ADVERTISEMENT

ಚಿತ್ರದುರ್ಗ: ಕೆರೆಯ ನಡುವೆ, ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ!

ಅರಸನ ಕೆರೆಯೊಳಗೆ ಕರೆಂಟ್‌ ಭಯ, ಪ್ರವಾಸಿಮಂದಿರದ ಪಕ್ಕದ ರಸ್ತೆಯಲ್ಲಿ ಆತಂಕದ ವಾತಾವರಣ

ಎಂ.ಎನ್.ಯೋಗೇಶ್‌
Published 24 ಅಕ್ಟೋಬರ್ 2024, 7:05 IST
Last Updated 24 ಅಕ್ಟೋಬರ್ 2024, 7:05 IST
ಮುರುಘಾ ಮಠದ ಮುಂದಿನ ಅರಸನ ಕೆರೆಯೊಳಗೆ ವಿದ್ಯುತ್‌ ಕಂಬಗಳ ಸಾಲು ಹಾದು ಹೋಗಿರುವುದು
ಮುರುಘಾ ಮಠದ ಮುಂದಿನ ಅರಸನ ಕೆರೆಯೊಳಗೆ ವಿದ್ಯುತ್‌ ಕಂಬಗಳ ಸಾಲು ಹಾದು ಹೋಗಿರುವುದು   

ಚಿತ್ರದುರ್ಗ: ನಗರದ ವಿವಿಧೆಡೆ ಇರುವ ವಿದ್ಯುತ್‌ ಕಂಬಗಳ ಅವ್ಯವಸ್ಥೆ ಆಶ್ಚರ್ಯ ಹಾಗೂ ಆತಂಕ ಉಂಟುಮಾಡುವಂತಿದೆ. ತುಂಬಿ ನಿಂತಿರುವ ಕೆರೆಯ ನಡುವೆ, ರಸ್ತೆ ಮಧ್ಯದಲ್ಲಿ ವಿದ್ಯುತ್‌ ಕಂಬಗಳಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಹಿಡಿದಂತಿದೆ.

ಮುರುಘಾ ಮಠದ ಮುಂದಿನ ಐತಿಹಾಸಿಕ ಅರಸನ ಕೆರೆಯ ನೀರಿನ ನಡುವೆ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿದ್ದು ಅಲ್ಲಿ ಓಡಾಡುವ ಜನರಿಗೆ ಆಶ್ಚರ್ಯ ತರಿಸುತ್ತಿವೆ. ಈಗ ಎಲ್ಲೆಡೆ ಮಳೆ ಸುರಿಯುತ್ತಿದ್ದು, ಕೆರೆ ತುಂಬಿ ನಿಂತಿದೆ. ಕೆರೆಯ ದಡದಲ್ಲೇ ವಿದ್ಯುತ್‌ ಪರಿವರ್ತಕವಿದ್ದು, ಕಂಬಗಳ ಸಾಲು ಕೆರೆಯ ನಡುವೆಯೇ ಸಾಗಿ ಹೋಗಿದೆ. ಹಲವು ವರ್ಷಗಳಿಂದ ಈ ಕಂಬಗಳನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಬೇಡಿಕೆ ಈಡೇರಿಲ್ಲ.

ಅರಸನ ಕೆರೆಯಲ್ಲಿ ಮೀನು ಸಾಕಣೆ ಮಾಡಲಾಗಿದ್ದು, ಸ್ಥಳೀಯ ಮೀನುಗಾರರು ಆಗಾಗ ಮೀನು ಹಿಡಿಯಲು ಕೆರೆಗೆ ಇಳಿಯುತ್ತಾರೆ. ವಿದ್ಯುತ್‌ ಕಂಬಗಳ ತಂತಿಗಳು ಕೆಳಗೇ ನೇತಾಡುತ್ತಿದ್ದು, ಮೀನುಗಾರರಲ್ಲಿ ಭಯ ಸೃಷ್ಟಿಸಿದೆ. ಮೀನುಗಾರರು ಕೂಡ ಈ ಬಗ್ಗೆ ನಗರಸಭೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಗರಸಭೆ ಅಧಿಕಾರಿಗಳು ಕೂಡ ಬೆಸ್ಕಾಂ ಸಿಬ್ಬಂದಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೂ ಕಂಬಗಳು ಸ್ಥಳಾಂತರಗೊಂಡಿಲ್ಲ.

ADVERTISEMENT

‘ಕಂಬಗಳಲ್ಲಿ ಅಳವಡಿಸಲಾಗಿರುವ ತಂತಿಗಳು ಕೈಗೆಟಕುವ ಅಂತರದಲ್ಲಿ ನೇತಾಡುತ್ತಿವೆ. ಯಾವಾಗ ಕಳಚಿ ಬೀಳುತ್ತವೋ ಎಂಬ ಭಯ ಕಾಡುತ್ತಿದೆ. ಕಡೇಪಕ್ಷ ಕೆರೆ ದಡಕ್ಕಾದರೂ ಕಂಬಗಳನ್ನು ಸ್ಥಳಾಂತರಿಸುವಂತೆ ಕೇಳಿದ್ದೇವೆ. ಆದರೂ ಸ್ಥಳಾಂತರ ಮಾಡಿಲ್ಲ’ ಎಂದು ಸ್ಥಳೀಯ ಮೀನುಗಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ನಡುವೆ ಕಂಬಗಳು:

ನಗರದ ಪ್ರವಾಸಿ ಮಂದಿರದ ಪಕ್ಕ ಬಿ.ಡಿ. ರಸ್ತೆಗೆ ಹೊಂದಿಕೊಂಡಿರುವ ರಸ್ತೆಯ ನಡುವೆಯೇ ವಿದ್ಯುತ್‌ ಕಂಬಗಳ ಸಾಲು ಇದೆ. ಎರಡೂ ಕಡೆ ಜಾಗವಿದ್ದು, ನಡುವೆ ವಿದ್ಯುತ್‌ ಪರಿವರ್ತಕ ಹಾಗೂ ಕಂಬಗಳಿವೆ. ಈ ಕಂಬಗಳನ್ನೂ ರಸ್ತೆ ಬದಿಗೆ ಸ್ಥಳಾಂತರಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ.

ಮೊದಲು ಕಂಬಗಳು ರಸ್ತೆ ಬದಿಯಲ್ಲೇ ಇದ್ದವು. ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿ ಮಾದಾರ ಚನ್ನಯ್ಯ ಸಭಾಭವನ ಹಾಗೂ ಲಿಡ್ಕರ್‌ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಅದಕ್ಕಾಗಿ ರಸ್ತೆ ವಿಸ್ತರಿಸಲಾಗಿದೆ. ನಂತರ ಬದಿಯಲ್ಲಿದ್ದ ವಿದ್ಯುತ್‌ ಕಂಬಗಳು ರಸ್ತೆ ಮಧ್ಯೆ ಬಂದಿವೆ. ಮಧ್ಯದಲ್ಲಿರುವ ಕಂಬಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸುವಂತೆ ವರ್ಷದ ಹಿಂದೆಯೇ ಬೆಸ್ಕಾಂ ಸಿಬ್ಬಂದಿಗೆ ಕೋರಲಾಗಿದೆ. ಆದರೆ ಕಂಬಗಳು ಮಾತ್ರ ಇನ್ನೂ ಅಲ್ಲೇ ಇವೆ.

‘ಇಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲದ ಕಾರಣ ವಾಹನ ಸವಾರರು ಕಾಣದೇ ಕಂಬಕ್ಕೆ ಗುದ್ದಿದ ಘಟನೆಗಳಿಗೆ ಲೆಕ್ಕವಿಲ್ಲ. ವರ್ಷದಿಂದಲೂ ಇದೇ ಸ್ಥಿತಿ ಇದ್ದು, ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ’ ಎಂದು ಪ್ರವಾಸಿ ಮಂದಿರದ ಪಕ್ಕ ಹಣ್ಣಿನ ವ್ಯಾಪಾರ ನಡೆಸುವ ಚಂದ್ರಪ್ಪ ತಿಳಿಸಿದರು.

ಪ್ರವಾಸಿ ಮಂದಿರದ ಪಕ್ಕದ ರಸ್ತೆ ಮಧ್ಯಯೇ ವಿದ್ಯುತ್‌ ಕಂಬಗಳಿರುವುದು
ಅರಸನ ಕೆರೆಯೊಳಗೇ ಸಾಲು ವಿದ್ಯುತ್‌ ಕಂಬ ನೇತಾಡುವ ತಂತಿ; ಮೀನುಗಾರರಲ್ಲಿ ಭಯ ತಿರುಗಿಯೂ ನೋಡದ ಬೆಸ್ಕಾಂ ಸಿಬ್ಬಂದಿ; ಆಕ್ರೋಶ
ಸಾರ್ವಜನಿಕರಿಗೆ ಅಪಾಯ ತಂದೊಡ್ಡಿರುವ ವಿದ್ಯುತ್‌ ಕಂಬಗಳನ್ನು ಪರಿಶೀಲಿಸಲಾಗುವುದು. ಅರಸನ ಕೆರೆಯಲ್ಲಿರುವ ಕಂಬಗಳನ್ನು ಶೀಘ್ರ ಸ್ಥಳಾಂತರಿಸಲಾಗುವುದು
ತಿಮ್ಮರಾಯಪ್ಪ ಕಾರ್ಯಪಾಲಕ ಎಂಜಿನಿಯರ್‌ ಬೆಸ್ಕಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.