ADVERTISEMENT

ವಾಣಿ ವಿಲಾಸ ಜಲಾಶಯ ಉಳಿಸಲು ಆಗ್ರಹಿಸಿ ಆಮರಣಾಂತ ಉಪವಾಸ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 11:37 IST
Last Updated 3 ಜುಲೈ 2019, 11:37 IST
ಹಿರಿಯೂರಿನಲ್ಲಿ ಬುಧವಾರ ವಕೀಲರ ಸಂಘದ ನೇತೃತ್ವದಲ್ಲಿ ‘ಡೆಡ್ ಸ್ಟೋರೇಜ್ ನೀರು ಉಳಿಸಿ, ಅಣೆಕಟ್ಟೆ ರಕ್ಷಿಸಿ’ ಹೆಸರಿನಲ್ಲಿ ತಾಲ್ಲೂಕು ಕಚೇರಿ ಸಮೀಪ ಆಮರಣಾಂತ ಉಪವಾಸ ಆರಂಭಿಸುವ ಮೊದಲು ಮೆರವಣಿಗೆ ನಡೆಯಿತು
ಹಿರಿಯೂರಿನಲ್ಲಿ ಬುಧವಾರ ವಕೀಲರ ಸಂಘದ ನೇತೃತ್ವದಲ್ಲಿ ‘ಡೆಡ್ ಸ್ಟೋರೇಜ್ ನೀರು ಉಳಿಸಿ, ಅಣೆಕಟ್ಟೆ ರಕ್ಷಿಸಿ’ ಹೆಸರಿನಲ್ಲಿ ತಾಲ್ಲೂಕು ಕಚೇರಿ ಸಮೀಪ ಆಮರಣಾಂತ ಉಪವಾಸ ಆರಂಭಿಸುವ ಮೊದಲು ಮೆರವಣಿಗೆ ನಡೆಯಿತು   

ಹಿರಿಯೂರು: ನಗರದ ತಾಲ್ಲೂಕು ಕಚೇರಿ ಸಮೀಪದಲ್ಲಿ ಬುಧವಾರದಿಂದ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ‘ಡೆಡ್ ಸ್ಟೋರೇಜ್ ನೀರು ಉಳಿಸಿ, ಅಣೆಕಟ್ಟೆ ರಕ್ಷಿಸಿ’ ಆಂದೋಲನ ಅಡಿ ಬಯಲು ಸೀಮೆಗೆ ನೀರಾವರಿ, ವಾಣಿ ವಿಲಾಸ ಜಲಾಶಯಕ್ಕೆ ತುರ್ತು ನೀರು ತುಂಬಿಸುವಿಕೆ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.

ಬೆಳಿಗ್ಗೆ 10ಕ್ಕೆ ನಗರದ ರಂಜಿತ್ ವೃತ್ತದಲ್ಲಿ ಸೇರಿದ ವಕೀಲರ ಸಂಘದ ಪದಾಧಿಕಾರಿಗಳಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷದವರು, ಕಾಲೇಜು ವಿದ್ಯಾರ್ಥಿಗಳು, ರೈತರು, ವಿವಿಧ ಪ್ರಗತಿಪರ ಸಂಘಟನೆಗಳವರು ಸಾಥ್ ನೀಡಿದರು. ರಂಜಿತ್ ವೃತ್ತದಿಂದ ಪ್ರಧಾನ ರಸ್ತೆಯಲ್ಲಿ ‘ವಾಣಿ ವಿಲಾಸ ಉಳಿಸಿ’ ಎಂಬ ಘೋಷಣೆ ಕೂಗುತ್ತ ತಾಲ್ಲೂಕು ಕಚೇರಿ ಸಮೀಪದಲ್ಲಿ ವ್ಯವಸ್ಥೆ ಮಾಡಿದ್ದ ವೇದಿಕೆಗೆ ಪ್ರತಿಭಟನಕಾರರು ಬಂದರು.

ಪರಸ್ಪರರ ಮೇಲೆ ಹೊಣೆಗಾರಿಕೆ:

ADVERTISEMENT

ಮಾಜಿ ಶಾಸಕ ಡಿ. ಸುಧಾಕರ್, ‘ವಕೀಲರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ, ‘ಮೂರ್ನಾಲ್ಕು ದಿನದಿಂದ ನೀರು ಹರಿಸುವ ಬಗ್ಗೆ ರೈತರು ನಡೆಸುತ್ತಿರುವ ಹೋರಾಟ ತಾಲ್ಲೂಕಿನಲ್ಲಿ ಸಂಚಲನ ಸೃಷ್ಟಿಸಿದೆ. ವಕೀಲರು ರೈತರ ಪರವಾಗಿ ಬೀದಿಗಿಳಿದಿರುವುದು ಅವರ ಸಾಮಾಜಿಕ ಕಳಕಳಿಯ ದ್ಯೋತಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು, ರಾಜ್ಯದಲ್ಲಿ ನೀರಾವರಿ ಸಚಿವರು ಕಾಂಗ್ರೆಸ್ ಪಕ್ಷದವರೇ ಇದ್ದು, ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿರುವ ಡಿ. ಸುಧಾಕರ್ ಅವರು ತ್ವರಿತವಾಗಿ ಸಮಸ್ಯೆ ಬಗೆಹರಿಯುವಂತೆ ಒತ್ತಡ ತರಬೇಕು’ ಎಂದು ಮನವಿ ಮಾಡುತ್ತಿದ್ದಂತೆ, ವಕೀಲ ಶಿವಕುಮಾರ್, ‘ಮುಖ್ಯಮಂತ್ರಿ ಜೆಡಿಎಸ್‌ನವರಿದ್ದಾರೆ, ನೀವೂ ಅವರ ಮೇಲೆ ಒತ್ತಡ ತನ್ನಿ’ ಎಂದು ಆಗ್ರಹಿಸಿದಾಗ ಪ್ರತಿಭಟನಕಾರರು ಜೋರಾಗಿ ಕರತಾಡನ ಮಾಡಿದರು.

ವಕೀಲರಾದ ಎಸ್.ಟಿ. ಚಿದಾನಂದಪ್ಪ, ಎಸ್. ಜಯಣ್ಣ, ಪಾಂಡುರಂಗಪ್ಪ, ಆರೀಫುಲ್ಲಾಖಾನ್, ರಂಗನಾಥ್,ಮಹಲಿಂಗಪ್ಪ, ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊರಕೇರಪ್ಪ ವಾಣಿ ವಿಲಾಸಕ್ಕೆ ನೀರು ಹರಿಸುವವರೆಗೆ ಪಕ್ಷಾತೀತ ಹೋರಾಟ ಮುಂದುವರಿಯಬೇಕು ಎಂದರು.

ಯುವ ವಕೀಲ ಟಿ. ಸಂಜಯ್, ‘ನಾನು ಆಮರಣಾಂತ ಉಪವಾಸ ಕುಳಿತುಕೊಳ್ಳಲು ಕಾರಣ 2008 ರಲ್ಲಿ 543 ದಿನ ಧರಣಿ ನಡೆಸಿ ಕೊನೆಯ 6 ದಿನ ಆಮರಣಾಂತ ಉಪವಾಸ ನಡೆಸಿದ ತಾಯಂದಿರು. ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಧರಣಿ ಸ್ಥಳಕ್ಕೆ ಬರುವಂತೆ ಮಾಡಿ ಯೋಜನೆ ಅನುಷ್ಠಾನಕ್ಕೆ ಕಾರಣವಾಯಿತು. ಅಂದು ಆರಂಭಗೊಂಡ ಯೋಜನೆ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳಿಸುವ ದಿನಾಂಕವನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲದು’ ಎಂದು ಎಚ್ಚರಿಸಿದರು.

2008 ರಲ್ಲಿ ಆಮರಣಾಂತ ಉಪವಾಸ ನಡೆಸಿದ್ದ ವೇದಾ ಶಿವಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ನಗರಸಭೆ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ, ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

ವಕೀಲರಾದ ಟಿ. ಸಂಜಯ್, ಎನ್.ವಿ. ಅನಿಲ್ ಕುಮಾರ್, ಡಿ. ಚಂದ್ರಶೇಖರ್, ರೈತ ಮಹಿಳೆಯರಾದ ಆದಿವಾಲ ಫಾರಂನ ಸೋಳಿಯಮ್ಮ, ಕರುಪಾಯಮ್ಮ, ಕುಮುದ, ವಸಂತಿ, ಹಿರಿಯೂರಿನ ಲಕ್ಷ್ಮೀ ರಾಜೇಂದ್ರನ್, ಕವಿತಾ ಶ್ರೀನಿವಾಸ್, ನಗರಸಭೆ ಜೆಡಿಎಸ್ ಸದಸ್ಯ ಎ. ಪಾಂಡುರಂಗ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಾದತ್ ಉಲ್ಲಾ, ಸೈಯದ್ ಸಲಾವುದ್ದೀನ್, ಅಬೀಬ್ ಹುಸೇನ್, ಸ್ನೇಹ ಸಂಪದ ಸಂಘದ ಅಬ್ದುಲ್ ಸಲ್ಮಾನ್, ಕರ್ನಾಟಕ ರಕ್ಷಣಾ ವೇದಿಕೆಯ ಕೃಷ್ಣಪೂಜಾರ್ ಉಪವಾಸ ಕುಳಿತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.