ಚಳ್ಳಕೆರೆ: ನಗರಪ್ರದೇಶದಿಂದ 5-6 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಕೇಂದ್ರ ದೊಡ್ಡೇರಿ ಗ್ರಾಮದಲ್ಲಿ ಕ್ರಿ.ಶ. 1689-1721ರಲ್ಲಿ ನಿರ್ಮಿಸಿದ ಕಲ್ಲು-ಮಣ್ಣಿನ ಮಿಶ್ರಿತ 30-40 ಅಡಿ ಎತ್ತರದ ಕೋಟೆ ಅಳಿವಿನ ಅಂಚಿನಲ್ಲಿದ್ದು, ಕಾಯಕಲ್ಪಕ್ಕಾಗಿ ಕಾದಿದೆ.
ಕೋಟೆ ಮತ್ತು ಬುರುಜು ಎರಡೂ ಶಿಥಿಲಗೊಂಡು ಕುಸಿದು ಬಿದ್ದಿವೆ. ಕೋಟೆಯ ಸುತ್ತ ಮತ್ತು ಮೇಲೆ ಸೀಮೆಜಾಲಿ ಗಿಡಗಳು ಬೆಳೆದು ನಿಂತಿವೆ. ಕೋಟೆ ತಳಪಾಯಕ್ಕೆ ಹಾಕಿದ್ದ ಕಲ್ಲುಗಳು ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಕೋಟೆ ಸಾಲು ಮಣ್ಣಿನ ದಿಬ್ಬವಾಗಿ ಪರಿವರ್ತನೆಗೊಂಡಿದೆ. ಇರುವ ಕಂದಕಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ.
ಆಂಜನೇಯ, ವೈಷ್ಣವ ದೇವಾಲಯ, ಶಾಸನ ಸ್ತಂಭಗಳು, ನೊಳಂಬ ಶೈಲಿಯ ಅತ್ಯಾಕರ್ಷಕ ವಾಸ್ತು ಶಿಲ್ಪಗಳು, 5-6 ಅಡಿ ಎತ್ತರದ ವಿಶೇಷ ಶಿವಲಿಂಗ ಮತ್ತು ಚಿತ್ರದುರ್ಗ ಪಾಳೇಗಾರರ ಕಾಲದ ಮಾರಮ್ಮ, ಕಾಳಮ್ಮ, ಈಶ್ವರ, ವೀರಭದ್ರ ದೇವಸ್ಥಾನ ಸೇರಿ ಅಳಿದುಳಿದ ಇತಿಹಾಸದ ಅವಶೇಷಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಕ್ರಿ.ಶ 1689-1721ರಲ್ಲಿ ನಡೆದ ರೋಚಕ ಯುದ್ಧಗಳಲ್ಲಿ ‘ದೊಡ್ಡೇರಿ ಕದನ’ ಪ್ರಸಿದ್ಧವಾದುದು. ಚಿತ್ರದುರ್ಗದ ಪಾಳೇಗಾರರ ಪ್ರಸಿದ್ಧ ದೊರೆ ಬಿಚ್ಚುಗತ್ತಿ ಭರಮಣ್ಣ ನಾಯಕ ಮತ್ತು ಆತನ ಮಗ ಹಿರೇಮದಕರಿನಾಯಕ ಇಬ್ಬರೂ ದೊಡ್ಡೇರಿಯಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ್ದು ಇತಿಹಾಸ.
ಹಳೆ ದೊಡ್ಡೇರಿ ಜನವಸತಿ ಪ್ರದೇಶದಲ್ಲಿ ಮಡಕೆ ಚೂರುಗಳು, ಇಟ್ಟಿಗೆ ತುಂಡುಗಳು, ನಿತ್ಯ ಬಳಕೆಯ ಸಣ್ಣ ಗುಂಡುಕಲ್ಲುಗಳು ಮತ್ತು ಕಮ್ಮಾರಿಕೆ ಕುರುಹುಗಳು ಈಗಲೂ ಕಾಣ ಸಿಗುತ್ತವೆ.
ಪ್ರಾಚ್ಯ ಮತ್ತು ಪುರತತ್ವ, ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವಿಶೇಷ ಅನುದಾನದಲ್ಲಿ ಶಿಥಿಲಗೊಂಡಿರುವ ಕೋಟೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.
ಕೋಟೆ ದುರಸ್ತಿ ಜತೆಗೆ ಮೇಲೆ ಹತ್ತಿ ಹೋಗಲು ಕಬ್ಬಿಣದ ಸರಳಿನ ಮೆಟ್ಟಲು, ವಿದ್ಯುತ್ ದೀಪ, ಕುಳಿತು ಕೊಳ್ಳಲು ಕಲ್ಲು ಚಪ್ಪಡಿ, ಶುದ್ಧ ಕುಡಿಯುವ ನೀರು ಮುಂತಾದ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿಸಲು ಕನಿಷ್ಠ 50-60 ಲಕ್ಷ ಅನುದಾನದ ಅಗತ್ಯವಿದೆ.
ಊರಿನ ಇತಿಹಾಸ ಸ್ಮಾರಕ-ಕೋಟೆ ಉಳಿಸಬೇಕು ಎಂಬ ಕಳಕಳಿ ಇದೆ. ಆದರೆ, ದೊಡ್ಡ ಮೊತ್ತದ ಅನುದಾನ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಾಗುವುದಿಲ್ಲ. ಹೀಗಾಗಿ ಕೋಟೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದ ಇಲಾಖೆಗೆ 2-3 ಬಾರಿ ಪತ್ರ ಬರೆಯಲಾಗಿದೆ ಎಂದು ಪಿಡಿಒ ಪಾಲಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.