ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರು ಮನೆ ನಿರ್ಮಿಸಿಕೊಳ್ಳಲು ₹ 5 ಲಕ್ಷ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಶೈಕ್ಷಣಿಕ ಸಹಾಯಧನ ಪಡೆಯುವಲ್ಲಿ ಉಂಟಾಗಿರುವ ತೊಂದರೆ ಹಾಗೂ ವಿಳಂಬ ನೀತಿ ಸರಿಪಡಿಸುವುದು ಸೇರಿ ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ನೋಂದಾಯಿತ ಮಹಿಳಾ ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿರುವ ಹೆರಿಗೆ ಸಹಾಯಧನ ₹ 30 ಸಾವಿರಕ್ಕೆ ಹೆಚ್ಚಿಸಬೇಕು. ಠೇವಣಿ ಇಡದೆಯೇ ಮೊದಲಿನಂತೆ ಮುಂದುವರೆಸಬೇಕು. ಮದುವೆ ಸಹಾಯಧನ ₹ 50 ಸಾವಿರ ಬದಲು ₹ 1 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ವೇಳೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಹಣ ಇನ್ನು ಕೆಲ ಕಾರ್ಮಿಕರಿಗೆ ತಲುಪಿಲ್ಲ. ತಕ್ಷಣವೇ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಕೋರಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು, ರಾಜ್ಯ ಮಂಡಳಿ ಸದಸ್ಯ ಉಮಾಪತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಇ.ಸತ್ಯಕೀರ್ತಿ, ರಾಜಪ್ಪ, ತಿಪ್ಪೇಸ್ವಾಮಿ, ಮಲ್ಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.