ಜಿ.ಬಿ.ನಾಗರಾಜ್
ಚಿತ್ರದುರ್ಗ: ಇಲ್ಲಿನ ಆಡುಮಲ್ಲೇಶ್ವರ ಮೃಗಾಲಯಕ್ಕೆ ಇಸ್ರೇಲ್‌ನಿಂದ ಜೀಬ್ರಾ ತರುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕರೆ ಅಕ್ಟೋಬರ್ ವೇಳೆಗೆ ಮೂರು ಜೀಬ್ರಾಗಳು ವಿದೇಶದಿಂದ ಕೋಟೆನಾಡಿಗೆ ಬರಲಿವೆ.
ಇಸ್ರೇಲ್ ಜೊತೆಗೆ ಈ ಕುರಿತು ಪತ್ರ ವ್ವಯಹಾರ ನಡೆದಿದೆ. ಎರಡು ತಿಂಗಳಲ್ಲಿ ಜೀಬ್ರಾಗಳನ್ನು ಹಸ್ತಾಂತರಿಸಲು ಒಪ್ಪಿಗೆ ದೊರೆತಿದೆ. ಒಂದು ಗಂಡು ಹಾಗೂ ಎರಡು ಹೆಣ್ಣು ಜೀಬ್ರಾಗಳು ಆಡುಮಲ್ಲೇಶ್ವರ ಮೃಗಾಲಯ ಸೇರಲಿವೆ. ಇವುಗಳನ್ನು ಸುರಕ್ಷಿತವಾಗಿ ತರಲು ಇನ್ನೂ ಎರಡು ತಿಂಗಳು ಕಾಲಾವಕಾಶ ಬೇಕಿದೆ.
‘ಮೃಗಾಲಯಕ್ಕೆ ಹೊಸ ಪ್ರಾಣಿಗಳ ಸೇರ್ಪಡೆ ನಿರಂತರವಾಗಿ ನಡೆಯುತ್ತಿದೆ. ವಿದೇಶದಿಂದ ಜೀಬ್ರಾ ತರಿಸಿ ಆಡುಮಲ್ಲೇಶ್ವರ ಮೃಗಾಲಯಕ್ಕೆ ನೀಡಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪುರೇಷ ಸಿದ್ಧಪಡಿಸಿದೆ. ಹಲವು ಸುತ್ತಿನ ಮಾತುಕತೆ, ಪತ್ರ ವ್ಯಹಾರಗಳು ನಡೆದಿವೆ’ ಎಂದು ಮೃಗಾಲಯದ ಮೂಲಗಳು ಮಾಹಿತಿ ನೀಡಿವೆ.
ಜೋಗಿಮಟ್ಟಿ ಮೀಸಲು ಅರಣ್ಯದ ತಪ್ಪಲಿನಲ್ಲಿರುವ ಆಡುಮಲ್ಲೇಶ್ವರ ಮೃಗಾಲಯ ಹೊಸ ಪ್ರಾಣಿಗಳ ಸೇರ್ಪಡೆಯಿಂದ ಆಕರ್ಷಣೆ ಪಡೆಯುತ್ತಿದೆ. ಇತ್ತೀಚೆಗೆ ಬಂದಿರುವ ಎರಡು ಹುಲಿಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಸ್ವಚ್ಛಂದವಾಗಿ ವಿಹರಿಸುತ್ತ ನೋಡುಗರಿಗೆ ಮುದ ನೀಡುತ್ತಿವೆ. ಒಂದೊಂದೇ ಪ್ರಾಣಿಗಳು ಮೃಗಾಲಯ ಸೇರುತ್ತಿರುವುದರಿಂದ ಹೊಸ ಮೆರುಗು ಪಡೆಯುತ್ತಿದೆ.
ಮೃಗಾಲಯಕ್ಕೆ ವಿದೇಶದಿಂದ ಹೊಸ ಪಕ್ಷಿಗಳನ್ನು ಕರೆತರುವ ಸಿದ್ಧತೆಯೂ ನಡೆಯುತ್ತಿದೆ. ಇದಕ್ಕೆ ಈಗಾಗಲೇ ನಾಲ್ಕು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಎಮು ಇದ್ದು, ಇನ್ನೂ ಎರಡು ಎಮುಗಳನ್ನು ತರಲು ತೀರ್ಮಾನಿಸಲಾಗಿದೆ. ಮೈಸೂರು, ಬನ್ನೇರುಘಟ್ಟ, ಗದಗ ಹಾಗೂ ಬೆಳಗಾವಿ ಮೃಗಾಲಯದಿಂದಲೂ ಕೆಲ ಪಕ್ಷಿಗಳು ಬರಲಿವೆ. ಮಕ್ಕಳನ್ನು ಹೆಚ್ಚು ಆಕರ್ಷಿಸುವ ಪಕ್ಷಿಗಳಿಗೆ ಪ್ರಾಧಾನ್ಯ ನೀಡಲಾಗುತ್ತಿದೆ.
ಮೃಗಾಲಯ ಹೊಸ ರೂಪ ಪಡೆದಿದ್ದು, ಪ್ರಾಣಿಗಳ ಮನೆಯನ್ನು ನವೀಕರಿಸಲಾಗಿದೆ. ಮೃಗಾಲಯ ಅಭಿವೃದ್ಧಿಗೆ ₹ 2.77 ಕೋಟಿ ಅನುದಾನವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ ನೀಡುತ್ತಿದೆ. ರಾಜ್ಯದ ಮೃಗಾಲಯಗಳಲ್ಲಿ ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯಕ್ಕೆ ಹೆಚ್ಚು ಆದಾಯ ಬರುತ್ತಿದೆ. ಇದರಲ್ಲಿ ಒಂದಷ್ಟನ್ನು ಅನುದಾನದ ರೂಪದಲ್ಲಿ ಕಿರು ಮೃಗಾಲಯಗಳಿಗೆ ನೀಡಲಾಗುತ್ತಿದೆ. ಇದು ಆಡುಮಲ್ಲೇಶ್ವರ ಮೃಗಾಲಯ ಅಭಿವೃದ್ಧಿಗೆ ವರದಾನವಾಗಿದೆ.
ವರ್ಷದಿಂದ ವರ್ಷಕ್ಕೆ ಮೃಗಾಲಯ ಅಭಿವೃದ್ಧಿ ಆಗುತ್ತಿದೆ. ಇಲ್ಲಿ ಸಂಗ್ರಹವಾಗುತ್ತಿರುವ ಆದಾಯ ಕೂಡ ಏರಿಕೆಯಾಗುತ್ತಿದೆ. ಪ್ರವಾಸಿಗರ ಭೇಟಿಯಿಂದ 2021–22ನೇ ಸಾಲಿನಲ್ಲಿ ₹ 26 ಲಕ್ಷ ಸಂಗ್ರಹವಾದರೆ, 2022– 23ರಲ್ಲಿ ₹ 45 ಲಕ್ಷ ಆದಾಯ ಬಂದಿದೆ. ಪ್ರಾಣಿಗಳ ದತ್ತು ಪ್ರಕ್ರಿಯೆ ಜನಪ್ರಿಯತೆ ಪಡೆದುಕೊಂಡಿದ್ದು ₹ 17 ಲಕ್ಷ ಸಂಗ್ರಹವಾಗಿದೆ. ವಾರಾಂತ್ಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಏರಿದೆ. ಹೊಸ ಪ್ರಾಣಿಗಳ ಸೇರ್ಪಡೆಯಿಂದ ಇನ್ನಷ್ಟು ಆಕರ್ಷಣೆ ಪಡೆದುಕೊಂಡರೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ.
ವಿಶೇಷ ಮಾದರಿ ಮನೆ
ಪ್ರಾಣಿಗಳ ವೀಕ್ಷಣೆಗೆ ಮೃಗಾಲಯದಲ್ಲಿ ಮಾಡಿರುವ ನೂತನ ವ್ಯವಸ್ಥೆ ಗಮನ ಸೆಳೆಯುತ್ತಿದೆ. ಪಾರಂಪರಿಕ ಶೈಲಿಯಲ್ಲಿ ನೆರಳಿನ ವ್ಯವಸ್ಥೆ ಮಾಡಿರುವುದು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕೆಲ ಪ್ರಾಣಿಗಳು ಪ್ರವಾಸಿಗರಿಗೆ ದರ್ಶನ ನೀಡುವುದು ಅಪರೂಪ. ಪ್ರಾಣಿಗಳಿಗೆ ಕಾಯುತ್ತ ಕುಳಿತುಕೊಳ್ಳುವ ಪ್ರಸಂಗ ಪ್ರವಾಸಿಗರಿಗೆ ಎದುರಾಗುತ್ತದೆ. ನೆರಳು ಆಸನ ವ್ಯವಸ್ಥೆ ಅನುಕೂಲ ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಗುಡಿಸಲು ಮಾದರಿಯಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಿರುವುದು ಪ್ರವಾಸಿಗರಿಗೆ ಇಷ್ಟವಾಗಿದೆ.
ಬಸ್ ವ್ಯವಸ್ಥೆ ಇಲ್ಲ
ಆಡುಮಲ್ಲೇಶ್ವರ ಮೃಗಾಲಯಕ್ಕೆ ಸಾರಿಗೆ ಸಂಪರ್ಕದ ಕೊರತೆ ಇದೆ. ಸಮೂಹ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ವಾಹನಗಳಲ್ಲಿ ಮಾತ್ರ ಸಾಗಬೇಕಿದೆ. ನಗರದ ಹೊರ ವಲಯದಲ್ಲಿರುವ ಮೃಗಾಲಯಕ್ಕೆ ಕೆಎಸ್‌ಆರ್‌ಟಿಸಿ ಈ ಮೊದಲು ಬಸ್ ವ್ಯವಸ್ಥೆ ಕಲ್ಪಿಸಿತ್ತು. ಕೋವಿಡ್ ಬಳಿಕ ಈ ಸೇವೆ ಸ್ಥಗಿತಗೊಂಡಿತು. ದ್ವಿಚಕ್ರ ವಾಹನ ಕಾರು ಆಟೊಗಳಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುತ್ತಾರೆ. ಮೃಗಾಲಯಕ್ಕೆ ಆಟೊ ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.