ADVERTISEMENT

ಧರ್ಮಪುರ: ಹೊಸ ಪ್ರಯೋಗಗಳ ಪ್ರಗತಿಪರ ರೈತ ಅರುಣ್‌ ಕುಮಾರ್‌

15 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ; ಹೊರರಾಜ್ಯಗಳಿಗೂ ರಫ್ತು

ವಿ.ವೀರಣ್ಣ
Published 14 ಆಗಸ್ಟ್ 2024, 6:52 IST
Last Updated 14 ಆಗಸ್ಟ್ 2024, 6:52 IST
ಧರ್ಮಪುರ ಸಮೀಪದ ಇಕ್ಕನೂರಿನಲ್ಲಿರುವ ತೋಟದಲ್ಲಿ ಬೆಳೆದಿರುವ ಡ್ರ್ಯಾಗನ್ ಫ್ರೂಟ್‌
ಧರ್ಮಪುರ ಸಮೀಪದ ಇಕ್ಕನೂರಿನಲ್ಲಿರುವ ತೋಟದಲ್ಲಿ ಬೆಳೆದಿರುವ ಡ್ರ್ಯಾಗನ್ ಫ್ರೂಟ್‌   

ಧರ್ಮಪುರ: ಕೃಷಿ ಕ್ಷೇತ್ರದಲ್ಲಿ ಏನಾನ್ನಾದರೂ ಸಾಧಿಸಬೇಕೆಂಬ ಉತ್ಸಾಹದಿಂದ ಸಮೀಪದ ಇಕ್ಕನೂರು ಬಳಿ ಕೃಷಿ ಆರಂಭಿಸಿ, ಹೊಸ ಹೊಸ ಪ್ರಯೋಗಗಳನ್ನು ನಡೆಸಿರುವ ಬೆಂಗಳೂರಿನ ಅರುಣ್ ಕುಮಾರ್ ಇತರ ರೈತರಿಗೂ ಪ್ರೇರಣೆಯಾಗಿದ್ದಾರೆ.

ಮೂಲತಃ ಬೆಂಗಳೂರಿನವರಾದ ಅರುಣ್ ಕುಮಾರ್ ಎಂಬಿಎ ಪದವೀಧರ. ಖಾಸಗಿ ಸಂಸ್ಥೆಯಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದರು. ಆದರೆ, ಕೊರೊನಾ ಸಂದರ್ಭದಲ್ಲಿ ಆದ ಬದಲಾವಣೆಗಳಿಂದ ಬೇಸತ್ತ ಅವರು ಕೃಷಿಯತ್ತ ತಮ್ಮ ಚಿತ್ತ ಹೊರಳಿಸಿದರು. ಕೆಲಸ ತೊರೆದು ಇಕ್ಕನೂರು ಸಮೀಪ 25 ಎಕರೆ ಜಮೀನು ಕೊಂಡು ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿ ಈಗ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ.

25 ಎಕರೆ ಕೃಷಿ ಭೂಮಿ ಪೈಕಿ 15 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್, 8 ಎಕರೆಯಲ್ಲಿ ವಿವಿಧ ತಳಿಯ 540 ಮಾವು ಮತ್ತು 2 ಎಕರೆಯಲ್ಲಿ 2,700 ಶ್ರೀಗಂಧ ಗಿಡ ಬೆಳೆಸಿದ್ದಾರೆ. 2019-20ರಲ್ಲಿ ಮಹಾರಾಷ್ಟ್ರದ ಪಂಡರಪುರದಿಂದ ಡ್ರ್ಯಾಗನ್ ಸಸಿಗಳನ್ನು ತಂದು 12 ಮತ್ತು 8ರ ದಾಯದಲ್ಲಿ ಐದಾರು ಅಡಿ ಎತ್ತರದ ಕಲ್ಲುಕಂಬ ನೆಟ್ಟು, ಒಂದೊಂದು ಕಂಬಕ್ಕೆ ನಾಲ್ಕು ಡ್ರ್ಯಾಗನ್ ಸಸಿ ನಾಟಿ ಮಾಡಲಾಗಿತ್ತು. ಮೂರು ವರ್ಷಗಳಿಂದ ಬೆಳೆ ಪ್ರಾರಂಭವಾಗಿದ್ದು, ಉತ್ಕೃಷ್ಟ ಫಸಲು ಬರಲಾರಂಭಿಸಿದೆ. ಮೊದಲ ವರ್ಷ ₹ 53 ಲಕ್ಷ, ಎರಡನೇ ವರ್ಷ ₹ 1.46 ಕೋಟಿ, ಪ್ರಸಕ್ತ ವರ್ಷದಲ್ಲಿ ₹ 1.50 ಕೋಟಿ ಆದಾಯ ಬಂದಿದೆ ಎಂದು ಅರುಣ್ ಕುಮಾರ್ ವಿವರಿಸಿದರು.

ADVERTISEMENT

ಕೋಳಿ ಗೊಬ್ಬರ ಬಳಕೆ: ಬೆಳೆಗೆ ರಾಸಾಯನಿಕ ಗೊಬ್ಬರ ಮತ್ತು ಔಷಧವನ್ನು ಮಿತವಾಗಿ ಬಳಸುವ ಇವರು, ಪ್ರತಿವರ್ಷ ಸಾವಯವ ಗೊಬ್ಬರ, ಜೀವಾಮೃತ ಮತ್ತು ಕೋಳಿ ಗೊಬ್ಬರ ಬಳಸುತ್ತಾರೆ. ಇದರಿಂದ ಬೆಳೆಗೆ ರೋಗವೂ ಬರುವುದಿಲ್ಲ. ಉತ್ಕೃಷ್ಟ ಬೆಳೆಯನ್ನೂ ಬೆಳೆಯುತ್ತಿದ್ದೇನೆ ಎಂದರು.

ಡ್ರ್ಯಾಗನ್ ಫ್ರೂಟ್‌ಗೆ ಹೆಚ್ಚು ಬೇಡಿಕೆ ಇದ್ದು ಬೆಂಗಳೂರು ಮತ್ತು ಹೊರರಾಜ್ಯಗಳಿಂದ ಖರೀದಿದಾರರು ತೋಟಕ್ಕೆ ಬಂದು ಖರೀದಿಸುತ್ತಾರೆ. ಬೆಂಗಳೂರಿನಲ್ಲಿ ಪ್ರತಿ ಕೆ.ಜಿ.ಗೆ ಸರಾಸರಿ ₹ 100ರಿಂದ ₹ 120 ದರವಿದೆ. ನಮ್ಮ ಹಣ್ಣು ಮೈಸೂರು, ಬೆಂಗಳೂರು, ಚೆನ್ನೈ, ಗೋವಾ, ಮುಂಬೈ, ಹೈದರಾಬಾದ್, ಕೇರಳ, ಮಾಲ್ಡೀವ್ಸ್ ಮತ್ತಿತರ ಕಡೆ ರಫ್ತಾಗುತ್ತದೆ.

ಪ್ರತಿ ನಿತ್ಯ 30ರಿಂದ 35 ಕೂಲಿ ಕಾರ್ಮಿರಿಗೆ ಉದ್ಯೋಗ ನೀಡಿರುವ ಅರುಣ್ ಕುಮಾರ್ ಮಾವು, ಶ್ರೀಗಂಧ ಬೆಳೆಯುವುದರ ಜತೆ ಕುರಿ ಸಾಕಾಣಿಕೆಯನ್ನೂ ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಕುರಿ ಶೆಡ್ ಪ್ರಾರಂಭಿಸಿ ತಮ್ಮ 25 ಎಕರೆಯ ಜಮೀನಿನ ಸುತ್ತಲೂ ಮುಳ್ಳಿನ ತಂತಿ ಬೇಲಿಯನ್ನು ಮಾಡಿಸಿದ್ದಾರೆ. ಇದರಿಂದ ಕಳ್ಳರು, ಕಾಡು ಪ್ರಾಣಿಗಳ ಕಾಟವೂ ಇಲ್ಲ ಎಂದು ಹೇಳಿದರು.

ಸಂಪರ್ಕ ಸಂಖ್ಯೆ: 8150835090

ಚಿತ್ರಸುದ್ದಿ:ಡ್ರ್ಯಾಗನ್ ಪ್ರೂಟ್ ಹಣ್ಣುಗಳ ರಾಶಿಯೊಂದಿಗೆ ಅರುಣ್ ಕುಮಾರ್
ಡ್ರ್ಯಾಗನ್ ಫ್ರೂಟ್‌ ರಾಶಿಯೊಂದಿಗೆ ಅರುಣ್ ಕುಮಾರ್

‘ಶೀಥಲೀಕರಣ ಘಟಕ ಪ್ರಾರಂಭಿಸಿ’

ಡ್ರ್ಯಾಗನ್ ಫ್ರೂಟ್ ಅನ್ನು ಬಹಳ ದಿನಗಳವರೆಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಮಧ್ಯವರ್ತಿಗಳು ರೈತರ ಬಳಿ ಕಡಿಮೆ ಬೆಲೆಗೆ ಕೊಂಡು ನಂತರ ಅಧಿಕ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಡ್ರ್ಯಾಗನ್ ಫ್ರೂಟ್ ಅನ್ನು ಹೆಚ್ಚು ಬೆಳೆಯುವ ಹಿರಿಯೂರು ಮತ್ತು ಶಿರಾದಲ್ಲಿ ಶೀಥಲೀಕರಣ ಘಟಕ ಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಎಕ್ಸಾಟಿಕ್ ಫ್ರೂಟ್ ಫಾರ್ಮರ್ ಅಸೋಸಿಯೇಷನ್‌ನ (ಕೆಇಎಫ್ಎ) ನಿರ್ದೇಶಕರೂ ಆಗಿರುವ ಅರುಣ್‌ಕುಮಾರ್ ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.