ADVERTISEMENT

ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಎಂ.ಎನ್.ಯೋಗೇಶ್‌
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರದುರ್ಗ: ಹೆಣ್ಣು ಭ್ರೂಣ ಹತ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಎಂಟಿಪಿ ಕಿಟ್‌ಗಳ ಅವೈಜ್ಞಾನಿಕ ಮಾರಾಟ ತಡೆಯಲು ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದು ಔಷಧ ಮಾರಾಟ, ದಾಸ್ತಾನು, ವಿತರಣೆ ತಪಾಸಣೆಗೆ ‘ಜಿಲ್ಲಾ ತಂಡ’ ರಚಿಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿವೆ.

ಕಾಳಸಂತೆಯಲ್ಲಿ, ಔಷಧಿ ಅಂಗಡಿಗಳಲ್ಲಿ ಎಂಟಿಪಿ (ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ– ಗರ್ಭಪಾತಕ್ಕೆ ಬಳಸುವ ಮಾತ್ರೆಗಳು) ಕಿಟ್‌ ಮಾರಾಟವಾಗುತ್ತಿರುವ ಮಾಹಿತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜೂನ್‌ 10ರಂದು ಸಭೆ ನಡೆಸಿದ್ದರು. ಅದರನ್ವಯ ಎಲ್ಲಾ ಜಿಲ್ಲೆಗಳಲ್ಲಿ ಎರಡೂ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸುವಂತೆ ಆದೇಶಿಸಿ ಜೂನ್‌ 19ರಂದು ಸುತ್ತೋಲೆ ಹೊರಡಿಸಲಾಗಿದೆ.

ADVERTISEMENT

ಉಪ ಔಷಧ ನಿಯಂತ್ರಣಾಧಿಕಾರಿ (ಪ್ರಾದೇಶಿಕ ಕಚೇರಿ) ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಆಯಾ ಜಿಲ್ಲೆಗಳ ಸಹಾಯಕ ಔಷಧ ನಿಯಂತ್ರಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿ ಹಾಗೂ ಆಯಾ ವ್ಯಾಪ್ತಿಯ ವೈದ್ಯಾಧಿಕಾರಿ ಸದಸ್ಯರಾಗಿರಬೇಕು. ಸಮಿತಿಯು ಜಿಲ್ಲೆಯ ಸಗಟು ಹಾಗೂ ಚಿಲ್ಲರೆ ಔಷಧಿ ಅಂಗಡಿಯಲ್ಲಿ ಮಾರಾಟವಾಗುವ ಎಂಟಿಪಿ ಕಿಟ್‌ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.

‘ಎಂಟಿಪಿ ತಿದ್ದುಪಡಿ ಕಾಯ್ದೆ– 1971ರನ್ವಯ ವೈದ್ಯರ ಸಲಹೆ ಇಲ್ಲದೆ ಎಂಟಿಪಿ ಕಿಟ್‌ ಮಾರಾಟ ಮಾಡುವುದು ಅಪರಾಧ. ಆದರೆ, ರಾಜ್ಯದಾದ್ಯಂತ ಔಷಧಿ ಅಂಗಡಿಗಳಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಎಂಟಿಪಿ ಕಿಟ್‌ ಮಾರಾಟವಾಗುತ್ತಿವೆ. ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪ್ರತಿ ಔಷಧಿ ಅಂಗಡಿಯನ್ನು ಪರಿಶೀಲಿಸಿದರೆ ಮಾತ್ರ ಎಂಟಿಪಿ ಕಿಟ್‌ ಮಾರಾಟಕ್ಕೆ ತಡೆಯೊಡ್ಡಲು ಸಾಧ್ಯ ಎಂದು’ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿರುವ ಮಾರ್ಗಸೂಚಿಯಂತೆ ಗರ್ಭಪಾತದ ವೈದ್ಯಕೀಯ ನಿರ್ವಹಣೆ (ಎಂಎಂಎ– ಮೆಡಿಕಲ್‌ ಮ್ಯಾನೇಜ್‌ಮೆಂಟ್‌ ಆಫ್‌ ಅಬಾರ್ಷನ್‌) ಕಾರ್ಯವು ನೋಂದಾಯಿತ ವೈದ್ಯರಿಂದ ನೋಂದಾಯಿತ, ಸುರಕ್ಷಿತ ಸ್ಥಳದಲ್ಲಿ ನಡೆಯಬೇಕು. ಆದರೆ 9 ವಾರಗಳ ಗರ್ಭಾವಸ್ಥೆಯಲ್ಲೇ ನೋಂದಾಯಿತರಲ್ಲದ ವೈದ್ಯರು ವೈದ್ಯಕೀಯ ಸಲಹೆ ಇಲ್ಲದಿದ್ದರೂ ಗರ್ಭಪಾತ ನಡೆಸುತ್ತಿದ್ದಾರೆ. ಇದು ತಾಯಂದಿರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದ್ದು, ಕಡಿವಾಣ ಹಾಕಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರತಿ ತಿಂಗಳು 20ರಂದು ವರದಿ: ಆರೋಗ್ಯ ಇಲಾಖೆ ಅಧಿಕಾರಿಗಳು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕು. ಎರಡೂ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಔಷಧಿ ಅಂಗಡಿಗಳನ್ನು ಪರಿಶೀಲಿಸಬೇಕು. ಈ ಕುರಿತ ಸಮಗ್ರ ವರದಿಯನ್ನು ಪ್ರತಿ ತಿಂಗಳು 20ರಂದು ರಾಜ್ಯ ಕುಟುಂಬ ಕಲ್ಯಾಣ ವಿಭಾಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

‘ಜಿಲ್ಲಾ ಸಮಿತಿ ರಚನೆ ಸಂಬಂಧ ಸರ್ಕಾರದ ಆದೇಶ ಬಂದಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಔಷಧಿ ಅಂಗಡಿಗಳ ಪರಿಶೀಲನೆ ಕುರಿತಂತೆ ಜಿಲ್ಲಾ ತಂಡದ ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿ ಇದೆ’ ಎಂದು ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಎಂ.ಎಸ್‌.ಗೀತಾ ಹೇಳಿದರು.

ಅನಧಿಕೃತ ಗರ್ಭಪಾತಕ್ಕೆ ತಡೆ

‘ಹೆಣ್ಣುಭ್ರೂಣಹತ್ಯೆ ಸೇರಿದಂತೆ ಎಲ್ಲಾ ರೀತಿಯ ಅನಧಿಕೃತ ಗರ್ಭಪಾತ ತಡೆಗೆ ಎಂಟಿಪಿ ಕಿಟ್‌ ಮಾರಾಟದ ಮೇಲೆ ನಿಯಂತ್ರಣ ಹೇರಲು ಕ್ರಮ ಕೈಗೊಳ್ಳಲಾಗುವುದು. ಔಷಧಿ ಮಾರಾಟಗಾರರು ಲೆಕ್ಕವಿಲ್ಲದೇ ಎಂಟಿಪಿ ಕಿಟ್‌ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಮುಂದೆ ಜಿಲ್ಲಾ ತಂಡದ ಮೂಲಕ ಇದಕ್ಕೆ ಅಂತ್ಯ ಹಾಡಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.