ADVERTISEMENT

ಚಿತ್ರದುರ್ಗ | ದಶಕ ಕಳೆದರೂ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 6:58 IST
Last Updated 17 ಜುಲೈ 2023, 6:58 IST
ಚಳ್ಳಕೆರೆ ನಗರದಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆ
ಚಳ್ಳಕೆರೆ ನಗರದಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆ   

ಕೆ.ಪಿ.ಓಂಕಾರಮೂರ್ತಿ

ಚಿತ್ರದುರ್ಗ: ನಗರದಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಸಮಸ್ಯೆ ಹೆಚ್ಚಿದೆ. ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣದ ಉದ್ದೇಶದಿಂದ ಒಳಚರಂಡಿ ವ್ಯವಸ್ಥೆ ಅತ್ಯುತ್ತಮ ಯೋಜನೆ. ಆದರೆ, ಇದು ಸಕಾಲದಲ್ಲಿ ಪೂರ್ಣಗೊಳ್ಳದಿರುವ ಕಾರಣ ಜನರು ಸಮಸ್ಯೆ ಎದುರಿಸುವಂತಾಗಿದೆ.

ರಾಜ್ಯ ಸರ್ಕಾರದಿಂದ 2011ರಲ್ಲಿ ನಗರಕ್ಕೆ ₹ 95 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ದೊರಕಿತ್ತು. 264 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಸುವ ಈ ಯೋಜನೆಯ ನಿರ್ವಹಣೆ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌) ವಹಿಸಿಕೊಂಡಿದೆ. ಆದರೆ ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಡಿಪಿಆರ್‌ ಪ್ರಕಾರ ಇನ್ನೂ 16 ಸಾವಿರ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ ಎಂಬ ಮಾಹಿತಿಯನ್ನು ಕಳೆದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜ್‌ ಬಹಿರಂಗಗೊಳಿಸಿ ತನಿಖೆಗೆ ಸೂಚಿಸಿದ್ದರು.

ADVERTISEMENT

ನಗರದ 35 ವಾರ್ಡ್‌ಗಳ ಬಹುತೇಕ ಬಡಾವಣೆಗಳಲ್ಲಿ ತೆರೆದ ಚರಂಡಿಯಲ್ಲಿ ಮಲ–ಮೂತ್ರದೊಂದಿಗೆ ನಿತ್ಯ ಕೊಳಚೆ ನೀರು ಹರಿಯುತ್ತಿದೆ. ತ್ಯಾಜ್ಯದ ರಾಶಿಯೂ ತುಂಬಿಕೊಂಡು ಸರಾಗವಾಗಿ ಹರಿಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಹಿಸಿಕೊಳ್ಳಲಾಗದ ದುರ್ವಾಸನೆಯ ಪರಿಸರದಲ್ಲಿ ಜನರು ವಾಸಿಸುತ್ತಿದ್ದಾರೆ.

ನಗರದಲ್ಲಿ 6,500ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳಿವೆ. ಮೊದಲ ಹಂತದಲ್ಲಿ ವೇಗ ಪಡೆದಿದ್ದ ಕಾಮಗಾರಿ ಎರಡನೇ ಹಂತದಲ್ಲಿ ಮಂದಗತಿಯಲ್ಲಿ ಸಾಗಿತು. ನಗರ ವ್ಯಾಪ್ತಿಯಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೂ, ಯೋಜನೆ ಪರಿಪೂರ್ಣವಾಗಿಲ್ಲ. ಭೂಸ್ವಾದೀನ ಪ್ರಕ್ರಿಯೆ ವಿಳಂಬ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಒಳಚರಂಡಿ ಪೈಪ್‌ಲೈನ್‌ ಅಲ್ಲಲ್ಲಿ ಕಟ್ಟಿಕೊಳ್ಳುವುದು, ಮ್ಯಾನ್‌ಹೋಲ್‌ ಮೂಲಕ ರಸ್ತೆಗಳಿಗೆ ಕೊಳಚೆ ನೀರು ಹರಿಯುವುದು ಸಾಮಾನ್ಯವಾಗಿದೆ.

ಚಿತ್ರದುರ್ಗ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿ ವೇಳೆ ಯುಜಿಡಿ ಪೈಪ್‌ಲೈನ್‌ಗಳು ಹಾಳಾಗಿವೆ. ಅದನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಜತೆಗೆ ಕೆಲವೆಡೆ ಕೊಳವೆ ಮಾರ್ಗ ಜೋಡಿಸುವ ಕಾರ್ಯವನ್ನು ಕೆಯುಡಬ್ಲ್ಯೂಎಸ್‌ ಮಾಡುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ.
ಶ್ರೀನಿವಾಸ್‌, ಪೌರಾಯುಕ್ತ ನಗರಸಭೆ

ನಗರದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ವೇಳೆ ಮ್ಯಾನ್‌ ಹೋಲ್‌ಗಳನ್ನು ಅಚ್ಚುಕಟ್ಟುಗೊಳಿಸದ ಕಾರಣ ರಸ್ತೆ ನಡುವೆ ಅವಾಂತರ ಸೃಷ್ಟಿಸಿವೆ. ಕೆಲವು ಕಡೆ ರಸ್ತೆ ಮೇಲೆ ಗೋಪುರದ ಆಕೃತಿಯಲ್ಲಿದ್ದರೆ ಕೆಲ ಭಾಗಗಳಲ್ಲಿ ನೆಲ ತೊಟ್ಟಿಯ ಮಾದರಿಯಲ್ಲಿವೆ. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಸ್‌, ಕಾರು ಇತರೆ ವಾಹನಗಳು ಇವುಗಳಲ್ಲಿ ಸಿಲುಕಿಕೊಳ್ಳುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ವೃದ್ಧರು ಬಿದ್ದು ಗಾಯಗೊಂಡ ನಿದರ್ಶನಗಳಿವೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರು ಸಾಕಷ್ಟು ಹೈರಾಣಾಗಿದ್ದಾರೆ.

ನಗರ ವ್ಯಾಪ್ತಿಯಲ್ಲಿನ ಬಡಾವಣೆಗಳ ಮಲೀನ ನೀರನ್ನು ಒಳಚರಂಡಿ ಮೂಲಕ ಹರಿಸಲು ಮೂರು ಕಡೆ ಪ್ರತ್ಯೇಕವಾಗಿ ವೆಟ್‌ವೆಲ್‌ (ಚಿಕ್ಕ ಮ್ಯಾನಹೋಲ್‌ಗಳ ನೀರು ಸೇರುವ ವ್ಯವಸ್ಥೆ) ನಿರ್ಮಿಸಲಾಗಿದೆ. ತಮಟಕಲ್ಲು ರಸ್ತೆ ಮಾರ್ಗದಲ್ಲಿ ಮೊದಲ ವೆಟ್‌ವೆಲ್ ಇದೆ. ಎರಡನೆಯದು ಮಲ್ಲಾಪುರ ಕೆರೆ ಸಮೀಪ, ಮೂರನೆಯದು ತುರುವನೂರು ರಸ್ತೆ ಮಾರ್ಗದ ಸಮೀಪದಲ್ಲಿದೆ. ಹೀಗೆ ಮೂರು ವೆಟ್‌ವೆಲ್‌ಗಳಿಂದ ಪೈಪ್‌ಲೈನ್ ಮೂಲಕ ಸಂಗ್ರಹಿಸಲಾಗುವ ಮಲೀನ ನೀರನ್ನು ಪಿಳ್ಳೆಕೇರನಹಳ್ಳಿ ಹಾಗೂ ತುರುವನೂರು ರಸ್ತೆ ಮಾರ್ಗ ಮಧ್ಯೆ ಇರುವ ರೈಲ್ವೆ ಗೇಟ್ ಸಮೀಪದಲ್ಲಿ ನಿರ್ಮಿಸಿರುವ ಮಲಿನ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಹರಿಸಲಾಗುವುದು. ಆದರೆ, ಭೂ ಸ್ವಾಧೀನ ವಿಳಂಬ ಕಾರಣಕ್ಕೆ ವೆಟ್‌ವೆಲ್‌ 3ರಿಂದ ಘಟಕಕ್ಕೆ ನೀರು ಹರಿಸಲಾಗುತ್ತಿದೆ. ಮಲೀನ ನೀರನ್ನು ಶುದ್ಧೀಕರಣಗೊಳಿಸಿ ನಂತರ ಅದನ್ನು ತಾಲ್ಲೂಕಿನ ಗೋನೂರು ಕೆರೆ ಸೇರಿ ನಾಲ್ಕು ಕಡೆಗಳಲ್ಲಿ ಹರಿಸುವ ಯೋಜನೆ ಇದಾಗಿದೆ.

ಕೊಳಗೇರಿಗಳಲ್ಲಿ ಶೌಚಾಲಯ ಇದ್ದರೂ ನೀರಿನ ಸಮಸ್ಯೆಯಿಂದ ಬಳಸುತ್ತಿಲ್ಲ. ಕೆಲ ಕೊಳೆಗೇರಿ ಪ್ರದೇಶ ಹಾಗೂ ಬಡಾವಣೆಗಳಲ್ಲಿ ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ₹ 6.74 ಕೋಟಿ ವೆಚ್ಚದಲ್ಲಿ 12 ಕಡೆ ಕೊಳವೆ ಮಾರ್ಗ ಜೋಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆಲ ಭಾಗಗಳಲ್ಲಿ ಸ್ಥಳದ ಸಮಸ್ಯೆಯಿಂದ ಯೋಜನೆ ವಿಳಂಬವಾಗುತ್ತಿದೆ ಎಂಬ ಮಾಹಿತಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌) ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ಜುಲೈ 23 ರಂದು ನಡೆದ ಕೆಡಿಪಿ ಸಭೆಗೆ ಸಲ್ಲಿಸಿದೆ.

ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ಮನೆಗಳ ಕಲುಷಿತ ನೀರು ಚರಂಡಿ ಸೇರಿ ರಸ್ತೆ ಮೇಲೆ ಹರಿಯುತ್ತದೆ. ಮ್ಯಾನ್‌ಹೋಲ್‌ಗಳು ತುಂಬಿ ದುರ್ವಾಸನೆ ಬೀರುತ್ತಿವೆ. ಬುದ್ಧನಗರದಲ್ಲಿ ಸಮಸ್ಯೆ ತೀವ್ರವಾಗಿದೆ.
ಎನ್‌.ರತ್ನಮ್ಮ, ಬುದ್ಧ ನಗರ ನಿವಾಸಿ

ಭೂಸ್ವಾಧೀನ ಸಮಸ್ಯೆಯನ್ನು ಮುಂದಿಟ್ಟಕೊಂಡು ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನಗರ ಸೌಂದರ್ಯ, ಸ್ವಚ್ಛತೆಯ ಒಳಚರಂಡಿ ಯೋಜನೆ ಶೇ 100ರಷ್ಟು ಯಶಸ್ವಿಯಾಗುವುದೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಹಿರಿಯೂರು: ₹ 100 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ

ನಗರದಲ್ಲಿ ಹಾದು ಹೋಗಿರುವ ವೇದಾವತಿ ನದಿಯ ಬಲಭಾಗದ ನಗರಕ್ಕೆ ₹ 100 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಶೀಘ್ರವೇ ಆರಂಭವಾಗುವ ಲಕ್ಷಣಗಳಿವೆ. ಇದರಿಂದ ಸ್ವಚ್ಛ ನಗರದ ನಿರೀಕ್ಷೆಯಲ್ಲಿ ನಾಗರಿಕರಿದ್ದಾರೆ. ಹೊಸದುರ್ಗ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಮಂಜೂರಾಗಿದೆ.

ಹಿರಿಯೂರು ನಗರಕ್ಕೆ ಏಕೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ನಾಗರಿಕರ ಪ್ರಶ್ನೆಯಾಗಿತ್ತು. ಆದರೆ ಪೂರ್ಣಿಮಾ ಶ್ರೀನಿವಾಸ್ ಶಾಸಕರಾಗಿದ್ದ ಅವಧಿಯಲ್ಲಿ ಒಳಚರಂಡಿ ಕಾಮಗಾರಿಗೆ ಅನುದಾನ ಮಂಜೂರಾಗಿ ಟೆಂಡರ್ ಹಂತದಲ್ಲಿದೆ.

‘ಸಮಗ್ರ ಹಿರಿಯೂರು ನಗರಕ್ಕೆ ಒಳಚರಂಡಿ ವ್ಯವಸ್ಥೆಗೆ ₹ 226 ಕೋಟಿ ವೆಚ್ಚದ ಡಿಪಿಆರ್‌ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೆವು. ಹಳೆ ನಗರಕ್ಕೆ ₹100 ಕೋಟಿ ಮಂಜೂರಾಗಿದೆ. ಕಾಮಗಾರಿ ವೆಚ್ಚ ₹ 50 ಕೋಟಿಗಿಂತ ಹೆಚ್ಚಿರುವ ಕಾರಣಕ್ಕೆ ಸರ್ಕಾರದ ಟೆಂಡರ್‌ ಪೂರ್ವ ಪರಿಶೀಲನಾ ಸಮಿತಿ ಮುಂದೆ ಪರಿಶೀಲನೆ ನಂತರ ಟೆಂಡರ್ ಕರೆಯಲಾಗುತ್ತದೆ’ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌. ಅನಿಲ್‌ ಕುಮಾರ್‌ ತಿಳಿಸಿದರು.

ಕೆಲವು ಮನೆಗಳ ಮಾಲೀಕರು ಗುಂಡಿ ತೆಗೆಸುವ ಗೋಜಿಗೆ ಹೋಗದೆ ಚರಂಡಿಗೆ ಹೊಂದಿಕೊಂಡು ಚಿಕ್ಕ ಚೇಂಬರ್‌ ನಿರ್ಮಿಸಿ ಅದರ ಮೂಲಕ ನೇರವಾಗಿ ಶೌಚದ ತ್ಯಾಜ್ಯ ಚರಂಡಿ ಸೇರುವಂತೆ ಮಾಡಿದ್ದಾರೆ. ಸ್ನಾನಗೃಹ ಅಡುಗೆ ಮನೆಯ ತ್ಯಾಜ್ಯ ಚರಂಡಿ ಸೇರದಂತೆ ತಡೆಯಲು ಒಳಚರಂಡಿ ವ್ಯವಸ್ಥೆಯೇ ಪರಿಹಾರ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಎಚ್‌. ಮಹಾಂತೇಶ್.

ಒಳಚರಂಡಿ ವಂಚಿತ ಚಳ್ಳಕೆರೆ

ನಗರದ ಹೊಸ ಬಡಾವಣೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾರ್ಡ್‌ಗಳು ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿವೆ. ಹೀಗಾಗಿ ನಗರದಲ್ಲಿ ಎಲ್ಲೆಂದರಲ್ಲೆ ಕೊಳಚೆ ನೀರು ತುಂಬಿಕೊಂಡಿದೆ. ವಿವಿಧ ವಾರ್ಡ್‌ಗಳಲ್ಲಿ ಕೊಳಚೆ ನೀರು ಹರಿದು ಹೋಗಲಿಕ್ಕೆ ನಿರ್ಮಿಸಿರುವ ಚರಂಡಿಗಳು ಬಹುತೇಕ ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಕಸದಿಂದ ಮುಚ್ಚಿ ಹೋಗಿವೆ.

ಮಳೆನೀರು ತಡೆಯಲು ನಗರಸಭೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಪ್ರತಿ ಮಳೆಗಾಲದಲ್ಲಿ ಮಳೆನೀರಿನ ಜತೆಗೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಗುಣಮಟ್ಟದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಗಾಂಧಿನಗರ ಅಂಬೇಡ್ಕರ್‌ ನಗರ ಜನತಾ ಕಾಲೊನಿ ರಹೀಂ ನಗರ ಮದಕರಿ ನಗರ ಇಂಜನ ಹಟ್ಟಿಯಲ್ಲಿ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗದಂತೆ ಚರಂಡಿಯ ಮೇಲೆ ಕಟ್ಟಡ ಕಾಂಪೌಂಡ್‌ ನಿರ್ಮಿಸಿಕೊಳ್ಳಲಾಗಿದೆ. ಕಸ ಹಾಗೂ ಕಟ್ಟಡದ ತ್ಯಾಜ್ಯಗಳಿಂದ ತುಂಬಿರುವ ಚರಂಡಿಗಳು ದುಃಸ್ಥಿತಿಗೆ ತಲುಪಿವೆ.

ವಿಠ್ಠಲ ನಗರ ಜನತಾ ಕಾಲೊನಿ ಗಾಂಧಿನಗರದ ಮಾರಮ್ಮಗುಡಿ ಬೆಂಗಳೂರು ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆ ಹಿಂಭಾಗ ಕುಲುಮೆಬೀದಿ ಶಾರದ ಪ್ರೌಢಶಾಲೆ ಬಳಿ ಹಾಗೂ ರಹೀಂನಗರ ಮುಂತಾದ ಕಡೆ ಚರಂಡಿಗಳು ಕಲ್ಲು ಮಣ್ಣಿನಿಂದ ತುಂಬಿಕೊಂಡಿವೆ.

‘ದುಃಸ್ಥಿತಿಯಲ್ಲಿರುವ ನಗರದ ಚರಂಡಿಗಳು ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ರಾತ್ರಿ ವೇಳೆ ಸಮಸ್ಯೆ ಹೆಚ್ಚಾಗಿದೆ. ಮಲೇರಿಯಾ ಕಾಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ ಎನ್ನುತ್ತಾರೆ’ ರಹೀಂ ನಗರದ ನಿವಾಸಿ ಹಣ್ಣಿನ ವ್ಯಾಪಾರಿ ವೆಂಕಟೇಶ್.‌

ಚರಂಡಿಗಳ ಸ್ವಚ್ಛತೆಗೆ ನಗರಸಭೆಯಿಂದ ಹಣ ವ್ಯಯಿಸುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕೆಸರು ಕೊಚ್ಚೆಯಿಂದ ತುಂಬಿದ ಚರಂಡಿಗಳಿಂದ ಸದಾ ಬೀರುತ್ತಿರುವ ದುರ್ವಾಸನೆ ನಾಗರೀಕರಲ್ಲಿ ಅಸಹ್ಯ ಹುಟ್ಟಿಸಿದೆ.

‘ನಗರದಲ್ಲಿ ಒಳಚರಂಡಿ ನಿರ್ಮಿಸುವ ಸಲುವಾಗಿ ₹ 120 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಗೊಳಿಸಿ ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ 10-12 ವರ್ಷ ಕಳೆದಿದೆ. ಇದುವರೆಗೆ ಅನುಮೋದನೆ ದೊರೆತಿಲ್ಲ. ಆದ್ದರಿಂದ ನಗರಸಭೆಯ ಕೆಲ ಯೋಜನೆಯ ಅನುದಾನದಲ್ಲಿ ಆದ್ಯತೆ ಮೇರೆಗೆ ಅಗತ್ಯದ ಆಧಾರದಲ್ಲಿ ಚರಂಡಿ ನಿರ್ಮಿಸಲಾಗುತ್ತದೆ’ ಎನ್ನುತ್ತಾರೆ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ.

109 ಕಿಮೀ. ಪೈಪ್‌ಲೈನ್‌

ಹಿರಿಯೂರು ನಗರಕ್ಕೆ ಮಂಜೂರಾಗಿರುವ ಒಳಚರಂಡಿ ಕಾಮಗಾರಿಯಲ್ಲಿ 109 ಕಿಮೀ. ಪೈಪ್‌ಲೈನ್‌ ನಾಲ್ಕು ಸಾವಿರ ಆಳಗುಂಡಿಗಳು (ಮ್ಯಾನ್‌ ಹೋಲ್‌ ಬದಲಿಗೆ ಯಂತ್ರದ ಸಹಾಯದಿಂದ ಬ್ಲಾಕೇಜ್‌ ಶುಚಿಗೊಳಿಸುವ ವ್ಯವಸ್ಥೆ) ಸುಮಾರು 8300 ಮನೆಗಳಿಗೆ ಯುಜಿಡಿ ಸಂಪರ್ಕ ಬಬ್ಬೂರು ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯದ ಹತ್ತಿರದಲ್ಲಿ 5 ದಶಲಕ್ಷ ಲೀಟರ್ ಸಾಮರ್ಥ್ಯದ ಸಿವೇಜ್‌ ಟ್ರೀಟ್‌ಮೆಂಟ್‌ ಘಟಕ ಆರಂಭಿಸಲಾಗುತ್ತದೆ.

ತ್ಯಾಜ್ಯವನ್ನು ಶುದ್ಧೀಕರಿಸಿ ಬಳಿಕ ನೀರನ್ನು ನದಿಗೆ ಬಿಡಲಾಗುತ್ತದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಒಂದು ವರ್ಷ ನಿರ್ವಹಣೆ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಾರೆ. ನಂತರ ನಗರಸಭೆ ನಿರ್ವಹಣೆ ಮಾಡುತ್ತದೆ. ಚರಂಡಿಯಲ್ಲಿ ಮಳೆ ನೀರು ಮಾತ್ರ ಹರಿಯುವಂತಾಗಬೇಕು. ಹಳೆಯ ಭಾಗದ ನಗರದಲ್ಲಿನ ಬಹಳಷ್ಟು ಮನೆಗಳ ಮಾಲೀಕರು ಶೌಚದ ತ್ಯಾಜ್ಯಕ್ಕೆ ರಸ್ತೆಯ ಮಧ್ಯದಲ್ಲಿ ಗುಂಡಿ ತೋಡಿದ್ದು ತುಂಬುವ ಗುಂಡಿಯನ್ನು ಸ್ವಚ್ಛಗೊಳಿಸುವುದು ದೊಡ್ಡ ಸವಾಲಾಗಿದೆ.

ಪೂರಕ ಮಾಹಿತಿ : ಸುವರ್ಣಾ ಬಸವರಾಜ್‌, ಶಿವಗಂಗಾ ಚಿತ್ತಯ್ಯ

ಚಳ್ಳಕೆರೆಯಲ್ಲಿ ಹೂಳು ತುಂಬಿರುವ ಚರಂಡಿ
ಹಿರಿಯೂರು ನಗರಸಭೆ
ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದ ರಸ್ತೆಯಲ್ಲಿ ಹಾಳಾಗಿರುವ ಮ್ಯಾನ್‌ಹೋಲ್
ಚಿತ್ರದುರ್ಗ ಸಿ.ಕೆ. ಪುರ ಮುಖ್ಯರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಕಲ್ಲುಗಳನ್ನು ತುಂಬಿರುವುದು
ಚಿತ್ರದುರ್ಗ ನಗರದ ಮುಖ್ಯರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದ ರಸ್ತೆಯ ಮ್ಯಾನ್‌ಹೋಲ್‌ನಲ್ಲಿ ಕಲ್ಲು ಮಣ್ಣು ತುಂಬಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.