ADVERTISEMENT

ಫೇಲಾದವನು ಪದವಿಯಲ್ಲಿ ರ‍್ಯಾಂಕ್‌ ಪಡೆದೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ವಿದ್ಯಾರ್ಥಿಜೀವನವನ್ನು ಮೆಲುಕು ಹಾಕಿದ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2018, 12:53 IST
Last Updated 23 ಸೆಪ್ಟೆಂಬರ್ 2018, 12:53 IST
ಸಿರಿಗೆರೆಯಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 26ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಸಿರಿಗೆರೆಯಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 26ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಸಿರಿಗೆರೆ: ‘ಸೇವಕನ ಕೆಲಸ ಹುಡುಕಿಕೊಂಡು ಬಂದ ಹುಡುಗನಿಗೆ ಅನ್ನ, ಬಟ್ಟೆ, ಶುಲ್ಕ ಕೊಟ್ಟು ಓದಲು ಪ್ರೋತ್ಸಾಹಿಸಿದರು. ದುರಾದೃಷ್ಟಕ್ಕೆ ಪರೀಕ್ಷೆಯಲಿ ಫೇಲಾದೆ. ಹೀಗಾಗಿ, ನೆರವು ನೀಡಿದವರಿಗೆ ಮುಖ ತೋರದೆ ಓಡಾಡುವಂತಾಗಿತ್ತು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

ಗ್ರಾಮದಲ್ಲಿ ಭಾನುವಾರ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 26ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ತರಳಬಾಳು ಜಗದ್ಗುರುಗಳ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಾತೃ ಹೃದಯದ ಗುರುಗಳು ನನ್ನ ಮೈದಡವಿ ಮತ್ತೆ ಪ್ರೋತ್ಸಾಹಿಸಿದರು. ಹೀಗಾಗಿ ಫೇಲಾಗಿದ್ದ ನಾನು, ಮುಂದೆ ಬಿಎ ಮತ್ತು ಎಂಎ ಪರೀಕ್ಷೆಯಲ್ಲಿ ರ‍್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದೆ. ಶಿವಕುಮಾರ ಸ್ವಾಮೀಜಿ ಹುರಿದುಂಬಿಸಿದ್ದರಿಂದ ಈಗ ಈ ಸ್ಥಾನಕ್ಕೆ ಬಂದಿದ್ದೇನೆ’ ಎಂದು ಹಿರಿಯ ಗುರುಗಳೊಂದಿಗಿನ ಒಟನಾಟವನ್ನು ಬಿಚ್ಚಿಟ್ಟರು.

ADVERTISEMENT

‘ಗುರುಗಳ ಕೃಪಾದೃಷ್ಟಿ ಇಲ್ಲದ್ದಿದ್ದರೆ ನನ್ನಂಥ ಅನೇಕರು ಹಳ್ಳಿಯಲ್ಲೇ ಇರಬೇಕಾಗಿತ್ತು. ಪ್ರತಿಯೊಬ್ಬರಲ್ಲೂ ವಿಭಿನ್ನ ಸಾಮರ್ಥ್ಯವಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂಬ ಭಾವನೆ ಶಿವಕುಮಾರ ಸ್ವಾಮೀಜ ಅವರದ್ದಾಗಿತ್ತು’ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ದತ್ತು ಪಡೆದು ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಪ್ರತಿಯೊಬ್ಬರಿಗೂ ತಮ್ಮ ಬದುಕಿನ ತಿರುವಿಗೆ ಕಾರಣವಾದ ವ್ಯಕ್ತಿ ಇರುತ್ತಾರೆ. ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾದ ವ್ಯಕ್ತಿಯನ್ನು ಮರೆಯಬಾರದು. ಅಂಥವರಿಗೆ ಕೃತಜ್ಞರಾಗಿರಬೇಕು’ ಎಂದರು.

ಹಿರಿಯ ವಿದ್ಯಾರ್ಥಿಗಳಾದ ಬಿ. ರವಿಕುಮಾರ್, ಡಿ. ಭಾಸ್ಕರ್, ಡಾ. ಜಯವರ್ಧನ, ಡಾ. ನಿರಂಜನಮೂರ್ತಿ, ಡಾ. ಉಮೇಶ್, ಎಚ್.ಕೆ. ಲಿಂಗರಾಜು, ಸಿ. ಪ್ರಸನ್ನಕುಮಾರ್, ವೀರಣ್ಣ ಜತ್ತಿ, ಮಲ್ಲಿಕಾರ್ಜುನ ಕಬ್ಬೂರು ಅಭಿನಂದನೆ ಸ್ವೀಕರಿಸಿ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.

ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ. ರಂಗನಾಥ್‌, ಎಚ್‌.ವಿ. ವಾಮದೇವಪ್ಪ, ಕೆ.ಜಿ. ಶಿವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.