ADVERTISEMENT

ಬೆಳೆವಿಮೆ ಜಮೆಯ ಭರವಸೆ: ಪ್ರತಿಭಟನೆ ಹಿಂಪಡೆದ ರೈತ ಸಂಘಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 14:36 IST
Last Updated 16 ಮಾರ್ಚ್ 2024, 14:36 IST

ಚಳ್ಳಕೆರೆ: ರೈತರ ಖಾತೆಗೆ ಬೆಳೆವಿಮೆ ಜಮೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಾ.18ರಂದು ಹಮ್ಮಿಕೊಂಡಿದ್ದ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದನ್ನು ಹಿಂಪಡೆಯಲಾಗಿದೆ ಎಂದು ರೈತ ಸಂಘದ ರಾಜ್ಯ ಮುಖಂಡ ಕೆ.ಪಿ.ಭೂತಯ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಚಿತ್ರದುರ್ಗದಲ್ಲಿ ನಡೆದ ರೈತರು ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಬೆಳೆವಿಮೆ ಕುರಿತು ಚರ್ಚಿಸಲಾಗಿದೆ. ಶೀಘ್ರದಲ್ಲೇ ರೈತರ ಖಾತೆಗೆ ವಿಮೆ ಹಣವನ್ನು ಜಮೆ ಮಾಡಬೇಕು. ವಿಳಂಬವಾದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ವಿಮಾ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ’ ಎಂದು ಹೇಳಿದರು.

‘ಬೆಳೆವಿಮೆ ಜಮೆ ಮಾಡಲು ಅಧಿಕಾರಿಗಳು ಉದಾಸೀನ ಮಾಡಿದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದರೂ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕಾರ್ಯಕ್ಕೆ ತಡೆಯೊಡ್ಡಲಾಗುವುದು’ ಎಂದು ರೈತ ಸಂಘದ ಹಸಿರು ಸೇನೆ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಎಚ್ಚರಿಸಿದ್ದಾರೆ.

ADVERTISEMENT

ರೈತ ಮುಖಂಡ ತಿಪ್ಪೇಸ್ವಾಮಿ, ನೀಲಕಂಠಪ್ಪ, ಗುರುಮೂರ್ತಿ, ಹನುಮಂತರಾಯ, ಮೈರಾಡ ಚಂದ್ರಣ್ಣ, ಹಂಪಣ್ಣ, ಜಯಣ್ಣ, ಜಂಪಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.