ADVERTISEMENT

ತೆರಿಗೆಯ ಪ್ರತಿ ಪೈಸೆಯೂ ಸಾರ್ವಜನಿಕರಿಗೆ ಸಲ್ಲಲಿ: ಜಾನ್ ಮೈಕಲ್ ಕುನ್ಹಾ

ಹೊಳಲ್ಕೆರೆ: ₹ 2.25 ಕೋಟಿ ವೆಚ್ಚದ ವಕೀಲರ ಭವನಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 17:16 IST
Last Updated 1 ಸೆಪ್ಟೆಂಬರ್ 2018, 17:16 IST
ಹೊಳಲ್ಕೆರೆಯಲ್ಲಿ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಕೀಲರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ, ಶಾಸಕ ಎಂ.ಚಂದ್ರಪ್ಪ ಇದ್ದರು.
ಹೊಳಲ್ಕೆರೆಯಲ್ಲಿ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಕೀಲರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ, ಶಾಸಕ ಎಂ.ಚಂದ್ರಪ್ಪ ಇದ್ದರು.   

ಹೊಳಲ್ಕೆರೆ:ಜನಸಾಮಾನ್ಯರು ಸರ್ಕಾರಕ್ಕೆ ಕಟ್ಟುತ್ತಿರುವ ತೆರಿಗೆಯ ಪ್ರತಿ ಪೈಸೆಯೂ ಅವರ ಶ್ರೇಯೋಭಿವೃದ್ಧಿಗೆ ವಿನಿಯೋಗ ಆಗಬೇಕು ಎಂದು ಹೈಕೋರ್ಟ್ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಹೇಳಿದರು.

ಪಟ್ಟಣದಲ್ಲಿ ಶನಿವಾರ ₹ 2.25 ಕೋಟಿ ವೆಚ್ಚದ ವಕೀಲರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ. ಜನಸಾಮಾನ್ಯರ ತೆರಿಗೆಯ ಹಣದಿಂದ ಇಲ್ಲಿ ವಕೀಲರ ಭವನ ನಿರ್ಮಾಣ ಆಗುತ್ತಿದೆ. ಜನರ ದುಡ್ಡಿನಿಂದ ಸೌಲಭ್ಯ ಪಡೆದ ನಾವು ಅವರ ಸೇವೆಗೆ ಮೊದಲ ಆದ್ಯತೆ ನೀಡಬೇಕು. ವಕೀಲರ ಭವನ ಕ್ಲಬ್ ಆಗಬಾರದು. ವಕೀಲರು ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅಧ್ಯಯನ, ಕೇಸುಗಳ ಸಿದ್ಧತೆ, ಅನುಭವಿಗಳೊಂದಿಗೆ ವಿಚಾರ ವಿನಿಮಯ ಮತ್ತಿತರ ಸಕಾರಾತ್ಮಕ ಕಾರ್ಯಗಳಿಗೆ ಭವನ ಬಳಕೆಯಾಗಬೇಕು ಎಂದರು.

ADVERTISEMENT

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಪ್ರಾಸ್ತಾವಿಕ ಮಾತನಾಡಿ, ವಕೀಲರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಬಡವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಬೇಕು. ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ದೊಡ್ಡ ಭವನ ನಿರ್ಮಾಣ ಆಗಲಿದ್ದು, ಎಲ್ಲಾ ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ ಎಂದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಭಾರತದಂತಹ ಜಾತ್ಯತೀತ ದೇಶದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಸಿಗುವಂತಾಗಬೇಕು. ಯಾವುದೇ ಪ್ರಭಾವಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ನ್ಯಾಯ ನೀಡುವ ವ್ಯವಸ್ಥೆ ನಮ್ಮಲ್ಲಿದೆ. ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಂತಹ ಪ್ರಭಾವಿ ವ್ಯಕ್ತಿಗೆ ಶಿಕ್ಷೆ ನೀಡಿದ ಕೀರ್ತಿ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಅವರಿಗೆ ಸಲ್ಲುತ್ತದೆ. ಒಂದು ವರ್ಷದ ಒಳಗೆ ವಕೀಲರ ಭವನ ನಿರ್ಮಿಸಿ, ಪೀಠೋಪಕರಣ, ಕಂಪ್ಯೂಟರ್ ಮತ್ತಿತರ ಸೌಲಭ್ಯ ಒದಗಿಸಲಾಗುವುದು. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ವಕೀಲರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಗುವುದು ಎಂದರು.

ನ್ಯಾಯಾಧೀಶರಾದ ದಿಂಡಲ್ ಕೊಪ್ಪ, ಪ್ರೇಮಾ ವಸಂತ ರಾವ್ ಪವಾರ್, ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯ್, ಲೋಕೋಪಯೋಗಿ ಎಂಜಿನಿಯರ್ ಸತೀಶ್ ಬಾಬು ಇದ್ದರು.

ಅಪ್ಪನ ಕಣ್ಣು ಕಿತ್ತ ಮಗ !

ಬೆಂಗಳೂರಿನಲ್ಲಿ ಈಚೆಗೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೇ ತಂದೆಯ ಕಣ್ಣುಗಳನ್ನು ಕಿತ್ತ ಘಟನೆ ನಡೆದಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಹೇಳಿದರು.

ಕೆಲವರು ನ್ಯಾಯಾಂಗದಲ್ಲಿ ನಂಬಿಕೆ ಕಳೆದುಕೊಂಡು ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಅಪರಾಧ ಕೃತ್ಯಗಳನ್ನು ಎಸಗಲೂ ಹಿಂಜರಿಯುವುದಿಲ್ಲ. ನ್ಯಾಯದಾನದ ವಿಳಂಬವೂ ಇದಕ್ಕೆ ಕಾರಣವಿರಬಹುದು. ಸಾರ್ವಜನಿಕರಿಗೆ ನ್ಯಾಯಾಲಯದಲ್ಲಿ ನಂಬಿಕೆ, ವಿಶ್ವಾಸ ಮೂಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.