ADVERTISEMENT

‘ಸಿರಿಧಾನ್ಯ ಕಣಜ’ ಹೊಸದುರ್ಗದಲ್ಲಿ ಮಳೆ ಅಭಾವ: ಸಂಕಷ್ಟದಲ್ಲಿ ಬೆಳೆಗಾರರು

ಖಾಲಿ ಬಿದ್ದ ಜಮೀನುಗಳು: ಮುಗಿಲತ್ತ ಮುಖ ಮಾಡಿದ ಕೃಷಿಕ

ಶ್ವೇತಾ ಜಿ.
Published 10 ಮೇ 2024, 5:09 IST
Last Updated 10 ಮೇ 2024, 5:09 IST
ಹೊಸದುರ್ಗದ ಕಾರೇಹಳ್ಳಿಯಲ್ಲಿ ರೈತರು ಭೂಮಿಯಲ್ಲಿ ಒಣ ಬೇಸಾಯ ಮಾಡಿರುವುದು 
ಹೊಸದುರ್ಗದ ಕಾರೇಹಳ್ಳಿಯಲ್ಲಿ ರೈತರು ಭೂಮಿಯಲ್ಲಿ ಒಣ ಬೇಸಾಯ ಮಾಡಿರುವುದು    

ಹೊಸದುರ್ಗ‌: ಒಂದು ವರ್ಷದಿಂದ ಮಳೆ ಸುರಿಯದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ವರುಣನ ಆಗಮನವಿಲ್ಲದೇ ಭೂಮಿಯಲ್ಲಿ ತಾಪಮಾನ ಹೆಚ್ಚಾಗಿದೆ. ವರ್ಷದಿಂದ ಜಮೀನುಗಳು ಖಾಲಿ ಬಿದ್ದಿವೆ. ತಾಲ್ಲೂಕಿನ ರೈತರು ಸಿರಿಧಾನ್ಯ ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಳ್ಳುವ ಸಮಯವಾದರೂ ವರುಣ ಕೃಪೆ ತೋರಿಲ್ಲ. ಈ ಬಾರಿ ಏನಾಗಬಹುದು ಎಂಬ ಆತಂಕ ಈಗ ಕೃಷಿಕರನ್ನು ಆವರಿಸಿದೆ. 

‘ಸಿರಿಧಾನ್ಯದ ಕಣಜ’ ಎಂದೇ ಹೆಸರುವಾಸಿಯಾಗಿರುವ ಹೊಸದುರ್ಗದಲ್ಲಿ ಸಾವೆ, ಕೂರಲೆ, ನವಣೆ, ಅಲಸಂದಿ, ಹೆಸರು ಬಿತ್ತನೆಗಾಗಿ ರೈತರು ಪ್ರತಿ ವರ್ಷ ಮೇ ತಿಂಗಳಲ್ಲಿ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೇ ಅಂತ್ಯದ ವೇಳೆಗೆ ಭರಣಿ ಮಳೆಯಾದ ನಂತರ ಸಿರಿಧಾನ್ಯ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗುತ್ತಿತ್ತು. ಆದರೀಗ ಸಮಯ ಮೀರಿದರೂ ವರ್ಷಧಾರೆಯಾಗುತ್ತಿಲ್ಲ. ಭೂಮಿ ಹದ ಮಾಡಬೇಕಾಗಿದ್ದ ಕೃಷಿಕ ಮುಗಿಲತ್ತ ಮುಖ ಮಾಡಿದ್ದಾನೆ.

‘ಈಗಾಗಲೇ ಮಳೆಯಾಗಬೇಕಿತ್ತು. ಆದರೂ ಕೆಲ ರೈತರು ವರುಣನನ್ನು ನಂಬಿ ಒಣ ಬೇಸಾಯ ಮಾಡಿದ್ದಾರೆ. ಉಳಿದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ತಕ್ಷಣ ವರ್ಷಧಾರೆಯಾದರೆ ಸಿರಿಧಾನ್ಯ ಬಿತ್ತನೆಗೆ ಅನುಕೂಲವಾಗುತ್ತದೆ. 15 ದಿನಗಳ ನಂತರ ಮಳೆಯಾದರೆ, ನಿರೀಕ್ಷಿತ ಪ್ರಮಾಣದ ಬೆಳೆ ಸಾಧ್ಯವಿಲ್ಲ. ಕಳೆದ ಬಾರಿ ಮುಂಗಾರು ಆರಂಭದಲ್ಲಿ ಒಂದೆರಡು ಬಾರಿ ಉತ್ತಮ ಮಳೆಯಾಗಿದ್ದರಿಂದ ಮುಂದೆಯೂ ಹದ ಮಳೆ ಸುರಿಯಬಹುದೆಂಬ ನಿರೀಕ್ಷೆಯಿಂದ ತಾಲ್ಲೂಕಿನ ರೈತರು ಸಿರಿಧಾನ್ಯ ಬಿತ್ತನೆ ಮಾಡಿದ್ದರು. ಕ್ರಮೇಣ ಬರಗಾಲ ಆವರಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಭೂಮಿಯೊಳಗಿನ ತಾಪ ಹೆಚ್ಚಾಗಿದ್ದು, ಎರಡು ಬಾರಿ ಹದ ಮಳೆಯಾದರೆ ಮಾತ್ರ ನಿರೀಕ್ಷಿತ ಪ್ರಮಾಣದ ಆದಾಯ ಗಳಿಸಬಹುದು. ಈ ಬಾರಿಯಾದರೂ ಸಮಯಕ್ಕೆ ಸರಿಯಾಗಿ ಮಳೆಯಾದರೆ ಸಾಕು’ ಎಂದು ಕೊರಟಿಕೆರೆ ರೈತ ಕೆ.ಸಿ. ಮಹೇಶ್ವರಪ್ಪ ಹೇಳಿದರು.

ADVERTISEMENT

‘ಸರ್ಕಾರ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್‌ಗೆ ₹10,000 ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ ಕಳೆದ ಬಾರಿ ಹಲವು ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನ ಕೊಟ್ಟಿಲ್ಲ. ಕೊಳೆವೆಬಾವಿಗಳಲ್ಲಿ ನೀರಿಲ್ಲ. ಪಕ್ಕದಲ್ಲೇ ವಿವಿ ಸಾಗರ ಜಲಾಶಯವಿದ್ದರೂ ಹೊಸದುರ್ಗ ತಾಲ್ಲೂಕಿನ ರೈತರಿಗೆ ಜೀವಜಲ ಸಿಗುತ್ತಿಲ್ಲ. ಅಲ್ಲಿನ ನೀರನ್ನು ದೂರದ ಚಳ್ಳಕೆರೆ, ಹೊಳಲ್ಕೆರೆಗೆ ನೀಡಲಾಗುತ್ತಿದೆ. ತೋಟಗಳೆಲ್ಲಾ ಒಣಗುತ್ತಿವೆ. ಜಮೀನುಗಳು ಖಾಲಿಯಿವೆ. ರಾಗಿಯನ್ನೂ ಬೆಳೆಯಲಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರ ಪರಿಸ್ಥಿತಿ ಚಿಂತಾಜನಕವಾಗಲಿದೆ’ ಎಂದು ಅರೇಹಳ್ಳಿಯ ರೈತ ತಿಪ್ಪೇಸ್ವಾಮಿ ಅಳಲು ತೋಡಿಕೊಂಡರು.

‘ಸಿರಿಧಾನ್ಯ ಬಿತ್ತನೆಗೆ ಮಳೆಯ ಅಗತ್ಯವಿದೆ. ಈಗಾಗಲೇ ಒಂದು ವಾರ ತಡವಾಗಿದೆ. ಕೂಡಲೇ ಮಳೆಯಾದರೆ ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ತಾಲ್ಲೂಕಿನಾದ್ಯಂತ ಒಟ್ಟು 19 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಸಿರಿಧಾನ್ಯ ಬಿತ್ತನೆಯಾಗಿತ್ತು. ಆದರೆ ಬೆಳೆದ ಬೆಳೆ ಯಾವುದೂ ಕೈ ಸೇರಿಲ್ಲ. ಈಗಾಗಲೇ ತಾಲ್ಲೂಕಿನಾದ್ಯಂತ ಅಂದಾಜು 8500 ರೈತರಿಗೆ ಸಿರಿಧಾನ್ಯ ಪ್ರೋತ್ಸಾಹಧನ ನೀಡಲಾಗಿದೆ. ಉಳಿದ ರೈತರಿಗೆ ಪ್ರೋತ್ಸಾಹಧನ ಬರುವ ನಿರೀಕ್ಷೆಯಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್‌. ಈಶ ಹೇಳಿದರು.

‘ಈ ಬಾರಿ ಪೂರ್ವ ಮುಂಗಾರಿನಲ್ಲಿ 12 ಸಾವಿರ ಹೆಕ್ಟೇರ್‌, ಮುಂಗಾರಿನಲ್ಲಿ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆಯಾಗುವ ಸಾಧ್ಯತೆಯಿದೆ. ಸಿರಿಧಾನ್ಯವು ಕಡಿಮೆ ಮಳೆ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಉತ್ಕೃಷ್ಟವಾಗಿ ಬೆಳೆದು, ಉತ್ತಮ ಆದಾಯ ನೀಡಬಹುದಾದ ಬೆಳೆ. ಹೊಸದುರ್ಗದ ಭೂಮಿಯು ಸಿರಿಧಾನ್ಯ ಬೆಳೆಗೆ ಯೋಗ್ಯವಾಗಿದ್ದು, ಹೆಚ್ಚಿನ ರೈತರು ಸಿರಿಧಾನ್ಯ ಬೆಳೆಯಬಹುದು. ಕೃಷಿಕರಿಗೆ ತೊಂದರೆಯಾಗದಂತೆ ತಾಲ್ಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಗೊಬ್ಬರ, ಹೆಸರು, ಅಲಸಂದಿ, ತೊಗರಿ ಹಾಗೂ ಶೇಂಗಾವನ್ನು ದಾಸ್ತಾನು ಇಡಲಾಗಿದೆ. ರಿಯಾಯಿತಿ ದರದಲ್ಲಿ ಅವುಗಳನ್ನು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಬರಗಾಲ ಆವರಿಸಿದ್ದು ಮೇವಿನ ಅಭಾವವೂ ಅಧಿಕವಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಇಂತಹ ಸಮಯದಲ್ಲಿ ಸರ್ಕಾರ 8 ತಿಂಗಳುಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಕೂಡಲೇ ಆ ಹಣವನ್ನಾದರೂ ನೀಡಿದರೆ ಬಿತ್ತನೆ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಸರ್ಕಾರ ರೈತರ ಪರ ಕಾಳಜಿ ಹೊಂದಿರಬೇಕು.  
-ಕೆ.ಸಿ. ಮಹೇಶ್ವರಪ್ಪ, ರೈತ ಕೊರಟಿಕೆರೆ
ಹವಾಮಾನ ಇಲಾಖೆ ಉತ್ತಮ ಮಳೆಯಾಗುವ ಬಗ್ಗೆ ವರದಿ ನೀಡಿದೆ. ಈ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಸಿರಿಧಾನ್ಯ ಬಿತ್ತನೆಗೆ ಕಾಲಾವಕಾಶವಿದೆ.
-ಸಿ.ಎಸ್‌. ಈಶ, ಸಹಾಯಕ ಕೃಷಿ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.