ADVERTISEMENT

ಭದ್ರಾ ಮೇಲ್ದಂಡೆ ಯೋಜನೆಗೆ ಮೊದಲ ಆದ್ಯತೆ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 14:10 IST
Last Updated 4 ಜೂನ್ 2024, 14:10 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕ್ಷೇತ್ರಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ನನ್ನ ಆದ್ಯತೆ. ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಟ್ಟು ಶೋಷಿತರ ಧ್ವನಿಯಾಗುತ್ತೇನೆ’ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾಯಿತ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.

ಫಲಿತಾಂಶ ಹೊರಬಿದ್ದ ಬಳಿಕ ಮತ ಎಣಿಕೆ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂಬುದು ನನ್ನ ಕನಸಿನಲ್ಲೂ ಇರಲಿಲ್ಲ. ಆದರೆ ಬಿಜೆಪಿ– ಜೆಡಿಎಸ್‌ನ ಹಿರಿಯ ನಾಯಕರು ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದರಿಂದ ಸ್ಪರ್ಧೆ ಮಾಡಿದೆ. ಬಿರು ಬಿಸಿಲನ್ನು ಲೆಕ್ಕಿಸದೆ ಮೈತ್ರಿ ನಾಯಕರು ಪ್ರಚಾರ ನಡೆಸಿ ಗೆಲುವಿನ ದಡ ಸೇರಿಸಿದರು’ ಎಂದು ಹೇಳಿದರು.

‘ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮತದಾನ ದಿನ ಸನಿಹವಾಗಿತ್ತು. ಕ್ಷೇತ್ರಕ್ಕೆ ಆಗಮಿಸಿದಾಗ ಹೊರಗಿನ ಅಭ್ಯರ್ಥಿ ಎಂಬ ಕೂಗು ಕೇಳಿ ಬಂದಿತು. ಸಂಘಟಿತ ಶ್ರಮಕ್ಕೆ ಫಲ ದೊರೆತಿದೆ. ಪ್ರಚಾರ ಕಾರ್ಯಕ್ಕೆ ಎರಡೂ ಪಕ್ಷಗಳ ಹಿರಿಯ ನಾಯಕರು ಆಗಮಿಸಿ ನೆರವಾದರು. ಜತೆಗೆ ಸ್ಥಳೀಯ ನಾಯಕರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಿದರು’ ಎಂದು ಕೃತಜ್ಞತೆ ಸಲ್ಲಿಸಿದರು.

ADVERTISEMENT

‘ಪ್ರಚಾರದ ವೇಳೆ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಕಂಡಿದ್ದೇನೆ. ಮೂಲಸೌಲಭ್ಯದ ಸಮಸ್ಯೆಗಳು ಇಷ್ಟು ವರ್ಷಕ್ಕೆ ಬಗೆಹರಿಯಬೇಕಿತ್ತು. ಆದರೆ, ಎಲ್ಲವೂ ಜೀವಂತವಾಗಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಖ್ಯವಾಗಿ ಕೇಂದ್ರದಿಂದ ಆಗಬೇಕಿರುವ ಯೋಜನೆಗಳನ್ನು ಆದ್ಯತೆಯಾಗಿ ಪರಿಗಣಿಸಿ ಕೆಲಸ ಮಾಡುತ್ತೇನೆ. ನೀರಾವರಿ ವಿಚಾರದಲ್ಲಿ ಜನ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಚುನಾವಣೆ ಪ್ರಚಾರದ ವೇಳೆ ಆರೋಪ– ಪ್ರತ್ಯಾರೋಪ ಸಾಮಾನ್ಯ. ಆದರೆ, ಎಲ್ಲವನ್ನೂ ಮರೆತು ಕೆಲಸ ಮಾಡುವುದನ್ನು ಮೊದಲಿಂದ ಪಾಲಿಸಿಕೊಂಡು ಬಂದಿದ್ದೇನೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಫಲಿತಾಂಶದ ಬಳಿಕ ನಾವು ಮಾಡುವ ಕೆಲಸ ಮಾತ್ರ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಇದ್ದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಜನರ ಆಶಯವಾಗಿದೆ. ಅದಕ್ಕಾಗಿ ಮೈತ್ರಿ ಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ. ಜಿಲ್ಲೆಯಲ್ಲಿ ನನಗೆ ವಿರೋಧ ಇರಲಿಲ್ಲ. ಪಕ್ಷದ ಎಲ್ಲರೂ ಸಹಕಾರ ನೀಡಿದರು
–ಗೋವಿಂದ ಎಂ.ಕಾರಜೋಳ ವಿಜೇತ ಅಭ್ಯರ್ಥಿ ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.