ಚಳ್ಳಕೆರೆ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೆಳೆ ವಿಮೆ ವಂಚಿತ ಶೇಂಗಾ ಮತ್ತು ತೊಗರಿ ಬೆಳೆಗಾರರಿಗೆ ವಿಮಾ ಸೌಲಭ್ಯ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
2023– 24ನೇ ಸಾಲಿನಲ್ಲಿ ತೀವ್ರ ಅನಾವೃಷ್ಟಿ ಉಂಟಾಗಿ ಸಕಾಲಕ್ಕೆ ಸರಿಯಾಗಿ ಮಳೆ ಬೀಳದ್ದರಿಂದ ಮುಂಗಾರು ಹಂಗಾಮಿನ ಮಳೆಯಾಶ್ರಿತ ಶೇಂಗಾ, ತೊಗರಿ ಮುಂತಾದ ಬೆಳೆಗಳು ಸಂಪೂರ್ಣ ವಿಫಲಗೊಂಡಿವೆ. ವಾಸ್ತವ ಸ್ಥಿತಿ ಅರಿಯದೆ ‘ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಇದರಿಂದ ಯಾವುದೇ ಬೆಳೆ ನಷ್ಟವಾಗಿಲ್ಲ’ ಎಂದು ವಿಮಾ ಕಂಪನಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಸಾಕಷ್ಟು ಬೆಳೆಗಾರರು ವಿಮೆಯಿಂದ ವಂಚಿತರಾಗುವಂತಾಗಿದೆ’ ಎಂದು ಬೆಳೆಗಾರ ಮೀರಾಸಾಬಿಹಳ್ಳಿ ಸಿ.ಶಿವಲಿಂಗಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನ ಹತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಬಾ ಹೋಬಳಿಯ 2319 ಜನ ತೊಗರಿ ಬೆಳೆಗಾರರು ಮತ್ತು ಸೋಮಗುದ್ದು ಗ್ರಾಮ ಪಂಚಾಯಿತಿಯ 273 ಜನ ಶೇಂಗಾ ಬೆಳೆಗಾರರು ವಿಮೆ ಪಾವತಿಸಿದ್ದರೂ ವಿಮಾ ಹಣ ಬಂದಿಲ್ಲ. ಹೀಗಾಗಿ, ವಂಚಿತ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ರೈತ ಹನುಮಂತರೆಡ್ಡಿ ಹಾಗೂ ಪ್ರಕಾಶ್ ಆಗ್ರಹಿಸಿದ್ದಾರೆ.
ಮನವಿ ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.