ಚಿತ್ರದುರ್ಗ: ‘ಎಲ್ಲ ಜಾತಿಗಳಲ್ಲಿಯೂ ಶೋಷಿತರಿದ್ದಾರೆ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಎಲ್ಲರೂ ಶೋಷಿತರೇ. ಅವರ ಅಭಿವೃದ್ಧಿಗೆ ಸಮಾವೇಶಗಳ ಅಗತ್ಯವಿದೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ಸಮೀಪದ ವಿಶಾಲ ಜಾಗದಲ್ಲಿ ಜ. 28ರಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ನಡೆಯುವ ‘ಶೋಷಿತರ ಜಾಗೃತಿ ಸಮಾವೇಶ’ದ ಸಿದ್ಧತೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸಮಾವೇಶದಲ್ಲಿ ಶೋಷಿತರ ಪರವಾದ ಹಕ್ಕು ಮಂಡಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಜಿಲ್ಲೆಯಲ್ಲಿ ಶೋಷಿತರು, ಅವಕಾಶ ವಂಚಿತ ಸಮುದಾಯ ಹೆಚ್ಚಾಗಿದೆ. ಹಕ್ಕುಗಳನ್ನು ಕಾಪಾಡಿ ಅವರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎನ್ನುವುದೇ ಸಮಾವೇಶದ ಆಶಯ’ ಎಂದು ತಿಳಿಸಿದರು.
‘ನನ್ನ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ್ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿದ್ದರು. ಈಗ ಅದನ್ನು ಜಾತಿ ಗಣತಿ ಎನ್ನುತ್ತಿದ್ದು, ವರದಿಯನ್ನು ಸ್ವೀಕಾರ ಮಾಡಬೇಕಿದೆ. ಈ ಮೂಲಕ ಸರ್ಕಾರದ ಸೌಲಭ್ಯ ಪಡೆಯದೇ ಇರುವ ಜಾತಿಗಳಿಗೂ ಸೌಲಭ್ಯ ದೊರಕಿಸುವ ಕಾರ್ಯವಾಗಬೇಕು’ ಎಂದರು.
‘ಸಮಾವೇಶಕ್ಕಾಗಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಡಿಎಸ್‌ಎಸ್ ಮುಖಂಡ ಮಾವಳ್ಳಿ ಶಂಕರ್ ಸೇರಿ ಹಲವರು ಸಂಘಟನೆ ಮಾಡುತ್ತಿದ್ದಾರೆ. ಶೋಷಿತ ವರ್ಗಗಳನ್ನು ಒಂದು ಕಡೆಗೆ ಸೇರಿಸುವ ಕಾರ್ಯವನ್ನು ಈ ಸಮಾವೇಶ ಮಾಡುತ್ತಿದೆ’ ಎಂದು ಹೇಳಿದರು.
ಸಮಾವೇಶದ ಸಂಚಾಲಕ ಬಿ.ಟಿ.ಜಗದೀಶ್ ಮಾತನಾಡಿ, ‘ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸರ್ಕಾರದ ಸಚಿವರು, ಶೋಷಿತ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
ಮಾಜಿ ಶಾಸಕ ಡಿ.ಉಮಾಪತಿ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಸದಸ್ಯರಾದ ನರಸಿಂಹಮೂರ್ತಿ, ರಾಜಾನಾಯ್ಕ, ಪ್ರಕಾಶಮೂರ್ತಿ, ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಮಂಜಪ್ಪ, ಟಿಪ್ಪು ವೇದಿಕೆ ಅಧ್ಯಕ್ಷ ಖಾಸಿಂಆಲಿ, ಬಡಗಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಾಕೀರ್ ಹುಸೇನ್, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಲಕ್ಷ್ಮೀಕಾಂತ, ರೆಹಮಾನ್ ಖಾನ್, ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.