ಸಾಕ್ಷಿಯಾಗಿದೆ. ಕಚೇರಿಗೆ ತಲುಪಲು ಸುಸಜ್ಜಿತ ರಸ್ತೆಯಿಲ್ಲವಾಗಿದೆ. ಮಳೆ ಬಂದರೆ ಇಡೀ ಆವರಣ ಸಂಪೂರ್ಣ ಕೆಸರುಮಯ ಆಗುತ್ತದೆ. ಕಟ್ಟಡ ತಗ್ಗಿನಲ್ಲಿರುವ ಕಾರಣ ಸುತ್ತಲೂ ಬಸಿನೀರು ಆವರಿಸಿದ್ದು ಪಾಚಿಯಂತೂ ಸಾಮಾನ್ಯವಾಗಿದೆ. ಕಚೇರಿ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಹುಲುಸಾಗಿ ಗಿಡಗಳು ಬೆಳೆದಿರುವ ಕಾರಣ ಹಂದಿಗಳ ಆವಾಸ ಸ್ಥಾನವಾಗಿದೆ. ಕಾಂಪೌಂಡ್ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ‘ಮಳೆ ನಿಂತ ನಂತರ ನೀರು ಹೋಗಲು ಕಾಲುವೆ ಮಾಡಿಸಲಾಗುತ್ತದೆ. ಮಣ್ಣು ಹಾಕಿಸಿ ಆವರಣವನ್ನು ಎತ್ತರ ಮಾಡಲು ಕ್ರಮ ವಹಿಸಲಾಗಿದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್‌ ಮೋಸಿನ್‌.

-ಶ್ವೇತಾ.ಜಿ

ಶೌಚಾಲಯಕ್ಕಿಲ್ಲ ನೀರಿನ ಸಂಪರ್ಕ

ಹೊಳಲ್ಕೆರೆ: ಪಟ್ಟಣದ ಹೈಟೆಕ್ ಶಾಲೆಯ ಎರಡನೇ ಮಹಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಿರ್ಮಿಸಲಾಗಿದೆ. ಆದರೆ ಶೌಚಾಲಯಕ್ಕೆ ನಲ್ಲಿಯ ಸಂಪರ್ಕವಿಲ್ಲದೆ ಸಿಬ್ಬಂದಿ ನೀರಿಲ್ಲದೇ ಸಮಸ್ಯೆಯು ಎದುರಿಸುವಂತಾಗಿದೆ. ಪಟ್ಟಣದ ಮುಖ್ಯವೃತ್ತದಲ್ಲಿದ್ದ ಹಳೆಯ ಕಚೇರಿಯನ್ನು ನೆಲಸಮಗೊಳಿಸಿ ಪಕ್ಕದಲ್ಲಿನ ಸರ್ಕಾರಿ ಶಾಲೆಯ ಮೇಲೆ ನೂತನ ಕಚೇರಿ ನಿರ್ಮಿಸಲಾಗಿದೆ. ಕಚೇರಿ ನಿರ್ಮಾಣಕ್ಕೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರಾಭಿವೃದ್ಧಿ ಅಡಿ ₹ 1 ಕೋಟಿ ಅನುದಾನ ನೀಡಿದ್ದಾರೆ. ಬಿಇಒ ಕೊಠಡಿ ಸೇರಿದಂತೆ ಕಚೇರಿ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಬೇಕಿದೆ. ‘ಕಚೇರಿಯಲ್ಲಿ ಎಲ್ಲ ಸೌಲಭ್ಯಗಳಿವೆ. ಹೊಸ ತಂತ್ರಜ್ಞಾನ ಆಧಾರಿತ ಇ-ಆಫೀಸ್ ಆರಂಭಿಸಬೇಕಿದೆ. ಮುಖ್ಯವೃತ್ತದಲ್ಲೇ ಕಚೇರಿ ಇರುವುದರಿಂದ ಶಿಕ್ಷಕರಿಗೆ ಬಂದು ಹೋಗಲು ಅನುಕೂಲ ಇದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಶ್ರೀನಿವಾಸ್‌.

-ಸಾಂತೇನಹಳ್ಳಿ ಸಂದೇಶ್ ಗೌಡ

ಅಲ್ಪ ಮಳೆಗೂ ಸೋರುತ್ತಿದೆ ಕಟ್ಟಡ

ಚಳ್ಳಕೆರೆ: ಶಿಕ್ಷಣ ಕ್ಷೇತ್ರದ ಆಡಳಿತ ಚಟುವಟಿಕೆ ಸಲುವಾಗಿ 1908ರಲ್ಲಿ ನಗರದಲ್ಲಿ ಕಲ್ಲು ಮತ್ತು ಸುಣ್ಣದ ಗಾರೆಯಿಂದ ನಿರ್ಮಿಸಿದ್ದ ತಾಲ್ಲೂಕು ಶಿಕ್ಷಣಾಡಳಿತದ ಕಟ್ಟಡಕ್ಕೆ ಈಗ 116 ವರ್ಷ! ಶತಮಾನ ದಾಟಿದ ಕಟ್ಟಡದಲ್ಲಿ ಶಿಕ್ಷಣಾಧಿಕಾರಿ ಅಧೀಕ್ಷಕರು ವ್ಯವಸ್ಥಾಪಕರು ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 7ರಿಂದ 8 ಕೊಠಡಿಗಳಲ್ಲಿ ಆಡಳಿತ ಕಾರ್ಯ ಚಟುವಟಿಕೆಗಳು ಜರುಗುತ್ತಿವೆ. ಕಚೇರಿ ಕಟ್ಟಡದ ಗೋಡೆ ಭದ್ರವಿದ್ದರೂ ಛಾವಣಿಯ ಕೆಂಪು ಹೆಂಚುಗಳು ಒಡೆದಿವೆ. ಇದರಿಂದ ಅಲ್ಪ ಪ್ರಮಾಣದ ಮಳೆಗೂ ಕಟ್ಟಡ ಸೋರುತ್ತಿದೆ. ಇಟ್ಟಿಗೆ ಮತ್ತು ಸುಣ್ಣದ ಗಾರೆಯಿಂದ ಕಟ್ಟಡದ ಮೇಲ್ಭಾಗದ 5-6 ಕಡೆಗೆ 3-4 ಅಡಿ ಎತ್ತರದಲ್ಲಿ ನಿರ್ಮಿಸಿರುವ ಅಲಂಕಾರಿಕ ಕಂಬಗಳು ಮುರಿದು ಬಿದ್ದಿವೆ. ಗೋಡೆಗೆ ಹಾಕಿದ್ದ ಸುಣ್ಣದ ಗಾರೆ ಸತ್ವ ಕಳೆದುಕೊಂಡು ಉದುರಿ ಬೀಳುತ್ತಿದೆ. ‘ಹಲವು ಬಾರಿ ಸುಣ್ಣ–ಬಣ್ಣ ಬಳಿಸುವ ಮೂಲಕ ಕಟ್ಟಡದ ಮೂಲ ಸ್ವರೂಪ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಕಟ್ಟಡ ಕಿರಿದಾಗಿರುವ ಕಾರಣ ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಮಳೆ ಬಂದಾಗ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸುತ್ತಾರೆ. ಹೈಟೆಕ್ ಕಟ್ಟಡ ನಿರ್ಮಾಣಕ್ಕೆ ಶಾಸಕರ ಗಮನಕ್ಕೆ ತರಲಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌. ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

-ಶಿವಗಂಗಾ ಚಿತ್ತಯ್ಯ

ಡಿಡಿಪಿಐ ಕಚೇರಿಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ತಾತ್ಕಾಲಿಕ ದುರಸ್ತಿಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.
- ಎಂ.ಆರ್. ಮಂಜುನಾಥ್ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.