ಭರಮಸಾಗರ: ಮೂರ‍್ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಇಲ್ಲಿನ ಐತಿಹಾಸಿಕ ಭರಮಣ್ಣನಾಯಕನ ದೊಡ್ಡಕೆರೆ ದುರಸ್ತಿ ಕಾರ್ಯ ಮತ್ತೆ ಆರಂಭವಾಗಿದೆ. ಇಟಾಚಿ ಯಂತ್ರದ ಸಹಾಯದಿಂದ ಕೆರೆ ಏರಿಯ ಮಣ್ಣು ತೆಗೆಯಲಾಗುತ್ತಿದೆ.
ಭರಮಸಾಗರ ಏತ ನೀರಾವರಿ ಯೋಜನೆಯಡಿ 2021 ರಲ್ಲಿ ಪ್ರಾರಂಭಿಕ ಹಂತವಾಗಿ 56 ಕಿ.ಮೀ. ದೂರದಿಂದ ತುಂಗಭದ್ರಾ ನದಿ ನೀರನ್ನು ಪೈಪ್ ಲೈನ್ ಮೂಲಕ ಇಲ್ಲಿನ ದೊಡ್ಡಕೆರೆಗೆ ಹರಿಸುವ ಕಾರ್ಯ ಆರಂಭವಾಗಿತ್ತು. ಅನೇಕ ವರ್ಷಗಳಿಂದ ಬರಿದಾಗಿದ್ದ ಕೆರೆಯಲ್ಲಿ ನೀರು ತುಂಬಿದ ನಂತರ 2022ರ ಜನವರಿಯಲ್ಲಿ ಕೆರೆ ಏರಿ ಮಧ್ಯಭಾಗದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬಿರುಕು ಕ್ರಮೇಣ ದೊಡ್ಡದಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳು ಕೆರೆ ಏರಿ ದುರಸ್ತಿಗೆ ಕ್ರಮ ಕೈಗೊಂಡಿದ್ದರೂ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡಿರಲಿಲ್ಲ.
ಕಳೆದ ವರ್ಷ ಕೆರೆತುಂಬಿ ಕೋಡಿಬಿದ್ದು ಏರಿ ಹಿಂಭಾಗದಲ್ಲಿ ನೀರು ಬಸಿಯುವ ಪ್ರಮಾಣ ಹೆಚ್ಚಾಗಿದ್ದರಿಂದ ಏರಿರಸ್ತೆಯಲ್ಲಿನ ಸಂಚಾರ ನಿರ್ಬಂಧಿಸಿ ಕೋಡಿ ಕಟ್ಟೆಯನ್ನು ಸ್ವಲ್ಪ ಪ್ರಮಾಣದಲ್ಲಿ ಒಡೆದು ಕೆರೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಗೆ ಬಿಡುವ ಮೂಲಕ ನೀರಿನ ಒತ್ತಡ ತಗ್ಗಿಸುವ ಯತ್ನ ನಡೆದಿತ್ತು. ನಂತರ ಏರಿ ದುರಸ್ತಿಗಾಗಿ ದೊಡ್ಡಕೆರೆಯಲ್ಲಿನ ನೀರನ್ನು ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಟ್ಟ ಇತರೆ ಕೆರೆಗಳಿಗೆ ಹರಿಸಿ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದರು.
ಆದರೆ, ತಾಂತ್ರಿಕ ಕಾರಣದಿಂದ ಏರಿ ದುರಸ್ತಿ ಕಾರ್ಯ ವಿಳಂಬವಾಗಿ ಇಸಾಮುದ್ರ, ಕಾಲ್ಗೆರೆ, ಹೊಸಹಟ್ಟಿ, ರಂಗೇನಹಳ್ಳಿ, ನೆಲ್ಲಿಕಟ್ಟೆ, ಅಜಾದ್‌ನಗರ, ಸುಲ್ತಾನಿಪುರ, ಬಿದರಿಕೆರೆ ಮಾರ್ಗದ ಗ್ರಾಮಗಳಿಗೆ ಹೋಗಿ ಬರಲು, ಸಾರ್ವಜನಿಕರು, ರೈತರು ಪರ್ಯಾಯ ಮಾರ್ಗ ಬಳಸುವುದು ಅನಿವಾರ್ಯವಾಗಿತ್ತು. ಸಮಸ್ಯೆ ಉದ್ಭವಾಗಿ ಒಂದು ವರ್ಷವಾದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಮುಂಗಾರು ಆರಂಭವಾಗುವುದರೊಳಗೆ ದುರಸ್ತಿ ಕಾರ್ಯ ಮುಗಿಯುವುದೋ ಇಲ್ಲವೋ ಎನ್ನುವ ಆತಂಕ ಸಾರ್ವಜನಿಕರಲ್ಲಿತ್ತು. ಈಚೆಗೆ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮುಗಿಸಿಕೊಂಡು ಸಿರಿಗೆರೆಗೆ ಹಿಂದಿರುಗುವ ಸಂದರ್ಭದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದೊಡ್ಡಕೆರೆಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಶೀಘ್ರವಾಗಿ ಏರಿದುರಸ್ತಿ ಕಾರ್ಯ ಆರಂಭಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ತಿಳಿಸಿದ್ದರು.
ಇದೀಗ ದೊಡ್ಡಕೆರೆ ಏರಿ ದುರಸ್ತಿ ಕಾಮಗಾರಿ ಆರಂಭಗೊಂಡಿದ್ದು ಮಳೆಗಾಲಕ್ಕಿಂತ ಮೊದಲು ಕೆಲಸ ಮುಗಿಯುವ ನಿರೀಕ್ಷೆಯನ್ನು ಗ್ರಾಮಸ್ಥರಲ್ಲಿ ಮೂಡಿಸಿದೆ. ₹ 5 ಕೋಟಿ ಅಂದಾಜು ವೆಚ್ಚದ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಏರಿ ಮಧ್ಯಭಾಗದಲ್ಲಿ ಮಣ್ಣನ್ನು ತಳಭಾಗದವರೆಗೆ ತೆಗೆದು ಹೊಸದಾಗಿ ಗುಣಮಟ್ಟದ ಮಣ್ಣು ಹಾಕಿ ಸುಭದ್ರ ಏರಿ ನಿರ್ಮಿಸಲಾಗುವುದು. 3 ತಿಂಗಳೊಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ದಾವಣಗೆರೆ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಆರ್.ಬಿ. ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.