ಹಿರಿಯೂರು ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬವನ್ನು ಜೈನರು– ಹಿಂದೂಗಳು ಭಿನ್ನ ರೀತಿಯಲ್ಲಿ ಆಚರಿಸುವುದು ನಡೆದುಕೊಂಡು ಬರುತ್ತಿದೆ.
ಶ್ರೀರಾಮ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿದ ದಿನ ಅಮವಾಸ್ಯೆ ಆಗಿರುತ್ತದೆ. ಶ್ರೀರಾಮನನ್ನು ಅಮಾವಾಸ್ಯೆ ಕತ್ತಲಿದ್ದ ಕಾರಣಕ್ಕೆ ಜ್ಯೋತಿ ಬೆಳಗಿಸಿ ಬರಮಾಡಿಕೊಳ್ಳುವ ಹಬ್ಬವನ್ನಾಗಿ ಕೆಲವರು ಆಚರಿಸಿದರೆ, ಮತ್ತೆ ಕೆಲವರು ನರಕಾಸುರನ ವಧೆಯ ನೆಪದಲ್ಲಿ ಆಚರಿಸುವುದುಂಟು. ಇದೇ ನೆನಪಿನಲ್ಲಿ ಜೈನರು ವಿವಿಧ ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಾರೆ.
ಗ್ರಾಮೀಣ ಭಾಗದಲ್ಲಿ ಈ ದೀಪಾವಳಿ ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆವರೆಗೆ ಬರುವ ಮಂಗಳವಾರ ಅಥವಾ ಶುಕ್ರವಾರ ಹಿರಿಯರ ಹಬ್ಬದ ಹೆಸರಿನಲ್ಲಿ ದೀಪಾವಳಿ ಆಚರಿಸುವುದುಂಟು. ಈ ಹಬ್ಬದಲ್ಲಿ ಕುಟುಂಬದಲ್ಲಿ ಮೃತರಾಗಿರುವ ಹಿರಿಯರನ್ನು ಸ್ಮರಿಸಿಕೊಳ್ಳುವ ಮೂಲಕ ಅವರಿಗೆ ಇಷ್ಟವಾದ ಊಟ ತಯಾರಿಸಿ, ಪೂಜಿಸಿ, ಎಡೆ ಸಮರ್ಪಿಸಿ ಹಬ್ಬ ಆಚರಿಸುವುದುಂಟು. ಬಗೆಬಗೆಯ ಭಕ್ಷ್ಯ ಭೋಜನ ತಯಾರಿಸುವ ಮೂಲಕ ಹಿರಿಯರ ಸ್ಮರಣೆ ಮಾಡುತ್ತಾರೆ. ಜೊತೆಗೆ ನೆಂಟರಿಷ್ಟರನ್ನು ಮನೆಗೆ ಆಹ್ವಾನಿಸಿ ಊಟ ಬಡಿಸುವುದೂ ನಡೆದುಕೊಂಡು ಬಂದಿದೆ.
ಜೈನ ಸಮುದಾಯದ ವಿಶೇಷ ಹಬ್ಬ:
ಜೈನರು ಕೂಡ ದೀಪಾವಳಿಯನ್ನು ವಿಶೇಷ ಸಂಪ್ರದಾಯಗಳ ಮೂಲಕ ಆಚರಣೆ ಮಾಡುತ್ತಾರೆ. 24ನೇ ತೀರ್ಥಂಕರ ಭಗವಾನ್ ಮಹಾವೀರರು ಮೋಕ್ಷ ಅಥವಾ ನಿರ್ವಾಣ ಹೊಂದಿದ ದಿನವನ್ನು ಜ್ಯೋತಿ ಬೆಳಗಿಸುವ ಮೂಲಕ ದೀಪಾವಳಿ ಹೆಸರಿನಲ್ಲಿ ಹಬ್ಬ ಆಚರಿಸುತ್ತಾರೆ.
‘ಅಮವಾಸ್ಯೆಯ ಹಿಂದಿನ ಎರಡು ದಿನ ತ್ರಯೋದಶಿ, ಚತುರ್ದಶಿ ಹೆಸರಿನಲ್ಲಿ ಒಟ್ಟು ಮೂರು ದಿನ ಧ್ಯಾನ, ವ್ರತಾಚರಣೆ ಕೈಗೊಳ್ಳಲಾಗುತ್ತದೆ. ಅಮಾವಾಸ್ಯೆಯಂದು ಮಧ್ಯರಾತ್ರಿ ಲಕ್ಷ್ಮೀ ದೇವತೆಗೆ ಪೂಜೆ ಸಲ್ಲಿಸುತ್ತೇವೆ. ಮನೆಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಹೊಸಬಟ್ಟೆ ಕೊಡಿಸಿ ಹಬ್ಬದ ಸಂತೋಷದಲ್ಲಿ ಅವರೂ ಪಾಲ್ಗೊಳ್ಳುವಂತೆ ಮಾಡುವುದು ವಿಶೇಷ’ ಎನ್ನುತ್ತಾರೆ ಇಲ್ಲಿನ ವರ್ತಕ ದೇವರಾಜ್ ಚೋಪ್ಡಾ.
ಹೊಸ ಬಟ್ಟೆ ಧರಿಸಿ ಹಬ್ಬ:
ಎಲ್ಲ ಸಮುದಾಯದವರು ಕೂಡ ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ವರಮಹಾಲಕ್ಷ್ಮಿ ಹಬ್ಬದ ಮಾದರಿಯಲ್ಲಿ ಲಕ್ಷ್ಮಿ ಪ್ರತಿಮೆಗೆ ಸೀರೆಯುಡಿಸಿ ಬಗೆಬಗೆಯ ಸಿಹಿತಿಂಡಿ, ಹಣ್ಣುಗಳ ನೈವೇದ್ಯ ಅರ್ಪಿಸಿ ಪೂಜೆ ಮಾಡುತ್ತಾರೆ. ಅಕ್ಕಪಕ್ಕದ ಮನೆಯವರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವ ಕೆಲಸ ಮಾಡುತ್ತಾರೆ.
ಆಯುಧ ಪೂಜೆ ಹಾಗೂ ದಸರಾ ವೇಳೆ ವಾಹನ ಪೂಜೆ, ಅಂಗಡಿ ಪೂಜೆಯನ್ನು ಸಾಮಾನ್ಯವಾಗಿ ಮಾಡುತ್ತಾರೆ. ಆದರೆ, ಕೆಲವರು ಆಯುಧ ಪೂಜೆಯಲ್ಲಿ ವಾಹನ, ಅಂಗಡಿ ಪೂಜೆ ಮಾಡದವರು ದೀಪಾವಳಿ ವೇಳೆ ಪೂಜೆ ಮಾಡುತ್ತಾರೆ. ಅಂಗಡಿಗಳನ್ನು ಸ್ವಚ್ಛಗೊಳಿಸಿ, ಆಕರ್ಷಕ ದೀಪಗಳಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಸಿಹಿ ನೀಡಿ ಸಂಭ್ರಮಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.