ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವವು ಗುರುವಾರ ಸಡಗರದಿಂದ ನೆರವೇರಿತು.
ನಾಯಕನಹಟ್ಟಿಯಿಂದ 5 ಕಿ.ಮೀ ದೂರದಲ್ಲಿರುವ ಹಿರೇಕೆರೆಯಲ್ಲಿ 12 ವರ್ಷಗಳ ನಂತರ ನಡೆದ ಅದ್ದೂರಿ ತೆಪ್ಪೋತ್ಸವವನ್ನು ಸುತ್ತಲಿನ ಜಿಲ್ಲೆಗಳು, ನೆರೆಯ ಆಂಧ್ರ ಮತ್ತು ಸೀಮಾಂಧ್ರ ಪ್ರದೇಶಗಳಿಂದ ಬಂದಿದ್ದ 4 ಲಕ್ಷಕ್ಕೂ ಹೆಚ್ಚು ಜನರು ಕಣ್ತುಂಬಿಕೊಂಡರು. ಕೆರೆಯ ಸುತ್ತಲಿನ ಸುಮಾರು 15 ಕಿ.ಮೀ ಪ್ರದೇಶದಲ್ಲಿ ಜನರು ನೆರೆದಿದ್ದರು.
ಗುರುವಾರ ಬೆಳಿಗ್ಗೆ 10ಕ್ಕೆ ಪಟ್ಟಣದ ಒಳಮಠ ದೇವಾಲಯದಿಂದ ಅಲಂಕಾರಗೊಂಡ ಹೂವಿನ ಪಲ್ಲಕ್ಕಿಯಲ್ಲಿ ಗುರುತಿಪ್ಪೇರುದ್ರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಭವ್ಯವಾದ ಮೆರವಣಿಗೆಯ ಮೂಲಕ ಹಿರೇಕೆರೆಯ ಕಡೆ ಹೊತ್ತು ತರಲಾಯಿತು. ದೇವರ ಪಲ್ಲಕ್ಕಿ ಸಾಗುತ್ತಿದ್ದ ದಾರಿಯುದ್ದಕ್ಕೂ ರೈತರು ಮತ್ತು ಭಕ್ತರು ಪಲ್ಲಕ್ಕಿಗೆ ಹೂವು, ಹಣ್ಣು, ಕಾಯಿ, ಚೂರು ಬೆಲ್ಲ, ಮೆಣಸನ್ನು ಅರ್ಪಿಸಿದರು. 12 ಗಂಟೆಗೆ ಹಿರೇಕೆರೆಯ ಆವರಣ ತಲುಪಿದ ದೇವರ ಪಲ್ಲಕ್ಕಿಯನ್ನು ಬೋಸೆದೇವರಹಟ್ಟಿ ಗ್ರಾಮದ ಕಡೆಯ ಕೋಡಿ ಬಳಿ ಒಯ್ದು ಗಂಗಾಪೂಜೆ ನೆರವೇರಿಸಲಾಯಿತು. ನಂತರ ಮರಳಿ ಕೆರೆಯ ಏರಿಯ ಮೇಲಿರುವ ದೇವರ ಕಟ್ಟೆಯ ಬಳಿಗೆ ಪಲ್ಲಕ್ಕಿಯನ್ನು ಹೊತ್ತು ತಂದು ಹೂವಿನ ಮಂಟಪದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತೆಪ್ಪದ ಗಡ್ಡೆಯ ಬಳಿ ನಾಯಕನಹಟ್ಟಿ ಪಟ್ಟಣದ ಗೌಡ್ರು ಮತ್ತು ಗೊಂಚಿಗಾರರ ಮನೆತನದವರು ವಿಶೇಷವಾಗಿ ತಯಾರಿಸಿದ ನಂದಾದೀಪ, ಬಲಿ ಅನ್ನದ ಸೋರೆ, ನಿಶಾನಿಪಟ, ನಗಾರಿಯನ್ನು ಹೊತ್ತು ತಂದು ಪೂಜೆ ನೆರವೇರಿಸಲಾಯಿತು. ಬಲಿ ಅನ್ನ ಸ್ಥಳಕ್ಕೆ ಬಂದಾಗ ದಿಢೀರನೆ ನೂರಾರು ಜನ ಜಮಾಯಿಸಿದರು. ನುಗ್ಗಿ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ನಿಯಂತ್ರಣಕ್ಕೆ ಬಾರದ ಜನರು ಬ್ಯಾರಿಕೇಡ್‌ಗಳನ್ನು ದಾಟಿ ಕೆರೆಯ ದಂಡೆಗೆ ಬಂದರು.
21 ಅಡಿ ಉದ್ದ, 21ಅಡಿ ಅಗಲ ಹಾಗೂ 8 ಅಡಿ ಎತ್ತರದ ಬೃಹತ್ ಮರದ ತೆಪ್ಪದಲ್ಲಿ ತಿಪ್ಪೇರುದ್ರಸ್ವಾಮಿಯ ನಿಶಾನ ಪಟ, ಬಲಿ ಅನ್ನ, ನಂದಾದೀಪವನ್ನು ಪ್ರತಿಷ್ಠಾಪಿಸಲಾಯಿತು. ಇದೇ ವೇಳೆ 4 ದಿಕ್ಕುಗಳಿಗೆ ನಿಶಾನಿಪಟ ಸೇರಿ ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ತೆಪ್ಪದ ಮಧ್ಯದಲ್ಲಿ ಸ್ಥಾಪಿಸಲಾಗಿದ್ದ ಮಂಟಪದಲ್ಲಿ 8 ಅಡಿ ಕಲಶವನ್ನು ಸ್ಥಾಪಿಸಲಾಗಿತ್ತು. ಜೋಗಿಹಟ್ಟಿ ಗೊಲ್ಲ ಸಮುದಾಯದವರು ಸಾಂಪ್ರದಾಯಿಕವಾಗಿ ನೀಡಿದ ಕಪ್ಪು ಬಣ್ಣದ ಮೇಕೆ ತೆಪ್ಪದಲ್ಲಿತ್ತು. ಉತ್ಸವ ಮುಕ್ತಾಯಗೊಂಡ ನಂತರ ಇದನ್ನು ಕೆರೆಯನ್ನು ನಿರ್ವಹಿಸುವ ನೀರಗಂಟಿಗೆ ನೀಡುವುದು ವಾಡಿಕೆ. ಪೊಲೀಸರು 67 ಜನ ತೆಪ್ಪ ಚಲಾಯಿಸುವ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಿದ್ದರು. ನಾವಿಕರು, ಮುಖಂಡರು, ಆಯಗಾರರು ಸೇರಿ 90ಕ್ಕೂ ಹೆಚ್ಚು ಜನರು ತೆಪ್ಪದಲ್ಲಿದ್ದರು. ನಂತರ ಉತ್ಸವಕ್ಕೆ ಸಿದ್ಧಗೊಂಡಿದ್ದ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಧ್ಯಾಹ್ನ 3.15ಕ್ಕೆ ಉತ್ಸವ ಆರಂಭಗೊಂಡಿತು. ಆರಂಭದಲ್ಲಿ ತೆಪ್ಪ ಸ್ಥಳವನ್ನು ಕದಲಲಿಲ್ಲ. ಪೊಲೀಸರು ಸ್ಥಳಕ್ಕೆ ಕ್ರೇನ್ ತರಿಸಿದ್ದರು. ಆದರೆ ಅದರ ಅಗತ್ಯ ಕಂಡುಬರಲಿಲ್ಲ. ಸ್ವಲ್ಪ ಸಮಯದಲ್ಲಿಯೇ ತೆಪ್ಪ ಸ್ಥಳದಿಂದ ನಿಧಾನವಾಗಿ ವಾಲುತ್ತ ಸಾಗಿತು. 21 ಅಡಿ ಉದ್ದದ ಮರದ ತೆಪ್ಪ ಎಡ ಬಲಕ್ಕೆ ವಾಲುತ್ತ ಸಾಗಿತು. 8 ಅಡಿ ಎತ್ತರದ ತೆಪ್ಪವಿದ್ದರೂ ಮೇಲಿನ ಒಂದು ಅಡಿ ಮತ್ತು ಪಾದುಕೆ ಇದ್ದ ಅಂತಸ್ತು, ಕಲಶ ಮಾತ್ರ ಕೆರೆಯ ನೀರಿನಲ್ಲಿ ಗೋಚರಿಸುತ್ತಿತ್ತು.
ತೆಪ್ಪದ ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸುತ್ತಿದ್ದರಿಂದ ಸ್ವಲ್ಪ ದೂರ ಸಾಗಿದ ತೆಪ್ಪವು ಎಡಗಡೆಗೆ ಸಂಚರಿಸಲು ಆರಂಭಿಸಿತು. ನಂತರ ಸರಿದಾರಿಗೆ ತರಲು ತೆಪ್ಪ ಚಲಾಯಿಸುವವರು ಸುಮಾರು 3 ಗಂಟೆಗಳ ಕಾಲ ಹರಸಾಹಸ ಪಟ್ಟರು. ನಂತರ ತೆಪ್ಪವನ್ನು ಗುರಿ ಮುಟ್ಟಿಸಿ ಜಯಘೋಷಗಳನ್ನು ಕೂಗಿ ಐತಿಹಾಸಿಕ ತೆಪ್ಪೋತ್ಸವಕ್ಕೆ ಮಂಗಳ ಹಾಡಿದರು.
ಕೆರೆಯ ಸುತ್ತಲಿನ ಹೊಲಗಳಲ್ಲಿ ಜನರು ಬಿಡಾರ ಹೂಡಿದ್ದರು. ಹೊಲಗಳು, ಮಣ್ಣಿನ ದಾರಿಗಳಲ್ಲಿ ಸಾಗಿದ ಲಕ್ಷಾಂತರ ಜನರು ಹಾಗೂ ವಾಹನಗಳಿಂದಾಗಿ ಇಡೀ ಕೆರೆಯ ಪ್ರದೇಶ ದೂಳುಮಯವಾಗಿತ್ತು. ಮುಖ್ಯರಸ್ತೆಯವರೆಗೆ ಮಾತ್ರ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜನರು ಮೂರ‍್ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. 33 ಡಿಗ್ರಿ ತಾಪಮಾನದ ಬಿಸಿಲು, ದೂಳಿಗೆ ಜನ ಹೈರಾಣಾದರು.
ಚನ್ನಬಸಯ್ಯನಹಟ್ಟಿ ಗೇಟ್‌ನಿಂದ ಕೆರೆಯವರೆಗೆ ಜನರು ನಡೆದೇ ಹೋಗಬೇಕಾಯಿತು. ಕೆರೆ ಸುತ್ತಲಿನ ಸಣ್ಣ ಮಣ್ಣಿನ ದಾರಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. 3 ಕಿ.ಮೀ. ಟ್ರಾಫಿಕ್ ಜಾಮ್ ಆಗಿತ್ತು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರಿಗೆ ಟ್ರಾಫಿಕ್ ಬಿಸಿ ತಟ್ಟಿತು. ಪೊಲೀಸರ ನಿರೀಕ್ಷೆ ಮೀರಿ ಜನ ಸಾಗರ ಹರಿದು ಬಂದಿದ್ದು ಸಮಸ್ಯೆ ಉಂಟು ಮಾಡಿತು. ಜತೆಗೆ ಇಕ್ಕಟ್ಟಾದ ದಾರಿಗಳೂ ಸಮಸ್ಯೆಗೆ ಕಾರಣವಾದವು. ನೂರಾರು ಜನರು ಕೆರೆಯ ಬಳಿಗೆ ಹೋಗಲಾರದೇ ಹಿಂದಿರುಗಿದ್ದು ಕಂಡು ಬಂದಿತು.
ಕೆರೆಗೆ ಧುಮುಕಿದ ಶ್ರೀರಾಮುಲು
ಸಾರಿಗೆ ಸಚಿವ ಬಿ. ಶ್ರೀರಾಮುಲು ಕೆರೆಯ ಸಮೀಪ ಬಂದ ನಂತರ ಮೋಟಾರ್ ಬೋಟ್ ಏರಿದರು.
ಅದರಲ್ಲಿದ್ದ ಸಿಬ್ಬಂದಿಯಿಂದ ಹುಟ್ಟು ತೆಗೆದುಕೊಂಡು ಒಂದಷ್ಟು ದೂರ ತಾವೇ ಬೋಟ್ ಚಲಾಯಿಸಿದರು. ನಂತರ ಕೆರೆಯ ದಡದಲ್ಲಿದ್ದ ಜನರನ್ನು ನೋಡಿ ಸ್ಫೂರ್ತಿಯಿಂದ ಬೋಟ್‌ನಲ್ಲಿ ನಿಂತು ಕೈ ಬೀಸಿದರು. ದಂಡೆಯ ಬಳಿ ಸಾಗಿ ಮೋಟಾರ್ ಬೋಟ್‌ನಲ್ಲಿ ನಿಂತು ಜನರತ್ತ ಕೈ ಬೀಸಿದರು. ಶಾಸಕ ಟಿ. ರಘುಮೂರ್ತಿ ಲೈಫ್ ಜಾಕೆಟ್ ಧರಿಸಿದ್ದರು. ಆದರೆ ಸಚಿವರು ಮಾತ್ರ ಲೈಫ್ ಜಾಕೆಟ್ ಧರಿಸದೇ ಮೋಟಾರ್ ಬೋಟ್‌ನಲ್ಲಿ ಸುತ್ತಾಟ ನಡೆಸಿದರು. ತೆಪ್ಪದ ಬಳಿಗೆ ಬರುತ್ತಿದ್ದಂತೆ ದಿಢೀರನೆ ನೀರಿಗೆ ಧುಮುಕಿದರು. ಈಜುತ್ತ ಹೋಗಿ ತೆಪ್ಪವನ್ನು ಸೇರಿ ಹೂವಿನ ಹಾರ ಸಮರ್ಪಿಸಿದರು.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ತಹಶೀಲ್ದಾರ್ ಎನ್. ರಘುಮೂರ್ತಿ, ದೇವಾಲಯದ ಇಒ ಗಂಗಾಧರಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಲೀಲಾವತಿ ಭಾಗವಹಿಸಿದ್ದರು. ತೆಪ್ಪೋತ್ಸವ ಸಮಿತಿಯ ಕೆ. ತಿಪ್ಪೇರುದ್ರಪ್ಪ, ಜಿ.ಎಸ್. ಪ್ರಭುಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.