ADVERTISEMENT

ಚಳ್ಳಕೆರೆ: ಮಧ್ಯರಾತ್ರಿ ಹಸು ಕಳ್ಳರ ವಾಹನ ಹಿಡಿದ ರೈತರು!

ಹೆದ್ದಾರಿಯಲ್ಲಿ ಏಳೆಂಟು ಕಿ.ಮೀ.ವರೆಗೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಳ್ಳಕೆರೆ: ತಡ ರಾತ್ರಿಯಲ್ಲಿ ಹಸು ಕದ್ದೊಯ್ಯುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ರೈತರು, ಹಸು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ನಂದಾಪುರದಲ್ಲಿ ಶನಿವಾರ ರಾತ್ರಿ ಈ ನಡೆದಿದೆ. 

ADVERTISEMENT

ಗ್ರಾಮದ ಜನರು ರಾತ್ರಿ ಮಲಗುವುದನ್ನೇ ಕಾಯುತ್ತಿದ್ದ ಕಳ್ಳರ ತಂಡ, ತಡರಾತ್ರಿ ಕಳ್ಳತನಕ್ಕೆ ಮುಂದಾಯಿತು. ರೈತ ನಾಗರಾಜ ಅವರು ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಕಳ್ಳರು ತಾವು ತಂದಿದ್ದ ಗೂಡ್ಸ್‌ ವಾಹನಕ್ಕೆ ಹತ್ತಿಸಿಕೊಂಡರು. ಅಪರಿಚಿತರ ಜನರನ್ನು ಕಂಡು ಹಸು ಅರಚಿದೆ.

ಹಸುವಿನ ಅರಚಾಟ ಕೇಳಿದ ಮನೆಯವರು, ನಿದ್ದೆಯಿಂದ ಎದ್ದು ಬರುವಷ್ಟರಲ್ಲಿ ವಾಹನ ಅಲ್ಲಿಂದ ಹೊರಟಿತ್ತು. ಹಸು ಕದ್ದೊಯ್ಯುತ್ತಿವ ವಿಷಯ ತಿಳಿಯುತ್ತಿಂದ್ದತೆಯೇ, ನಾಗರಾಜ, ಅವರ ಪುತ್ರ ಮಂಜುನಾಥ್ ಹಾಗೂ ಅಳಿಯ ಲೋಕೇಶ್ ಹಾಗೂ ಇತರ ನಾಲ್ಕಾರು ಜನರು ಸೇರಿಕೊಂಡು ಬೈಕ್ ಹಾಗೂ ಕಾರಿನಲ್ಲಿ ವಾಹನವನ್ನು ಬೆನ್ನಟ್ಟಿದರು. 

ಹಸು ಕಳ್ಳರು ಇದ್ದ ವಾಹನ ಸಾಗುತ್ತಿದ್ದ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಳೆಂಟು ಕಿ.ಮೀ.ವರೆಗೆ ಬೆನ್ನಟ್ಟಿದ್ದಾರೆ. ಇದನ್ನು ಗಮನಿಸಿದ ಕಳ್ಳರು, ತಮ್ಮ ವಾಹನವನ್ನು ಹೆದ್ದಾರಿಯಿಂದ ತಾಲ್ಲೂಕಿನ ಗೋಪನಹಳ್ಳಿ ಕಡೆಗೆ ತಿರುಗಿಸಿದರು. ಕಳ್ಳರ ವಾಹನ ಬೆನ್ನಟ್ಟಿದ್ದನ್ನು ಗಮನಿಸಿದ ಸ್ಥಳೀಯ ಡಾಬಾದಲ್ಲಿದ್ದ ಕೆಲವರು, ಕಳ್ಳರನ್ನು ಹಿಡಿಯಲು ತಾವೂ ಮುಂದಾದರು. ಗೋಪನಹಳ್ಳಿ ಬಳಿ ವಾಹನ ಅಡ್ಡಗಟ್ಟಿದರು. ಸಿಕ್ಕಿಬೀಳುವ ಭಯದಲ್ಲಿ ಕಳ್ಳರು ಬಿಎಸ್‍ಎನ್‍ಎಲ್ ಕಚೇರಿ ಬಳಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. 

ಕಳ್ಳರು ಕೃತ್ಯಕ್ಕೆ ಬಳಸಿದ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡಿರುವ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.