ADVERTISEMENT

ಚಿತ್ರದುರ್ಗ | ಕೊಳವೆಬಾವಿ ಕೊರೆಯುವ ದರ ಇಳಿಕೆಗೆ ಆಗ್ರಹ: ರೈತರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ, ಬೋರ್‌ವೆಲ್‌ ಲಾರಿ ಮಾಲೀಕರ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:17 IST
Last Updated 12 ಮಾರ್ಚ್ 2024, 14:17 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಕೊಳವೆಬಾವಿ ಕೊರೆಯುವ ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿರುವ ಬೋರ್‌ವೆಲ್‌ ಲಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು ಬರ ಪರಿಸ್ಥಿತಿಯಲ್ಲಿ ಕೃಷಿಕರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬರ ಪರಿಸ್ಥಿತಿ ಎದುರಾಗಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಬೆಳೆಗಳನ್ನು ಉಳಿಸಿಕೊಳ್ಳಲು ಹೊಸ ಕೊಳವೆಬಾವಿ ಕೊರೆಸಲು ರೈತರು ಮುಂದಾಗಿದ್ದಾರೆ. ಅಸಹಾಯಕತೆಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿರುವ ಬೋರ್‌ವೆಲ್‌ ಲಾರಿ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿದ್ದಾರೆ. ಈ ಶೋಷಣೆಯಿಂದ ರೈತರನ್ನು ರಕ್ಷಿಸಿ’ ಎಂದು ಒತ್ತಾಯಿಸಿದರು.

ADVERTISEMENT

‘ಕೊಳವೆಬಾವಿ ಕೊರೆಸಲು ಪ್ರತಿ ಅಡಿಗೆ ₹90 ನಿಗದಿಪಡಿಸಲಾಗಿತ್ತು. ಬರ ಪರಿಸ್ಥಿತಿಯಲ್ಲಿ ಕೊಳವೆಬಾವಿ ಕೊರೆಸುವ ಅನಿವಾರ್ಯತೆ ಸೃಷ್ಟಿಯಾಗಿರುವುದನ್ನು ಮನಗಂಡ ಬೋರ್‌ವೆಲ್‌ ಮಾಲೀಕರು ಏಕಾಏಕಿ ₹110ರಿಂದ ₹120ಕ್ಕೆ ಏರಿಕೆ ಮಾಡಿದ್ದಾರೆ. ಕೇಸಿಂಗ್‌ ಪೈಪ್‌ ದರ ಕೂಡ ವಿಪರೀತ ಹೆಚ್ಚಿಸಲಾಗಿದೆ’ ಎಂದು ಕಿಡಿಕಾರಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ಧವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್‌.ಹಳ್ಳಿ ಮಲ್ಲಿಕಾರ್ಜುನ್‌, ಮುಖಂಡರಾದ ಬಸವರಾಜಪ್ಪ, ಬಿ.ನಿಜಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.