ಧರ್ಮಪುರ: 2022ರಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಇಲ್ಲಿನ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ಕೆರೆ ಹಿಂಬದಿ ಮತ್ತು ಕೆರೆ ಏರಿ ಬಳಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
ಕೆರೆಯಲ್ಲಿ 42 ವರ್ಷಗಳ ಕಾಲ ನೀರು ಇಲ್ಲದೇ ಇದ್ದುದರಿಂದ ಯಥೇಚ್ಛವಾಗಿ ಬಳ್ಳಾರಿ ಜಾಲಿ ಬೆಳೆದಿತ್ತು. ಎರಡು ವರ್ಷಗಳ ಹಿಂದೆ ಉತ್ತಮ ಮಳೆಯಾಗಿದ್ದರಿಂದ ಕೆರೆ ತುಂಬ ನೀರು ಸಂಗ್ರಹವಾಗಿತ್ತು. ಆದರೆ ಇದೀಗ ನೀರು ಮಲಿನಗೊಂಡು ಸಮಸ್ಯೆ ತಂದೊಡ್ಡಿದೆ.
ಇಂಗುವಿಕೆ ಹಾಗೂ ಬಿಸಿಲಿನ ತಾಪಕ್ಕೆ ಆವಿಯಾಗಿರುವ ಕಾರಣ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಜತೆಗೆ ಬಳ್ಳಾರಿ ಜಾಲಿಯ ಸೊಪ್ಪು ಸಂಪೂರ್ಣ ಕಳಚಿ ಬಿದ್ದು ನೀರು ಮಲಿನವಾಗಿ ದುರ್ನಾತ ಬೀರುತ್ತಿದೆ. ಯಾವ ಮಟ್ಟಿಗೆ ಎಂದರೆ ಕುರಿ, ದನಗಳೂ ಸಹ ನೀರು ಕುಡಿಯದಂತಹ ಸ್ಥಿತಿ ಇದೆ. ಇದರಿಂದ ಲಕ್ಷಾಂತರ ಮೀನುಗಳು ಮೃತಪಟ್ಟು ದಡದಲ್ಲಿ ತೇಲಾಡುತ್ತಿವೆ. ಸತ್ತಿರುವ ಕೆಲವು ಮೀನುಗಳು ನೀರಿನಲ್ಲೂ ತೇಲಾಡುತ್ತಿವೆ.
ಮೀನುಗಳ ಸಾಕಣೆಯ ಗುತ್ತಿಗೆ ಪಡೆದವರಿಗೆ ಇದರಿಂದ ತೀವ್ರ ನಷ್ಟ ಎದುರಾಗಿದೆ. ದುರ್ವಾಸನೆಯಿಂದ ಎದುರಾಗಿರುವ ತೊಂದರೆಯನ್ನು ನೀಗಿಸಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬಿಸಿಲಿನ ತಾಪದಿಂದ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಬಳ್ಳಾರಿ ಜಾಲಿ ಅಧಿಕವಾಗಿ ಬೆಳೆದಿರುವುದರಿಂದ ಮೀನುಗಳಿಗೆ ಆಕ್ಸಿಜನ್ ಕೊರತೆಯಾಗಿ ಸಾಯುತ್ತಿವೆ.ಎನ್.ಮಂಜುನಾಥ್ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.