ADVERTISEMENT

ಕರಿಮೆಣಸು ಬೆಳೆದು ಹೊಸ ಬದುಕು ಕಂಡ ರೈತ

ಬಯಲು ಸೀಮೆಯ ತೋಟದಲ್ಲಿ ಮಲೆನಾಡಿನ ಅನುಭವ, ಅಡಿಕೆ, ತೆಂಗಿನ ಮರಗಳಿಗೆ ಹಬ್ಬಿರುವ ಬಳ್ಳಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 6:47 IST
Last Updated 18 ಸೆಪ್ಟೆಂಬರ್ 2024, 6:47 IST
ಶ್ರೀರಾಂಪುರ ಸಮೀಪದ ತಂಡಗ ಗ್ರಾಮದ ಮುದ್ದಪ್ಪ ಅವರ ತೋಟದಲ್ಲಿ ಬೆಳೆದಿರುವ ಕಾಳುಮೆಣಸು
ಶ್ರೀರಾಂಪುರ ಸಮೀಪದ ತಂಡಗ ಗ್ರಾಮದ ಮುದ್ದಪ್ಪ ಅವರ ತೋಟದಲ್ಲಿ ಬೆಳೆದಿರುವ ಕಾಳುಮೆಣಸು   

ಶ್ರೀರಾಂಪುರ: ತೆಂಗು ಮತ್ತು ಅಡಿಕೆ ತೋಟದ ಒಳ ಪ್ರವೇಶಿಸುತ್ತಿದ್ದಂತೆಯೇ ಯಾವುದೋ ಮಲೆನಾಡು ಪ್ರದೇಶದ ತೋಟದೊಳಗೆ ಹೋಗುತ್ತಿರುವ ಹಿತಾನುಭವವಾಗುತ್ತದೆ. ತೋಟದೊಳಗೆ ಹೋಗಿ ನೋಡಿದರೆ ಕೇರಳ ಹಾಗೂ ಮಲೆನಾಡು ಪ್ರದೇಶದಲ್ಲಿಯೇ ಹೆಚ್ಚಾಗಿ ಬೆಳೆಯುವ ಗಿಡ, ಮರಗಳ ಸೊಬಗು ಕಣ್ಣಿಗೆ ಕಟ್ಟುತ್ತದೆ. 

ತೆಂಗು, ಅಡಿಕೆ ಹಾಗೂ ಸಿಲ್ವರ್ ಮರಗಳಿಗೆ ಹಬ್ಬಿರುವ ಕರಿಮೆಣಸು (ಕಾಳು ಮೆಣಸು) ಬಳ್ಳಿ ಗಮನ ಸೆಳೆಯುತ್ತದೆ. ಕೃಷಿಯಲ್ಲಿ ಒಂದಿಲ್ಲೊಂದು ವಾಣಿಜ್ಯ ಬೆಳೆಯನ್ನು ಬೆಳೆಯುತ್ತಾ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ತಂಡಗ ಗ್ರಾಮದ ರೈತ ಮುದ್ದಪ್ಪ ಅವರ ತೆಂಗು ಹಾಗೂ ಅಡಿಕೆ ತೋಟದ ಯಶೋಗಾಥೆ ರೈತರಿಗೆ ಮಾದರಿಯಾಗಿದೆ.

ಕೇರಳ, ಮಲೆನಾಡು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಬೆಳೆಯುವ ಪಣಿಯೂರು -1 ತಳಿಯ ಕರಿಮೆಣಸು ಬೆಳೆಯುತ್ತಿರುವ ಅವರು ಉತ್ತಮ ಆದಾಯವನ್ನೂ ಕಂಡಿದ್ದಾರೆ. ಕೊಪ್ಪ ಸಮೀಪವಿರುವ ಕೇಂದ್ರ ಸಾಂಬಾರು ಮಂಡಳಿಯ ಫಾರಂನಿಂದ 2,500 ಸಸಿ ತಂದು ಹಾಕಿದ್ದಾರೆ. ಹಾಲಿ ಇರುವ ಅಡಿಕೆ ಹಾಗೂ ಸಿಲ್ವರ್ ಮರದ ಬುಡದಿಂದ ಒಂದೂವರೆ ಅಡಿ ದೂರದಲ್ಲಿ ಹಾಗೂ ತೆಂಗಿನ ಮರದ ಬುಡದಿಂದ ಎರಡೂವರೆ ಅಡಿ ದೂರದಲ್ಲಿ ಒಂದೂವರೆ ಅಡಿ ಆಳ ಮತ್ತು ಸುತ್ತಳತೆಯ ಗುಂಡಿ ತೆಗೆಯಲಾಗಿದೆ. ಅದಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ತರಗೆಲೆ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ 15 ದಿನಗಳ ನಂತರ ಕರಿಮೆಣಸಿನ ಸಸಿಯನ್ನು ನೆಡಲಾಗಿದೆ. ಬಳ್ಳಿಯನ್ನು ಅಡಕೆ ಮರಕ್ಕೆ ಹಬ್ಬುವಂತೆ ಬಿಟ್ಟಿದ್ದಾರೆ. ಅಳಿಲು ಕಾಟ ಎದುರಾಗಿಲ್ಲ. 

ADVERTISEMENT

ಪ್ರತಿ ವರ್ಷ ಜನವರಿ - ಫೆಬ್ರುವರಿ ತಿಂಗಳಲ್ಲಿ ತೆನೆ ಕಟಾವು ಮಾಡಲಾಗುತ್ತದೆ. ಮನೆಯಲ್ಲಿರುವ ಯಂತ್ರದ ಮೂಲಕ ತೆನೆಯಿಂದ ಕಾಳು ಬೇರ್ಪಡಿಸಿ ಕಾಳನ್ನು ಬಿಸಿ ನೀರಿನಲ್ಲಿ ಒಂದು ಬಾರಿ ಅದ್ದಿ ತೆಗೆದು ಎರಡು ದಿನ ಬಿಸಿಲಿನಲ್ಲಿ ಒಣಗಿಸಿಟ್ಟರೆ ಸಾಕು ಮಾರುಕಟ್ಟೆಗೆ ಕಾಳುಮೆಣಸು ಕೊಂಡೊಯ್ಯಬಹುದು.

ಹತ್ತು ವರ್ಷಗಳ ಹಿಂದೆ ಕರಿಮೆಣಸಿನ ನಾಟಿ ಮಾಡಿ, ನಾಲ್ಕು ವರ್ಷ ಅದನ್ನು ಪೋಷಣೆ ಮಾಡಿದ್ದರಿಂದ, ಆರೇಳು ವರ್ಷಗಳಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಬಯಲು ಸೀಮೆಯಲ್ಲೂ ಮಲೆನಾಡಿನ ಕಾಳುಮೆಣಸು ಬೆಳೆಯುತ್ತಿರುವ ಇವರು ಈ ಭಾಗದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.

‘ಆರಂಭದಲ್ಲಿ ಒಂದು ಸಸಿಯಿಂದ 100 ಗ್ರಾಂನಷ್ಟು ಕರಿಮೆಣಸು ಸಿಗುತ್ತದೆ. ನಂತರದ ವರ್ಷದಲ್ಲಿ 400 ಗ್ರಾಂ. ಹೀಗೆ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತದೆ. ಪ್ರತಿ ಕ್ವಿಂಟಲ್ ಕರಿಮೆಣಸಿನ ಧಾರಣೆ ಪ್ರಸ್ತುತ ₹48,000 ದಿಂದ ₹50,000ದವರೆಗೆ ಇದೆ’ ಎನ್ನುತ್ತಾರೆ ಮುದ್ದಪ್ಪ ಅವರ ಮಗ ರೈತ ಯರಗುಂಟಪ್ಪ. 

‘ಕೃಷಿಯಲ್ಲಿ ಸದಾ ಹೊಸ ಪದ್ಧತಿಗಳ ಅಳವಡಿಕೆಯ ಬಗ್ಗೆ ಯೋಚಿಸಬೇಕು. ಆ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ನಮ್ಮ ಉದ್ದೇಶ. ಯಾರಾದರೂ ಕರಿಮೆಣಸು ಬೆಳೆಯಲು ಸಲಹೆ ಕೇಳಿದರೆ ಸಲಹೆ ನೀಡಲು ಸದಾ ಸಿದ್ಧ’ ಎಂದು ಪ್ರಗತಿಪರ ರೈತ ಮುದ್ದಪ್ಪ ಹೇಳಿದರು.

ಕಾಳು ಮೆಣಸು ತೆನೆ
ರೈತ ಮುದ್ದಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.