ಚಿತ್ರದುರ್ಗ: ನಗರದ ಕಾರಾಗೃಹ ರಸ್ತೆಯ ಪಾಳು ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳ ಅಂತ್ಯಕ್ರಿಯೆ ಶನಿವಾರ ನಡೆಯಿತು.
ಗುರುವಾರ ರಾತ್ರಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಶುಕ್ರವಾರ ಅವುಗಳನ್ನು ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ, ದೊಡ್ಡ ಸಿದ್ದವ್ವನಹಳ್ಳಿಯಲ್ಲಿರುವ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಸಂಪ್ರದಾಯದಂತೆ ಅಸ್ಥಿಪಂಜರಗಳಿಗೆ ಅಗ್ನಿ ಸ್ಪರ್ಶ ಮಾಡಲು ಸಂಬಂಧಿಕರು ನಿರ್ಧರಿಸಿದ್ದರು. ಆದರೆ ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ಅಗ್ನಿಸ್ಪರ್ಶಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಯಿತು.
ಎನ್.ಕೆ.ಜಗನ್ನಾಥ ರೆಡ್ಡಿ (85), ಪತ್ನಿ ಪ್ರೇಮಲೀಲಾ (74), ಪುತ್ರಿ ಎನ್.ಜೆ.ತ್ರಿವೇಣಿ (56), ಎನ್.ಜೆ. ಕೃಷ್ಣ (53), ಎನ್.ಜೆ.ನರೇಂದ್ರ (51) ಅವರು ಮನೆಯಲ್ಲಿ ವಾಸವಿದ್ದರು. ಹೀಗಾಗಿ ಅಸ್ಥಿಪಂಜರಗಳು ಜಗನ್ನಾಥ ರೆಡ್ಡಿ ಕುಟುಂಬದ ಸದಸ್ಯರದ್ದೇ ಎಂಬ ನಂಬಿಕೆಯೊಂದಿಗೆ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದರು.
‘ಘಟನೆಯಿಂದ ದೊಡ್ಡಸಿದ್ದವ್ವನಹಳ್ಳಿಯ ನಾಡಿಗ ರೆಡ್ಡಿ ವಂಶದವರಿಗೆ ತುಂಬಾ ನೋವಾಗಿದೆ. ಮೂರನೇ ದಿನದ ವಿಧಿವಿಧಾನ ನಡೆಸಲು ನಿರ್ಧರಿಸಿದ್ದೇವೆ’ ಎಂದು ಜಗನ್ನಾಥ ರೆಡ್ಡಿ ಅವರ ಸೊಸೆ ಕೊಲ್ಲಿ ಲಕ್ಷ್ಮಿ ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡ, ಉಡುಪು ಹಾಗೂ ಮೂಳೆಗಳ ರಚನೆಯ ಆಧಾರದಲ್ಲಿ ಶವಗಳು ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರದ್ದು ಎಂದು ಗುರುತಿಸಿದೆ. ಇದರ ಆಧಾರದಲ್ಲಿ ಪ್ರತಿ ಅಸ್ಥಿಪಂಜರಕ್ಕೂ ನಿರ್ದಿಷ್ಟ ಗುರುತಿನ ಸಂಖ್ಯೆ ನೀಡಿ ಸಂಬಂಧಿಕರಿಗೆ ಒಪ್ಪಿಸಿದೆ.
‘ಘಟನೆಗೆ ಕಾರಣ ತಿಳಿಯುವ ಸಲುವಾಗಿ, ಮೂಳೆ, ಬಟ್ಟೆ, ಒಂದು ಅಸ್ಥಿಪಂಜರದ ಮೇಲಿದ್ದ ಚರ್ಮದ ತುಣುಕನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ವೇಣು ತಿಳಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು. ಪಾಳು ಮನೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.