ADVERTISEMENT

ಭದ್ರಾ ಕನಸಿಗೆ ಆಘಾತ ನೀಡಿದ ಕೇಂದ್ರ ಸರ್ಕಾರ: ನಿರ್ಮಲಾ ರಾಜೀನಾಮೆಗೆ ಒತ್ತಾಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆಗೆ ಹೋರಾಟ ಸಮಿತಿ ರಾಜೀನಾಮೆಗೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:54 IST
Last Updated 11 ಸೆಪ್ಟೆಂಬರ್ 2024, 15:54 IST
<div class="paragraphs"><p>ಭದ್ರಾ ಮೇಲ್ದಂಡೆ ಯೋಜನೆ</p></div>

ಭದ್ರಾ ಮೇಲ್ದಂಡೆ ಯೋಜನೆ

   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ. ಈಗ ಅನುದಾನಕ್ಕೆ ಷರತ್ತು ವಿಧಿಸುವ ಮೂಲಕ ಈ ಭಾಗದ ಜನರ ನೀರಾವರಿ ಕನಸಿಗೆ ಆಘಾತ ನೀಡಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಭದ್ರಾ ಮೇಲ್ದಂಡೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಒತ್ತಾಯಿಸಿದೆ.

‘ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಯೋಜನೆಯ ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ವಿವಿರ ನೀಡಬೇಕು ಎಂದು ಕೇಳಿರುವುದು ಖಂಡನೀಯ. ರಾಜಕಾರಣಕ್ಕಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಮಲತಾಯಿ ಧೋರಣೆ ತಾಳುತ್ತಿದ್ದು, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಜೆ.ಯಾದವ ರೆಡ್ಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಯಿತು. ಜಲ ಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಆಸಕ್ತಿ ವಹಿಸಿ ಎಲ್ಲಾ ಅಡಚಣೆ ನಿವಾರಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಮಾಡಲು ನಿರಾಸಕ್ತಿ ತೋರುತ್ತಿರುವುದು ಎಷ್ಟು ಸರಿ, ಇಂತಹ ರಾಜಕಾರಣ ಬೇಕಾ’ ಎಂದು ಪ್ರಶ್ನಿಸಿದರು.

ADVERTISEMENT

‘ಎಲ್ಲಾ ಪ್ರಕ್ರಿಯೆಗಳು ವೇಗವಾಗಿ ನಡೆಯಲು ಹಿಂದಿನ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾರಣಕರ್ತರಾಗಿದ್ದರು. ತಾವೇ ಯೋಜನೆ ತಯಾರಿಸಿ ಕೇಂದ್ರದ ನೆರವಿಗಾಗಿ ಶ್ರಮಿಸಿದ್ದ ರಾಜ್ಯದ ಬಿಜೆಪಿ ಸಂಸದರು ಈಗ ಕೇಂದ್ರದಿಂದ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಮೌನ ವಹಿಸಿರುವುದು ಸರಿಯಲ್ಲ’ ಎಂದರು.

‘ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಬರೆದ ಪತ್ರದ ಅನುಸಾರ ಕೇಂದ್ರದಿಂದ ಬರಬೇಕಾದ ₹ 5,300 ಕೋಟಿ ಅನುದಾನದಲ್ಲಿ ₹ 1,800 ಕೋಟಿ ಖೋತವಾಗುತ್ತದೆ. ಮಾರ್ಚ್ 2022ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ ₹ 5,300 ಕೋಟಿ ಕೇಂದ್ರದಿಂದ ಲಭ್ಯವಾಗಬೇಕಿತ್ತು’ ಎಂದು ಹೋರಾಟ ಸಮಿತಿಯ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದರು.

‘₹ 14,697 ಕೋಟಿ ಯೋಜನಾ ವೆಚ್ಚದಲ್ಲಿ ₹ 5,528 ಕೋಟಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ ₹ 9,168 ಕೋಟಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ 60ರಷ್ಟು ಮೊತ್ತ ಕೊಡಬೇಕಾಗಿದ್ದು ಅದನ್ನು ₹ 5,300 ಕೋಟಿಗೆ ಸೀಮಿತಗೊಳಿಸಲಾಗಿತ್ತು’ ಎಂದರು.

‘ಸಚಿವಾಲಯದ ಕಾರ್ಯದರ್ಶಿ ಪತ್ರದ ಪ್ರಕಾರ ಅನುದಾನ ಖೋತ ಗ್ಯಾರಂಟಿ. ಕಳೆದ ಮಾರ್ಚ್ 2024ರವರೆಗೆ ಭದ್ರಾ ಮೇಲ್ದಂಡೆಗೆ ₹ 8,785 ಕೋಟಿ ಖರ್ಚು ಮಾಡಲಾಗಿದ್ದು, ₹ 5,910 ಕೋಟಿ ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ 60ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದ್ದಲ್ಲಿ ₹ 3,546 ಕೋಟಿ ಮಾತ್ರ ಲಭ್ಯವಾಗುತ್ತದೆ. ಇದೇ ರೀತಿ ಮುಂದುವರಿದರೆ ಕೇಂದ್ರ ಕೊಡಬೇಕಾದ ಅನುದಾನ ₹ 2,000 ಕೋಟಿಗೆ ನಿಂತರೂ ಅನುಮಾನವಿಲ್ಲ’ ಎಂದು ಹೇಳಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.