ಪರಶುರಾಂಪುರ: ಸಾಂಪ್ರದಾಯಿಕ ಧಾನ್ಯ ಒಕ್ಕಣೆ ಮಾಡಿ ಕಣದಲ್ಲಿ ರಾಶಿ ಮಾಡುವ ಮೂಲಕ ಸಂಕ್ರಾಂತಿಯ ಹಬ್ಬದ ಹಿಂದೆ ಮುಂದೆ ಸುಗ್ಗಿಯ ಸಂಭ್ರಮವನ್ನು ಮಾಡುತ್ತಿದ್ದ ರೈತರು ಇಂದು ಡಾಂಬಾರು ರಸ್ತೆಗೆ ಇಳಿದ್ದಾರೆ.
ಸಾಮಾನ್ಯವಾಗಿ ಪ್ರತಿವರ್ಷ ಸಂಕ್ರಾಂತಿ ಹಬ್ಬದಲ್ಲಿ ರೈತರು ಕಣ ಸುಗ್ಗಿ ಕಾರ್ಯ ಪ್ರಾರಂಭಿಸುತ್ತಾರೆ. ಸಂಕ್ರಾಂತಿ ಹಬ್ಬದ ನಂತರ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುವುದರಿಂದ ಹಸಿ ಹಸಿಯಾಗಿ ಇರುವ ಧಾನ್ಯದ ತೆನೆಗಳು ಬಹುಬೇಗ ಒಣಗಿ ತೆನೆಯಿಂದ ಬೇರ್ಪಡುತ್ತವೆ. ಹಾಗಾಗಿ ರೈತರು ‘ಸುಗ್ಗಿಯ ಕಾಲ ಬಂತು ಸಗ್ಗದ ಸುಖ ತಂತು.. ನಮ್ಮಯ ನಾಡಿನ ಜನಕ್ಕೆಲ್ಲಾ’.. ಎನ್ನುವ ಸುಗ್ಗಿಯ ಹಾಡಿನ ಸಾರದಂತೆ ರೈತರು ಕಣ ಸುಗ್ಗಿ ಕಾರ್ಯವನ್ನು ಸಂತೋಷದಿಂದ ಮಾಡುತ್ತಿದ್ದ ಕಾಲವೊಂದಿತ್ತು.
ಹೋಬಳಿಯ ದೇವರಮರಿಕುಂಟೆ, ಪುಟ್ಲಾರಹಳ್ಳಿ, ವೃಂದಾವನಹಳ್ಳಿ, ಗೌರಿಪುರ, ಚಿಕ್ಕಚೆಲ್ಲೂರು, ದೊಡ್ಡಗೊಲ್ಲರಹಟ್ಟಿ, ಓಬಳಾಪುರ ಮುಂತಾದ ಗ್ರಾಮಗಳ್ಳಿ ಕಣ ಸುಗ್ಗಿ ಮಾಡುವ ಪದ್ಧತಿ ಇಂದಿಗೂ ಜೀವಂತವಾಗದೆ. ಆದರೆ ಈಗ ಕಣ ಬಿಟ್ಟು ರಸ್ತೆ ಮೇಲೆ ಒಕ್ಕಣಿ ಆರಂಭಿಸಿದ್ದಾರೆ.
ದೇವರ ಮರಿಕುಂಟೆಯ ರೈತ ದಯಾನಂದ ಮೂರ್ತಿ ತಾವು ಬೆಳದಿರುವ ನವಣೆ ಧಾನ್ಯವನ್ನು ಕಣದಲ್ಲಿ ಸಂಪ್ರದಾಯಿಕವಾಗಿ ಕಣದಲ್ಲಿ ಒಕ್ಕಣೆ ಮಾಡಿ ರಾಶಿಗೆ ಪೂಜೆ ಸಲ್ಲಿಸಿಒಕ್ಕಣೆಗೆಗೆ ಸಹಾಯ ಮಾಡಿದ ಕೂಲಿ ಕಾರ್ಮಿಕರಿಗೆ ರಾಶಿಯಿಂದಲೇ ಪಾಲು ತೆಗೆದು ಹಂಚಿಕೆ ಮಾಡಿ ನಂತರ ಧಾನ್ಯ ಮನೆಗೆ ಕೊಂಡೊಯ್ಯುವ ಪದ್ಧತಿಯನ್ನು ಪ್ರಸ್ತುತ ಈ ಕಾಲದಲ್ಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಕಣ್ಮರೆಯಾಗುತ್ತಿರುವ ಸಂಪ್ರದಾಯಿಕ ಒಕ್ಕಣೆಗೆ ಬಳಸುವ ವಸ್ತುಗಳು:
ಒಕ್ಕಣೆ ಮಾಡಲು ಬಳಸುತ್ತಿದ್ದ ರೋಣಗಲ್ಲು, ಮೇಟಿಗೂಟ, ಎತ್ತುಗಳು, ಕಣಗಳು ಇಂದು ಕಣ್ಮರೆಯಾಗುತ್ತಿವೆ. ರೈತರು ಒಕ್ಕಣೆಗೆ ರಸ್ತೆಯ ಮೊರೆ ಹೋಗಿದ್ದಾರೆ. ಡಾಂಬರು ಮೇಲೆ ಒಕ್ಕಣೆ ಮಾಡುವುದರಿಂದ ರೈತರ ಧಾನ್ಯಗಳು ಸಾಕಷ್ಟು ನಷ್ಟ ವಾಗುವ ಜೊತೆಗೆ ರಸ್ತೆಯ ಮೇಲಿನ ಸವಾರರಿಗೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.