ADVERTISEMENT

ಜನಸಂಖ್ಯೆಗೆ ಅನುಗುಣವಾಗಿ ಗ್ರಂಥಾಲಯ ಅವಶ್ಯಕ- ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 5:44 IST
Last Updated 31 ಡಿಸೆಂಬರ್ 2021, 5:44 IST
ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ ನಿರ್ಮಿಸಿರುವ ಶಾಖಾ ಗ್ರಂಥಾಲಯ ನೂತನ ಕಟ್ಟಡವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬುಧವಾರ ಉದ್ಘಾಟಿಸಿದರು
ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ ನಿರ್ಮಿಸಿರುವ ಶಾಖಾ ಗ್ರಂಥಾಲಯ ನೂತನ ಕಟ್ಟಡವನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬುಧವಾರ ಉದ್ಘಾಟಿಸಿದರು   

ಚಿತ್ರದುರ್ಗ: ‘ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅದಕ್ಕೆ ಅನುಗುಣವಾಗಿ ಗ್ರಂಥಾಲಯಗಳ ಅಗತ್ಯವಿದೆ. ಸಾರ್ವಜನಿಕರಿಂದ ಬೇಡಿಕೆ ಬಂದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯದಿಂದ ಧವಳಗಿರಿ ಬಡಾವಣೆಯ ಜ್ಞಾನ ಭಾರತಿ ವಿದ್ಯಾಮಂದಿರ ಹಿಂಭಾಗ ನಿರ್ಮಿಸಿರುವ ₹ 50 ಲಕ್ಷ ವೆಚ್ಚದ ‘ಶಾಖಾ ಗ್ರಂಥಾಲಯ ನೂತನ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಕೇಂದ್ರ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

‘ನಾಲ್ಕೈದು ಬಡಾವಣೆಗಳಿಗೆ ಒಂದರಂತೆ ಗ್ರಂಥಾಲಯ ಇದ್ದಲ್ಲಿ ಆ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಯುವಸಮೂಹ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಗ್ರಂಥಾಲಯಗಳಲ್ಲಿ ಹೆಚ್ಚು ಸಮಯ ಅಧ್ಯಯನ ಮಾಡುತ್ತಿದ್ದಾರೆ. ಈ ಕಾರಣದಿಂದ ಜ್ಞಾನ ಭಂಡಾರದ ಗ್ರಂಥಾಲಯ ಅತ್ಯವಶ್ಯಕ’ ಎಂದರು.

ADVERTISEMENT

‘ಗ್ರಂಥಾಲಯಗಳ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಡಿಮೆ ದರದಲ್ಲಿ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರ ಪುಸ್ತಕಗಳ ಖರೀದಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿದೆ. ಇದರ ಉಪಯೋಗ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಅನುರಾಧ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಬಿ. ರಾಜಶೇಖರಪ್ಪ, ನಗರಸಭೆ ಸದಸ್ಯರಾದ ಎಸ್.ಸಿ. ತಾರಕೇಶ್ವರಿ, ಲಕ್ಷ್ಮಮ್ಮ, ಹರೀಶ್, ಸುರೇಶ್, ವೆಂಟಕೇಶ್, ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಪ್ರತಾಪ್ ಜೋಗಿ, ಎನ್.ಜಿ. ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ, ಲೆಕ್ಕಾಧಿಕಾರಿ ಶ್ರೀನಿವಾಸ್, ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಅವರೂ ಈ ಸಂದರ್ಭದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.