ADVERTISEMENT

ಮಾನವ ರಹಿತ ವೈಮಾನಿಕ ವಾಹನ: ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ

ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 20:16 IST
Last Updated 15 ಡಿಸೆಂಬರ್ 2023, 20:16 IST
ಮಾನವ ರಹಿತ ವೈಮಾನಿಕ ವಾಹನ
ಮಾನವ ರಹಿತ ವೈಮಾನಿಕ ವಾಹನ   

ಚಿತ್ರದುರ್ಗ: ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ, ಅತಿ ವೇಗದ, ಮಾನವ ರಹಿತ ವೈಮಾನಿಕ ವಾಹನ (ಯುಎವಿ) ರಾಡಾರ್‌ ಸಂಪರ್ಕಕ್ಕೆ ಸಿಗದಂತೆ ಹಾರಾಟ ನಡೆಸುವ ಪ್ರಯೋಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಾಯುನೆಲೆಯಲ್ಲಿ ಶುಕ್ರವಾರ ಯಶಸ್ವಿಯಾಯಿತು.

ಬಾಲರಹಿತ (ಟೇಲ್‌ಲೆಸ್‌ ಕಾನ್ಫಿಗರೇಷನ್‌) ಸಂರಚನೆ ಹೊಂದಿದ ಯುಎವಿಯು ರಹಸ್ಯವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನ ಹೊಂದಿದ ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದಂತಾಗಿದೆ. ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ದೇಶವು ವೈಮಾನಿಕ ಕ್ಷೇತ್ರದ ತಂತ್ರಜ್ಞಾನದ ಪರಿಪಕ್ವತೆಗೆ ಇದು ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.

ಡಿಆರ್‌ಡಿಒ ಅಂಗಸಂಸ್ಥೆಯಾದ ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ವಿನ್ಯಾಸಗೊಳಿಸಿದ ಯುಎವಿ 2022ರ ಜುಲೈ 1ರಂದು ಪ್ರಯೋಗಾರ್ಥ ಹಾರಾಟದಲ್ಲಿ ಯಶಸ್ಸು ಕಂಡಿತ್ತು. ದೇಶೀಯವಾಗಿ ಸಿದ್ಧಪಡಿಸಿದ ಎರಡು ಮೂಲ ಮಾದರಿಗಳನ್ನು ಬಳಸಿಕೊಂಡು ಸಂರಚನೆಯಲ್ಲಿ ಸುಧಾರಣೆ ತರಲಾಯಿತು. ಆರು ಪ್ರಯೋಗಾರ್ಥ ಹಾರಾಟ ನಡೆಸಿದ ಯುಎವಿ, ಏಳನೇ ಹಾರಾಟದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಹಾರಾಟವನ್ನು ನಿಯಂತ್ರಿಸುವ ಏವಿಯಾನಿಕ್ಸ್‌ ವ್ಯವಸ್ಥೆ, ಹಾರಾಟದ ಕಾರ್ಯಾಚರಣೆ ಉತ್ತಮಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಈ ಹಿಂದಿನ ಡ್ರೋಣ್‌ಗಳು ಲಂಬಾಕಾರದ ರೆಕ್ಕೆಗಳನ್ನು ಹೊಂದಿರುತ್ತಿದ್ದವು. ಇದು ಬಾಲರಹಿತ ವ್ಯವಸ್ಥೆ ಹೊಂದಿದ್ದು, ಮೂಲ (ಮಾತೃ) ರಾಡಾರ್‌ ಹೊರತುಪಡಿಸಿ ಉಳಿದ ರಾಡಾರ್‌ಗಳ ಸಂಪರ್ಕಕ್ಕೆ ಸಿಗದೇ ರಹಸ್ಯವಾಗಿ ಕಾರ್ಯಾಚರಣೆ ನಡೆಸಲಿದೆ.

‘ಕ್ಲಿಷ್ಟಕರ ತಂತ್ರಜ್ಞಾನ ಹೊಂದಿರುವ ಈ ಪ್ರಯೋಗಾರ್ಥ ಹಾರಾಟದ ಯಶಸ್ಸು ದೇಶದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.