ADVERTISEMENT

ಬಿಜೆಪಿ ಅವಧಿಯಲ್ಲಿ ಭೋವಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ: ಗೂಳಿಹಟ್ಟಿ ಶೇಖರ್

ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್‌ ಲಂಚದ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 6:09 IST
Last Updated 6 ಜೂನ್ 2024, 6:09 IST
ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್   

ಚಿತ್ರದುರ್ಗ: ಬಿಜೆಪಿ ಅಧಿಕಾರವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಲಂಚ ಸಂದಾಯವಾಗಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಗಂಭೀರ ಆರೋಪ ಮಾಡಿದ್ದಾರೆ.

13 ನಿಮಿಷಗಳ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಗೂಳಿಹಟ್ಟಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಸಂದರ್ಭದಲ್ಲಿ ಮಾಡಿದ ಈ ಆರೋಪ ಸಂಚಲನವುಂಟು ಮಾಡಿದೆ.

‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕೊನೆಯ ಮೂರು ತಿಂಗಳು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಅಧಿಕಾರವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಆಗ ಸಚಿವರಾಗಿದ್ದ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೂ ಇದರಲ್ಲಿ ಪಾಲಿದೆ’ ಎಂದು ದೂರಿದ್ದಾರೆ.

ADVERTISEMENT

‘ಜಾತಿಗೊಂದರಂತೆ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳಲ್ಲಿ ಇಂತಹ ಅವ್ಯಹಾರ ಮಾಮೂಲಿ ಆಗಿದೆ. ವಿವೇಚನಾ ಕೋಟಾದಡಿ ಸಚಿವರಿಗೆ ಶೇ 15, ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಶೇ 5ರಷ್ಟು ನಿಗದಿಪಡಿಸಲಾಗಿದೆ. ಇದು ಅತಿ ಹೆಚ್ಚು ದುರ್ಬಳಕೆ ಆಗುತ್ತಿದೆ ಎಂಬುದನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅವರಿಗೆ ₹ 50ಕೋಟಿಯಿಂದ ₹ 60 ಕೋಟಿಯಷ್ಟು ಹಣ ಎಲ್ಲಿಂದ ಬಂದಿತು ಎಂಬುದಕ್ಕೆ ಇದಕ್ಕೆ ಉತ್ತರ ಸಿಗಬೇಕಿದೆ. ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ನೀಡುವುದರಿಂದ ಪ್ರಯೋಜನವಿಲ್ಲ. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾದರೆ ಮಾತ್ರ ಸತ್ಯ ಬೆಳಕಿಗೆ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಭೋವಿ ಅಭಿವೃದ್ಧಿ ನಿಗಮದ ₹ 100 ಕೋಟಿಯನ್ನು ತಿಂದು ಹಾಕಲಾಗಿದೆ. ಭೊವಿ ಸಮಾಜದ ಮುಖಂಡರ ಪಾತ್ರವೂ ಇದರಲ್ಲಿದೆ. ಸಮಾಜದ ಫಲಾನುಭವಿಗಳಿಗೆ ಒಂದು ರೂಪಾಯಿ ಕೂಡ ತಲುಪಿಲ್ಲ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಈ ಪ್ರಕರಣವನ್ನು ಸಿಐಡಿಗೆ ನೀಡಿದ್ದರು. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಎಚ್‌.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವರಾದ ಬಳಿಕ ತನಿಖೆ ಸ್ಥಗಿತಗೊಂಡಿದೆ. ಏಕೆ ಹೀಗೆ ಮಾಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

‘ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹದೇ ಆರೋಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ಕೇಳಿಬಂದಿದೆ. ದೂರು ನೀಡಿದ ಮಹಿಳೆಯ ಸಾವಿನ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ’ ಎಂದು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.