ಚಿತ್ರದುರ್ಗ: ‘ಸ್ಪರ್ಧಾತ್ಮಕ ಯುಗದಲ್ಲಿ ಸ್ವಾವಲಂಬಿಗಳಾಗಿ ಬದುಕಲು ‘ಶಿಕ್ಷಕ ತರಬೇತಿ’ ಸಹಕಾರಿಯಾಗಿದ್ದು, ಏಕಾಗ್ರತೆಯಿಂದ ಅಧ್ಯಯನ ನಡೆಸಿದರೆ ಯಶಸ್ಸು ನಿಮ್ಮದಾಗುತ್ತದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ.ಕೆ. ವೆಂಕಟೇಶ್ ತಿಳಿಸಿದರು.
ಇಲ್ಲಿಯ ಪಿಳ್ಳೆಕೆರನಹಳ್ಳಿಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ, ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿ.ಇಡಿ ಶಿಕ್ಷಣಕ್ಕೆ ತನ್ನದೇ ಆದ ಶಕ್ತಿಯಿದೆ. ಚಾಕಚಕ್ಯತೆ, ಕೌಶಲ, ಆತ್ಮವಿಶ್ವಾಸ ಮೂಡಿಸುವ ಕೋರ್ಸ್ ಇದಾಗಿದೆ. ಪ್ರಶಿಕ್ಷಣಾರ್ಥಿಗಳು ಸಕಾರಾತ್ಮಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಿ’ ಎಂದು ತಿಳಿಸಿದರು.
‘ಗುರು ಪರಂಪರೆ ದೇಶವಾದ ದೇಶದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನಮಾನವಿದೆ. ಆದ್ದರಿಂದ ತರಬೇತಿ ಅವಧಿಯ ಪ್ರತಿ ತರಗತಿಯನ್ನು ಶ್ರದ್ಧೆಯಿಂದ ಆಲಿಸಿದಾಗ ಮಾತ್ರ ವೃತ್ತಿ ಬದುಕಿನಲ್ಲಿ ಗೌರವ ಸಿಗುತ್ತದೆ’
ಎಂದರು.
ಗಾಣಿಗರ ಗುರುಪೀಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ‘ನೂರು ಪುಸ್ತಕ ಓದುವುದು ಒಂದು ಒಳ್ಳೆಯ ಮಾತು ಕೇಳುವುದಕ್ಕೆ ಸಮ. ಇದರಿಂದ ಶ್ರಮ ಮತ್ತು ಸಮಯ ಉಳಿಯುತ್ತದೆ. ಮಾತು ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು. ಅದಕ್ಕೆ ಬದಲಾಗಿ ಮನಸ್ಸನ್ನು ಅರಳಿಸುವಂತಿರಬೇಕು’ ಎಂದು ಹೇಳಿದರು.
‘ಮನುಷ್ಯರನ್ನು ಕಟ್ಟುವುದೇ ಕಲಾ ಮತ್ತು ಬಿ.ಇಡಿ ವಿಭಾಗ. ಯಾವ ಕ್ಷೇತ್ರದಲ್ಲಿದ್ದೇವೆ ಎನ್ನುವುದಕ್ಕಿಂತ ಎಷ್ಟು ಕ್ರಿಯಾಶೀಲವಾಗಿದ್ದೇವೆ ಎನ್ನುವುದು ಬಹು ಮುಖ್ಯ. ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ
ತಿಳಿಸಿದರು.
ರಂಗ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ. ಜಂಬುನಾಥ ಮಾತನಾಡಿ, ‘ಬಿ.ಇಡಿ ತರಬೇತಿ ಮುಗಿಸಿಕೊಂಡು ಹೋಗುವವರು ಆದರ್ಶ ಶಿಕ್ಷಕರರಾಗಬೇಕೆಂಬ ಪಣ ತೊಡಬೇಕು. ಆಗ ಮಾತ್ರ ನಿಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಲು ಸಾಧ್ಯ. ತಂತ್ರಜ್ಞಾನದ ಜತೆ ಹೆಜ್ಜೆ ಹಾಕಿದಾಗ ಮಾತ್ರ ಹೊಸತನ್ನು ಕಲಿಯಲು ಸಾಧ್ಯ’ ಎಂದು ಹೇಳಿದರು.
2019–2021 ಸಾಲಿನ ಬಿ.ಇಡಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಸ್ಮಿಯಾಬಾನು, ರಮ್ಯಾ, ಸುಷ್ಮಾ, ತನ್‌ಹಾಜ್ ಅವರನ್ನು ಸನ್ಮಾನಿಸಲಾಯಿತು.
ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಪ್ರೊ.ಎಂ.ಆರ್. ಜಯಲಕ್ಷ್ಮಿ, ಬಾಪೂಜಿ ದೂರಶಿಕ್ಷಣ ಸಂಯೋಜನಾಧಿಕಾರಿ ಪ್ರೊ.ಎ.ಎಂ. ರುದ್ರಪ್ಪ, ನಿವೃತ್ತ ಉಪನ್ಯಾಸಕ ಡಾ.ಎಂ.ಕೆ. ಪ್ರಭುದೇವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.