ADVERTISEMENT

ಬರ: ಜಾನುವಾರು ಮಾರಲು ಮುಂದಾದ ರೈತರು

ಮಳೆ ಇಲ್ಲ, ಮೇವಿನ ಕೊರತೆ; ಅಸಹಾಯಕತೆಗೆ ಒಳಗಾದ ಕೃಷಿಕ

ಶ್ವೇತಾ ಜಿ.
Published 13 ಅಕ್ಟೋಬರ್ 2023, 7:10 IST
Last Updated 13 ಅಕ್ಟೋಬರ್ 2023, 7:10 IST
   

ಹೊಸದುರ್ಗ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲ ಆವರಿಸಿದೆ. ಕೃಷಿಗೆ ಅಗತ್ಯವಾಗಿರುವ ಜಾನುವಾರುಗ ಳಿಗೆ ಮೇವು ಲಭ್ಯವಿಲ್ಲದ ಕಾರಣ ರೈತರು ಅವುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ಮೇವು ಸಂಗ್ರಹ ಇರುವವರು ಖರೀದಿಸಿ ಜಾನುವಾರುಗಳ ಜೀವ ಉಳಿಸಲಿ ಎಂದೇ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾಗಿ ಅನೇಕ ರೈತರು ಹೇಳಿದ್ದಾರೆ.

ಹೊಸದುರ್ಗದಲ್ಲಿ ಪ್ರತಿ ಗುರುವಾರ ಜಾನುವಾರು ಸಂತೆ ನಡೆಯುತ್ತದೆ. ಮಳೆ, ಬೆಳೆ ಉತ್ತಮವಾಗಿದ್ದರೆ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗ್ರಾಮಗಳಿಂದ ಜನರು ಜಾನುವಾರು ಮಾರಲು, ಖರೀದಿಸಲು ಬರುತ್ತಾರೆ.

ADVERTISEMENT

ಒಂದು ತಿಂಗಳಿಂದ ಸಂತೆಗೆ ಬರುವ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆ. ಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಬೆಳಿಗ್ಗೆ 8ರಿಂದ ಆರಂಭವಾಗಿ 11 ಗಂಟೆಗೆಲ್ಲ ಮುಗಿಯುತ್ತಿದ್ದ ಸಂತೆ, ಖರೀದಿಗೆ ಜನ ಬರದಿರುವುದರಿಂದ ಮಧ್ಯಾಹ್ನ 1ರವರೆಗೂ ನಡೆಯುತ್ತಿದೆ.

ಗುರುವಾರ ಖರೀದಿಗೆ ಆಸಕ್ತಿ ತೋರುವವರ ಕೊರತೆ ಕಂಡುಬಂದಿದ್ದರಿಂದ ಅನೇಕ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡದೇ ವಾಪಸ್‌ ಮನೆಗೆ ಕರೆದೊಯ್ದರು. ಕೆಲವು ಖರೀದಿದಾರರು ತೀರಾ ಕಡಿಮೆ ಬೆಲೆಗೆ ಜಾನುವಾರು ಕೇಳುತ್ತಿದ್ದಾರೆ. ಲಾಭ, ನಷ್ಟ ನೋಡದೆ ರೈತರು ಮಾರಾಟ ಮಾಡುತ್ತಿದ್ದಾರೆ ಎಂದು ಸಂತೆಯಲ್ಲಿದ್ದವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯಲ್ಲಿ ಎರಡು ಸಣ್ಣ ಕರುಗಳನ್ನು ಬಿಟ್ಟು, ನಾಟಿ ಹಸುವನ್ನು ಮಾರಾಟ ಮಾಡಿದ್ದೇವೆ. ಮೇವಿಗೆ ಬಹಳ ಅಭಾವ ಉಂಟಾಗಿದೆ. ಬೆಳೆಯೇ ಬರದಿರುವಾಗ ಮೇವು ಎಲ್ಲಿಂದ ತರುವುದು. ₹40,000ದಿಂದ ₹45,000 ಬೆಲೆಬಾಳುವ ಹಸುವನ್ನು ₹20,000ಕ್ಕೆ ಮಾರಿದ್ದೇನೆ. ಮಳೆ ಇಲ್ಲದ್ದರಿಂದ ನಾವು ಕೈ ಸುಟ್ಟುಕೊಳ್ಳುವುದು ತಪ್ಪಿಲ್ಲ’ ಎಂದು ಅಜ್ಜಂಪುರದ ರೈತ ಹರೀಶ್ ಬೇಸರ ವ್ಯಕ್ತಪಡಿಸಿದರು.

‘ಈವರೆಗೆ ಹಳ್ಳಿಗಳಲ್ಲಿ ಬೆರಳೆಣಿಕೆಯಷ್ಟು ಎತ್ತುಗಳಿದ್ದವು. ಅವುಗಳಿಂದಲೇ ರಾಗಿ, ಮುಸುಕಿನ ಜೋಳ ಬಿತ್ತನೆ ಸೇರಿದಂತೆ ಹಲವು ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಮೇವಿನ ಕೊರತೆಯಿಂದಾಗಿ ಈ ಬಾರಿ ಎಲ್ಲ ರೈತರೂ ಎತ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾದರೆ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಹುದು. ಸರ್ಕಾರ ಮೇವಿನ ವ್ಯವಸ್ಥೆ ಮಾಡಿದರೆ ಅನುಕೂಲವಾದೀತು’ ಎಂದು ಜೋಗಮ್ಮನಹಳ್ಳಿ ರೈತ ಉಗ್ರಪ್ಪ ಹೇಳಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಳೆಯ ಅನಿಶ್ಚಿತತೆ ಕಾಡುತ್ತಿರುತ್ತದೆ. ಅಕ್ಕ ಪಕ್ಕದ ಜಿಲ್ಲೆಗಳಾದ ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯ ರೈತರು ಜಾನುವಾರುಗಳನ್ನು ಕೊಳ್ಳಲು ಇಲ್ಲಿಗೆ ಬರುತ್ತಿದ್ದರು. ಈ ವರ್ಷ ಅಲ್ಲಿಯೂ ಬಲಗಾಲದ ಛಾಯೆ ಆವರಿಸಿರುವುದರಿಂದ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಸ್ಥಳೀಯರಾದ ತಿಪ್ಪೇಗೌಡ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.