ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ರೂಪಿಸಿದ ‘ಫಾಸ್ಟ್ಯಾಗ್’ ಅಳವಡಿಕೆಗೆ ನೀಡಿದ ಗಡುವು ಬುಧವಾರಕ್ಕೆ ಮುಕ್ತಾಯವಾಗಿದೆ. ‘ಫಾಸ್ಟ್ಯಾಗ್’ ಅಳವಡಿಸಿಕೊಳ್ಳದ ವಾಹನಗಳು ನಗದು ರೂಪದಲ್ಲಿ ಶುಲ್ಕ ಪಾವತಿಸಲು ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ನಗದು ರೂಪದ ಶುಲ್ಕ ಸಂಗ್ರಹಿಸುವ ಲೇನ್‌ನಲ್ಲಿ ಬುಧವಾರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟೋಲ್ ಪ್ಲಾಜಾದಲ್ಲಿ ಒಂದು ದಿನ ಮುನ್ನವೇ ‘ಫಾಸ್ಟ್ಯಾಗ್’ ಕಡ್ಡಾಯಗೊಳಿಸಲಾಗಿತ್ತು. ನಗದು ರೂಪದ ಶುಲ್ಕ ಸಂಗ್ರಹಕ್ಕೆ ಒಂದು ಲೇನ್ ಮಾತ್ರ ಮೀಸಲಿರಿಸಲಾಗಿತ್ತು.
ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಹಾಗೂ ನಗದು ರಹಿತ ವಹಿವಾಟು ಉತ್ತೇಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ‘ಫಾಸ್ಟ್ಯಾಗ್’ ಕಡ್ಡಾಯಗೊಳಿಸಿದೆ. ‘ಫಾಸ್ಟ್ಯಾಗ್’ ಅಳವಡಿಕೆಗೆ ಡಿ.1ರವರೆಗೆ ಇದ್ದ ಅವಧಿಯನ್ನು ಡಿ.15 ಹಾಗೂ ಜ.15ರವರೆಗೆ ವಿಸ್ತರಿಸಲಾಗಿತ್ತು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಲ್ಲಿ ಶೇ 50ಕ್ಕೂ ಹೆಚ್ಚು ವಾಹನ ಮಾತ್ರ ‘ಫಾಸ್ಟ್ಯಾಗ್’ ಹೊಂದಿವೆ.
ಒಂದು ಲೇನ್ ಮಾತ್ರ:12 ಲೇನ್ ಹೊಂದಿರುವ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಎರಡು ಬದಿಗೆ ತಲಾ ಆರು ಲೇನ್‌ಗಳಿವೆ. ಆರರಲ್ಲಿ ಒಂದು ಲೇನ್ ಅತಿ ಗಣ್ಯರು, ತುರ್ತು ಸೇವೆಗೆ ಮೀಸಲಿರಿಸಲಾಗಿದೆ. ಉಳಿದ ಐದರಲ್ಲಿ ಒಂದು ಲೇನ್‌ನಲ್ಲಿ ಮಾತ್ರ ನಗದು ರೂಪದ ಶುಲ್ಕ ಸಂಗ್ರಹಿಸಲಾಗುತ್ತಿದೆ. ನಾಲ್ಕು ಲೇನ್‌ಗಳಲ್ಲಿ ‘ಫಾಸ್ಟ್ಯಾಗ್’ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅರ್ಧದಷ್ಟು ವಾಹನಗಳು ‘ಫಾಸ್ಟ್ಯಾಗ್’ ಹೊಂದಿರದ ಕಾರಣ ಒಂದೇ ಲೇನ್ ಅವಲಂಬಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಅರ್ಧ ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.
ವಾಹನ ಚಾಲಕರಿಗೆ ಮಾಹಿತಿ ನೀಡಲು ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ವಾಹನ ಹಾಗೂ ಫಾಸ್ಟ್ಯಾಗ್ ಗಮನಿಸಿ ಯಾವ ಲೇನ್‌ನಲ್ಲಿ ಸಾಗಬೇಕು ಎಂಬ ಮಾಹಿತಿಯನ್ನು ಸಿಬ್ಬಂದಿ ಒದಗಿಸುತ್ತಾರೆ. ‘ಫಾಸ್ಟ್ಯಾಗ್’ ಹೊಂದಿರದ ವಾಹನ ಇದಕ್ಕೆ ಮೀಸಲಾಗಿರುವ ಲೇನ್‌ನಲ್ಲಿ ಬಂದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಬಗೆಹರಿಯದ ಗೊಂದಲ:‘ಫಾಸ್ಟ್ಯಾಗ್’ ಅಳವಡಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸೌಲಭ್ಯ ಹೊಂದುವುದು ಹೇಗೆ ಎಂಬ ಮಾಹಿತಿ ಬಹುತೇಕ ವಾಹನ ಸವಾರರಿಗೆ ಮನವರಿಕೆಯಾಗಿಲ್ಲ. ಇದರಿಂದ ಟೋಲ್ ಪ್ಲಾಜಾದಲ್ಲಿ ವಾಹನ ಚಾಲಕರ ಅಸಹನೆ ವ್ಯಕ್ತವಾಗುತ್ತಿದೆ. ಟೋಲ್ ಸಿಬ್ಬಂದಿಯ ಜೊತೆ ವಾಗ್ವಾದ ನಡೆಯುತ್ತಿದೆ.
‘ಫಾಸ್ಟ್ಯಾಗ್’ ಖಾತೆ ತೆರೆಯಲು ಜಿಲ್ಲೆಯ 22 ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಟ್ಯಾಗ್ ಖಾಲಿ ಆಗಿದ್ದರಿಂದ ಬಹುತೇಕ ಬ್ಯಾಂಕುಗಳು ವಿತರಣೆಯನ್ನು ಸ್ಥಗಿತಗೊಳಿಸಿದ್ದವು. ಗುಯಿಲಾಳು ಟೋಲ್ ಪ್ಲಾಜಾದಲ್ಲಿ ‘ಐಡಿಎಫ್‌ಸಿ’ ಬ್ಯಾಂಕ್ ‘ಫಾಸ್ಟ್ಯಾಗ್’ ವಿತರಿಸುತ್ತಿದೆ. ನಿತ್ಯ ಇಲ್ಲಿ 10ರಿಂದ 15 ಮಂದಿ ಮಾತ್ರ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಕಾರಿಗೆ ‘ಫಾಸ್ಟ್ಯಾಗ್’ ಅಳವಡಿಸಲು ₹ 200 ಪಾವತಿಸಬೇಕಿದೆ. ಇದರಲ್ಲಿ ₹ 100 ಭದ್ರತಾ ಠೇವಣಿ ಹಾಗೂ ₹ 100 ಖಾತೆಯಲ್ಲಿ ಉಳಿಯುತ್ತದೆ. ಸಣ್ಣ ಸರಕು ಸಾಗಣೆ ವಾಹನ, ಲಾರಿ ಸೇರಿ ಹಲವು ವಾಹನಗಳಿಗೆ ಭದ್ರತಾ ಠೇವಣಿಯ ಮಾನದಂಡ ಬದಲಾಗುತ್ತದೆ. ಖಾತೆಗೆ ಮತ್ತೆ ಹಣ ತುಂಬುವ ವಿಚಾರದಲ್ಲಿಯೂ ಗೊಂದಲಗಳಿವೆ. ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಗೂಗಲ್ ಪೇ ಮೂಲಕ ಹಣ ಪಾವತಿಸಲು ಬಹುತೇಕ ಚಾಲಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇವರು ಬ್ಯಾಂಕುಗಳಿಗೆ ಅಲೆಯುತ್ತಿದ್ದಾರೆ.
ವಾಹನ ಚಿತ್ರ ಕಡ್ಡಾಯ:‘ಫಾಸ್ಟ್ಯಾಗ್’ ಅಳವಡಿಕೆಯಲ್ಲಿ ಉಂಟಾಗುತ್ತಿದ್ದ ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಹನದ ಚಿತ್ರವನ್ನು ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಆಧಾರ್ ಕಾರ್ಡ್, ಆರ್‌ಸಿ, ಡ್ರೈವಿಂಗ್ ಲೈಸನ್ಸ್ ದಾಖಲೆಗಳೊಂದಿಗೆ ವಾಹನದ ಚಿತ್ರವನ್ನು ಈಗ ಒದಗಿಸಬೇಕಿದೆ. ಕಾರು, ಸಣ್ಣ ಸರಕು ಸಾಗಣೆ ವಾಹನ, ಟ್ರಕ್, ಲಾರಿ ಸೇರಿ ಹಲವು ವಾಹನಗಳಿಗೆ ಪ್ರತ್ಯೇಕ ಭದ್ರತಾ ಠೇವಣಿ ಹಾಗೂ ಶುಲ್ಕವಿದೆ. ದೊಡ್ಡ ವಾಹನಗಳು ಕೂಡ ಕಾರು ಹಾಗೂ ಸಣ್ಣ ಸರಕು ಸಾಗಣೆ ವಾಹನಗಳ ‘ಟ್ಯಾಗ್’ ಅಳವಡಿಸಿಕೊಂಡು ಟೋಲ್‌ನಲ್ಲಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮ ಬದಲಾವಣೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.