ADVERTISEMENT

‘ವೀರಶೈವ’ ಪದ ಸೇರ್ಪಡೆ ಬೇಡ; ಮುಖ್ಯಮಂತ್ರಿಗೆ ಸಾಣೇಹಳ್ಳಿ ಸ್ವಾಮೀಜಿಯಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 22:55 IST
Last Updated 5 ಜುಲೈ 2024, 22:55 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಚಿತ್ರದುರ್ಗ: 9ನೇ ತರಗತಿಯ ‘ವಿಶ್ವಗುರು ಬಸವಣ್ಣನವರು– ಸಾಂಸ್ಕೃತಿಕ ನಾಯಕ’ ಪಠ್ಯದಲ್ಲಿ ಯಾವ ಕಾರಣಕ್ಕೂ ‘ವೀರಶೈವ’ ಪದ ಸೇರಬಾರದು. ಹಾಗೆ ಸೇರಿಸಿದರೆ ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಚಾರ ಮಾಡಿದಂತೆ. ಪ್ರಸ್ತುತ ಪಠ್ಯವನ್ನೇ ಯಥಾವತ್‌ ಮುಂದುವರಿಸಬೇಕು ಎಂದು ಒತ್ತಾಯಿಸಿ ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಸಾಣೇಹಳ್ಳಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ‘ವಚನ ಕಮ್ಮಟ’ದಲ್ಲಿ ಬಸವ ಪರಂಪರೆಯ 70ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು. ಅವರೆಲ್ಲರ ಪರವಾಗಿ ಹಕ್ಕೊತ್ತಾಯ ಮಾಡಲಾಗುತ್ತಿದ್ದು, ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಠ್ಯದಿಂದ ‘ವೀರಶೈವ' ಪದ ಬಿಟ್ಟಿರುವುದಕ್ಕೆ ಕೆಲವರು ತಕರಾರು ಎತ್ತಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪಠ್ಯವು ಬಸವಣ್ಣನವರಿಗೆ ನ್ಯಾಯ ಒದಗಿಸುವಂತಿದೆ. ಇದರಲ್ಲಿ ಬಸವಣ್ಣನವರು ಮತ್ತು ಅವರ ಕ್ರಾಂತಿಯ ಕುರಿತಂತೆ ವಾಸ್ತವ ಅಂಶಗಳಿವೆ. ವರ್ಗ, ವರ್ಣ, ಲಿಂಗ ಬೇಧಗಳನ್ನು ಅಳಿಸಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸಲು ಬಸವಣ್ಣ ಕ್ರಾಂತಿ ಮಾಡಿದ್ದು ಜಗತ್ತಿನ ಇತಿಹಾಸದಲ್ಲಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರು ಎಂದು ಐತಿಹಾಸಿಕ ಆಧಾರಗಳು ಖಚಿತವಾಗಿ ಹೇಳುತ್ತಿರುವಾಗ ಆ ಸತ್ಯವನ್ನು ಮರೆಮಾಚಿ ಸುಳ್ಳನ್ನು ಪಠ್ಯಗಳಲ್ಲಿ ಸೇರ್ಪಡಿಸುವುದು ಸುಸಂಬದ್ಧವಲ್ಲ.  ಶರಣಕ್ರಾಂತಿಯ ಇತಿಹಾಸವನ್ನು ಆಳವಾಗಿ ಅರಿತಿರುವ ತಾವು ಸುಳ್ಳು ವದಂತಿಗಳಿಗೆ ಮಾನ್ಯತೆ ನೀಡದೆ, ಯಾರ ಒತ್ತಾಯಕ್ಕೂ ಮಣಿಯದೇ ಈಗಿರುವ ಪಠ್ಯವನ್ನೇ ಮುಂದುವರಿಸಬೇಕು ಎಂದು ವಚನ ಕಮ್ಮಟದಲ್ಲಿ ಭಾಗವಹಿಸಿದ್ದ ಶ್ರೀಗಳೆಲ್ಲರೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.