ಧರ್ಮಪುರ: ಕುಂಚಿಟಿಗರ ಒಬಿಸಿ ಕಡತಕ್ಕೆ ಶೀಘ್ರದಲ್ಲಿ ಚಾಲನೆ ಸಿಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದರು.
ಸಮೀಪದ ಚಿಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕುಂಚಿಟಿಗ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಒಬಿಸಿ ಕಡತ ಮುಂದುವರೆದಿರಲಿಲ್ಲ. ಚುನಾವಣೆ ಮುಗಿದಿದ್ದು, ಶೀಘ್ರದಲ್ಲಿ ದೆಹಲಿ ಮಟ್ಟದಲ್ಲಿ ಇದಕ್ಕೆ ಒತ್ತಡ ತಂದು ಜಾರಿ ಮಾಡಿಸಿಯೇ ತೀರುತ್ತೇನೆ. ಈಗಾಗಲೇ ಶಿರಾ ಮತ್ತು ಹಿರಿಯೂರು ಭಾಗದ ನೀರಾವರಿ ಯೋಜನೆ ಹೋರಾಟದಲ್ಲಿ ನಾವು ಯಶಸ್ಸು ಗಳಿಸಿದ್ದೇವೆ. ಇದರಲ್ಲೂ ನಾವು ಯಶಸ್ಸು ಪಡೆದೇ ತೀರುತ್ತೇವೆ’ ಎಂದರು.
‘ಒಬಿಸಿ ಕಡತಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಅಲ್ಪ ದಿನಗಳಲ್ಲಿ ಒಪ್ಪಿಗೆ ಕೊಡಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಚಿಲ್ಲಹಳ್ಳಿ ಕಾಟಮಹಾಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಮಂಜೂರು ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ‘ಯಾವುದೇ ಕಾರಣಕ್ಕೂ ಕುಂಚಿಟಿಗರನ್ನು ಗ್ರಾಮೀಣ ಮತ್ತು ನಗರದವರೆಂದು ತಾರತಮ್ಯ ಮಾಡಬೇಡಿ. ರಾಜ್ಯ ಸರ್ಕಾರದ ಪ್ರವರ್ಗ-1ರ ಮೀಸಲಾತಿ ಕೊಡಬೇಕು. ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಬೇಕು. ಶಿಕ್ಷಣವೇ ಸಂಪತ್ತು ಅದಕ್ಕೋಸ್ಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ’ ಎಂದರು.
ಬಿಬಿಎಂಪಿ ಉಪ ಆಯುಕ್ತ ಬೇತೂರು ಪಾಳ್ಯ ಜೆ.ರಾಜು ಮಾತನಾಡಿ, ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿ. ಮಕ್ಕಳ ಕಲಿಕೆಗೆ ಮತ್ತು ಸಮಾಜದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಅದಕ್ಕಾಗಿ ಪಾಲಕರು ಸಹ ಊರುಗೋಲಾಗಿ ನಿಲ್ಲಬೇಕು ಎಂದರು.
ದೊಡ್ಡರಾಜಪ್ಪ, ರಂಗನಾಥ ಹುಲಿ, ಕುಬೇರಪ್ಪ, ತಿಪ್ಪೇಸ್ವಾಮಿ, ದೇವರಾಜ್ ಮಾತನಾಡಿದರು.
ವೇದಿಕೆಯಲ್ಲಿ ಕೃಷ್ಣೇಗೌಡ, ಶಿವಣ್ಣ, ಜೋಗೇಶ, ವಸಂತ್, ಹನುಮಂತರಾಯ, ರಾಜೇಶ್, ಪ್ರಕಾಶ್, ರಂಗಸ್ವಾಮಿ, ಮಂಜುನಾಥ್, ಜಯಪ್ರಕಾಶ್, ಯು.ವಿ.ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.