ಹಿರಿಯೂರು: ಬುಡಕಟ್ಟು ಸಮುದಾಯಕ್ಕೆ ಸೇರಿರುವ ಗೊಲ್ಲ ಜನಾಂಗದವರ ವಿಶಿಷ್ಟ ಸಂಪ್ರದಾಯಗಳಿಗೆ ತಾಳವಟ್ಟಿಕಟ್ಟೆ (ಯರಬಳ್ಳಿ ದೊಡ್ಡಹಟ್ಟಿ)ಯಲ್ಲಿ ನಡೆಯುವ ‘ಕಾಳುಹಬ್ಬ’ ಉತ್ತಮ ನಿದರ್ಶನ.
ಫೆ. 26ರಂದು ಝಂಡೆ ಮರ ಎತ್ತುವುದರೊಂದಿಗೆ ಆರಂಭವಾಗಿರುವ ಉತ್ಸವ ಮಾರ್ಚ್ 3 ರವರೆಗೆ ನಡೆಯಲಿದೆ.
ದೊಡ್ಡಹಟ್ಟಿಯಲ್ಲಿ ಯಾದವ ಮತಕ್ಕೆ ಸೇರಿದ ಹಾಲುಕುಡಿದ ಸ್ವಾಮಿ, ಕಾಟಮಲಿಂಗೇಶ್ವರ ಸ್ವಾಮಿ, ಸಿಂಪಣ್ಣ ದೇವರು ಹಾಗೂ ಗಾದ್ರಿ ದೇವರುಗಳ ವಿಶಿಷ್ಟ ಆಕೃತಿಯ ದೇಗುಲಗಳಿವೆ. ಇವುಗಳಲ್ಲಿ ಹಾಲುಕುಡಿದ ಸ್ವಾಮಿ ದೇವರ ಗುಡಿಸಲು ಮುತ್ತುಗದ ಎಲೆಗಳ ಹೊದಿಕೆಯಿಂದ ನಿರ್ಮಿತವಾಗಿದೆ. ಉಳಿದವು ಹುಲ್ಲಿನ ಹೊದಿಕೆಯಿಂದ ಕೂಡಿವೆ.
ದೇಗುಲಗಳ ಒಳಗೆ ಅರ್ಚಕ ಒಳಗೊಂಡಂತೆ ಯಾರಿಗೂ ಪ್ರವೇಶ ಇರುವುದಿಲ್ಲ. ಗುಡಿಯಲ್ಲಿ ಯಾವ ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಮಾಹಿತಿ ಯಾರಿಗೂ ಇರುವುದಿಲ್ಲ. ಕಾಳು ಹಬ್ಬದ ಸಮಯದಲ್ಲಿ ಗಂಗಾಪೂಜೆಗೆ (ಫೆ.27) ಹೋಗುವಾಗ ಕಣ್ಣುಕಟ್ಟಿ, ಸುತ್ತಲೂ ಭಕ್ತರು ಕಂಬಳಿಗಳನ್ನು ಮರೆಮಾಡಿ, ದೇವರಿಗೆ ಸ್ನಾನ ಮಾಡಿಸಿ ಮರಳಿ ಒಯ್ದು ಗುಡಿಯಲ್ಲಿ (ಗುಡಿಸಲಲ್ಲಿ) ಇಡುತ್ತಾರೆ. ದೇಗುಲದ ಒಳಗೆ ‘ಕಂಬಳಿ ಸುತ್ತಿರುವ ಕಂಬಿ’ ಇದೆ ಎಂಬುದು ಕೆಲವರ ನಂಬಿಕೆ.
ಪ್ರಸ್ತುತ ಪೂಜಾರಿಯಾಗಿರುವ ನಿಂಗಣ್ಣ ಎರಡು ದಶಕದಿಂದ ದೇವರ ಸೇವೆಯಲ್ಲಿದ್ದಾರೆ. ಜಟಾಧಾರಿ, ಲಿಂಗಧಾರಿಯಾಗಿರುವ ಅವರು ಯಾರನ್ನೂ ಮುಟ್ಟಿಸಿಕೊಳ್ಳುವುದಿಲ್ಲ. ಹಿಂದೆಲ್ಲ ಪೂಜಾರಿ ನಿರ್ವಾಣ ಸ್ಥಿತಿಯಲ್ಲಿ ಇರಬೇಕಿತ್ತು. ಈಚೆಗೆ ಲಂಗೋಟಿಯನ್ನು ಧರಿಸುತ್ತಿದ್ದು, ಹಬ್ಬಗಳಲ್ಲಿ ಮಾತ್ರ ಕಾವಿ ವಸ್ತ್ರ ಧರಿಸುತ್ತಾರೆ. ಅವರಿಗೆಂದು ನಿರ್ಮಿಸಿರುವ ಕುಟೀರದಲ್ಲಿಯೇ ವಾಸಿಸುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಂತಹ ವಿಶೇಷ ಸಂಪ್ರದಾಯದ ಕಾಳುಹಬ್ಬದಲ್ಲಿ ಸೋಮವಾರ ಗಂಗಾಪೂಜೆ ನೇರವೇರಿತು. ಫೆ. 28ರಂದು ಕಾಳಿನಪೂಜೆ, ಅಕ್ಕಿ ಅಳೆಯುವುದು, ಜಾಡಿ ಹಾಸುವುದು, ಮಾರ್ಚ್ 1ರಂದು ಉಂಡೇಮಂಡೆ (ಜವಳ), ಅನ್ನ ಸಂತರ್ಪಣೆ, 2ರಂದು ಕೊಂಡಕ್ಕೆ ಹೋಗುವುದು, ಮಾರ್ಚ್ 3ರಂದು ಮರುದೀಪ ಪೂಜೆ ನಡೆಯಲಿದೆ. ಈ ದೇವರಿಗೆ ತುಪ್ಪದ ದೀಪವನ್ನೇ ಹಚ್ಚಲಾಗುತ್ತದೆ. ದೇವರಿಗೆ ಅಭಿಷೇಕ ಮಾಡಲು, ಕುಡಿಯಲು, ಸ್ನಾನಮಾಡಲು ದೇವರ ಪೂಜಾರಿ ಚಿಲುಮೆ (ಒರತೆ) ನೀರನ್ನೇ ಬಳಸುವ ಸಂಪ್ರದಾಯ ಇದೆ. ಕಂಬಳಿ ಹೊದಿಕೆಯ ದೇವರಿಗೆ ವರ್ಷಕ್ಕೊಮ್ಮೆ ಕಾಳುಹಬ್ಬ ಮಾಡಲಾಗುತ್ತದೆ. ಪೂಜೆ ನಂತರ ಪೂಜಾರಿ ಕಂಬಿಯನ್ನು ಹೆಗಲ ಮೇಲೆ ಇಟ್ಟು ನಡೆಯುವುದು ವಾಡಿಕೆ. ಪೂಜೆ ಮುಗಿದ ಮೇಲೆ ದೇವರು ಯಾವ ದಿಕ್ಕಿನ ಕಡೆ ಮುಖ ಮಾಡಿ ಹೋಗುತ್ತದೋ ಅತ್ತ ಕಡೆ ಉತ್ತಮ ಮಳೆ–ಬೆಳೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.