ಚಿತ್ರದುರ್ಗ: ತಂತಿವಾದ್ಯದಿಂದ ಸುಶ್ರಾವ್ಯವಾಗಿ ಹೊರಹೊಮ್ಮಿದ ನಾದ ಮೈಮನಗಳನ್ನು ರೋಮಾಂಚ ನಗೊಳಿಸಿತು. ಒಂದೊಂದೇ ವೀಣೆ ಯಿಂದ ಹೊರಸೂಸುತ್ತಿದ್ದ ನಿನಾದ ತೊರೆಯಂತೆ ಶುರುವಾಗಿ ಜಲಪಾತದಂತೆ ಮುದನೀಡಿತು. ಇಡೀ ಕೋಟೆನಗರಿ ವೀಣಾವಾದನದಲ್ಲಿ ಮಿಂದೆದ್ದಿತ್ತು.
ಇಂತಹದೊಂದು ಅಭೂತಪೂರ್ವ ಪ್ರಸಂಗವನ್ನು ಸೃಷ್ಟಿಸಿದ್ದು ವಿಶ್ವ ಹಿಂದೂ ಪರಿಷತ್, ವೀರಮದಕರಿ ಸೇವಾ ಟ್ರಸ್ಟ್. ಹಳೆ ಮಾಧ್ಯಮಿಕ ಶಾಲಾ ಅವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಬರೋಬ್ಬರಿ 161 ವೀಣೆಗಳು ಒಂದೇ ವೇದಿಕೆಯಲ್ಲಿ ಸಂಗೀತ ಹೊರಹೊಮ್ಮಿಸಿ ಹೊಸ ದಾಖಲೆಯನ್ನು ನಿರ್ಮಿಸಿತು. ಹತ್ತು ಕಲಾವಿದರು ಪಕ್ಕಾವಾದ್ಯದಲ್ಲಿ ಸಾಥ್ ನೀಡಿದರು.
ರಾತ್ರಿ 7.40ಕ್ಕೆ ಆರಂಭವಾದ ಕಛೇರಿ ಸತತ ಎರಡು ಗಂಟೆಗಳ ಕಾಲ ರಸದೌತಣ ಉಣಬಡಿಸಿತು. 15 ಕೃತಿಗಳನ್ನು ನಿರಂತರವಾಗಿ ನುಡಿಸಲಾಯಿತು. ಒಂದೊಂದು ಕೃತಿಗಳು ವಿಶಿಷ್ಟ ಅನುಭವ ನೀಡಿದವು. ಏಕಕಾಲಕ್ಕೆ ವೀಣೆಯ ತಂತಿಗಳನ್ನು ಮೀಟುತ್ತಿದ್ದ
ಕೈಬೆರಳುಗಳು ಶ್ರೋತೃಗಳನ್ನು ಪುಳಕಗೊಳಿಸುತ್ತಿದ್ದವು.
‘ನಿನ್ನು ಕೋರಿ ವರ್ಣ’ ಕೃತಿಯನ್ನು ಮೋಹನ ರಾಗ ಹಾಗೂ ಆದಿತಾಳದಲ್ಲಿ ಆರಂಭಿಸಲಾಯಿತು. ನಿಧಾನವಾಗಿ ಆರಂಭವಾದ ಕೃತಿ ಏರಿಳಿತಗಳನ್ನು ಕಾಣುತ್ತ ರೋಮಾಂಚನಗೊಳಿಸಿತು. ಇದರ ಬೆನ್ನಲ್ಲೇ ಮುತ್ತುಸ್ವಾಮಿ ದೀಕ್ಷಿತರ ‘ವಾತಾಪಿ ಗಣಪತತಿಂ ಭಜೇಹಂ’ ಕೃತಿ ಹಂಸಧ್ವನಿ ರಾಗ, ಆದಿತಾಳದಲ್ಲಿ ಮೂಡಿಬಂದಿತು. ಏಕಕಾಲಕ್ಕೆ ಅಷ್ಟೂ ವೀಣೆಗಳು ಧ್ವನಿಸುತ್ತಿದ್ದ ರೀತಿಗೆ ಸಭಿಕರು ತಲೆದೂಗಿದರು.
ಬೆಂಗಳೂರಿನ ವಿದುಷಿ ಜ್ಯೋತಿ ಚೇತನ್, ಶಿವಮೊಗ್ಗದ ವಿದುಷಿ ಬಿ.ಕೆ. ವಿಜಯಲಕ್ಷ್ಮಿ ರಾಘು, ದಾವಣಗೆರೆಯ ವಿದುಷಿ ಶುಭಾ, ಉಡುಪಿ ಬಾರಕೂರಿನ ಶುಭಶ್ರೀ ಅಡಿಗ ಸೇರಿ ಪ್ರಮುಖ ವೀಣಾವಾದಕರು ಸಭೆಯಲ್ಲಿದ್ದರು. ರಾಜ್ಯದ ವಿವಿಧ ಭಾಗದಿಂದ ಹಿರಿ–ಕಿರಿಯ ಕಲಾವಿದರು ಒಟ್ಟಿಗೆ ಸೇರಿದ್ದು ವಿಸ್ಮಯ ಮೂಡಿಸಿತು. ರಾತ್ರಿ ಕಾರ್ಯಕ್ರಮಕ್ಕೂ ಮೊದಲು ಒಮ್ಮೆ ತಾಲೀಮು ನಡೆಯಿತು.
ತಂತಿಯ ನಾದಕ್ಕೆ ಅನುಗುಣವಾಗಿ ವೇದಿಕೆಯ ಪಕ್ಕದಲ್ಲಿ ಚಿತ್ರಕಲೆಯೂ ಅರಳುತ್ತಿತ್ತು. ಪ್ರತಿ ಕೃತಿ ಹೊರಬಂದಾಗಲೂ ಕಲಾಕೃತಿ ಹೊಸ ರೂಪ ಪಡೆಯುತ್ತಿತ್ತು. ‘ಜಯಜಯ ಹೇ ಭಗವತಿ..’, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ‘ರಘುವಂಶ ಸುಧಾಂಬುಧಿ ಚಂದ್ರ ಶ್ರೀ..’, ಸ್ವಾಮಿ ದಯಾನಂದ ಸರಸ್ವತಿ ಅವರ ‘ಭೋ ಶಂಭೋ ಶಿವ ಶಂಭೋ’ ಕೃತಿಗಳಿಗೆ ಸಭಾಂಗಣದಲ್ಲಿ ಕರತಾಡನ ಕೇಳಿಬಂದಿತು.
ಪಕ್ಕವಾದ್ಯದೊಂದಿಗೆ ವೀಣೆ ಜುಗಲ್‌ಬಂದಿ ಮಾಡುತ್ತಿರುವಂತೆ ಆಗಾಗ ಭಾಸವಾಗುತ್ತಿತ್ತು. ಪ್ರತಿ ಕೃತಿಯೂ ಮುಕ್ತಾಯವಾದಾಗ ಸಭೀಕರು ಚಪ್ಪಾಳೆಯ ಮಳೆ ಸುರಿಸುತ್ತಿದ್ದರು. ‘ಹಚ್ಚೇವು ಕನ್ನಡದ ದೀಪ..’, ‘ಗೋವಿನ ಹಾಡು’, ‘ಓ ನನ್ನ ದೇಶ ಬಾಂಧವರೇ’, ‘ರಘುಪತಿ ರಾಘವ ರಾಜಾರಾಮ್’ ಹಾಡುಗಳು ಕೂಡ ವೀಣೆಯಲ್ಲಿ ಸುಮಧುರವಾಗಿ ಮೂಡಿಬಂದವು. ‘ವಂದೇ ಮಾತರಂ’ ಮೂಲಕ ಕಛೇರಿ ಸಮಾಪ್ತಿಗೊಂಡಿತು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾರ್ಯಕ್ರಮ ಸಂಚಾಲಕ ಟಿ. ಬದರಿನಾಥ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ಜೆ.ಆರ್. ರಾಮಮೂರ್ತಿ, ಕಾರ್ಯದರ್ಶಿ ಕೆ.ಎನ್.ವಿಶ್ವನಾಥಯ್ಯ, ಖಜಾಂಚಿ ಎಸ್.ವಿ.ರಾಜು, ಸದಸ್ಯರಾದ ಡಿ.ಷಡಾಕ್ಷರಪ್ಪ, ಜಿ.ಎಂ. ವಿಠ್ಠಲರಾವ್, ಸಂಸ್ಕಾರ ಭಾರತಿ ರಾಜೀವಲೋಚನ, ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎಸ್. ಮುಕುಂದರಾವ್, ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಾರ್ಥ್ ಗುಂಡಾರ್ಪಿ, ಬಜರಂಗದಳ ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ್, ವಿದುಷಿ ಜ್ಯೋತಿ ಚೇತನ್, ಗೌರವ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾದ ಪಟೇಲ್ ಶಿವಕುಮಾರ್, ಎಲ್.ಇ.ಶ್ರೀನಿವಾಸ್ ಬಾಬು, ಎಂ.ವಿ. ವಿಶ್ವನಾಥ್ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.