ADVERTISEMENT

ಚಿತ್ರದುರ್ಗ: ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಜ್ಜು

ಜಿ.ಬಿ.ನಾಗರಾಜ್
Published 11 ಡಿಸೆಂಬರ್ 2023, 7:40 IST
Last Updated 11 ಡಿಸೆಂಬರ್ 2023, 7:40 IST
ಮೇವು ಅರಸಿ ಚಿತ್ರದುರ್ಗ ನಗರದ ಮೂಲಕ ಜೋಗಿಮಟ್ಟಿ ಬೆಟ್ಟಕ್ಕೆ ಹೊರಟಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ವಿ.ಚಂದ್ರಪ್ಪ 
ಮೇವು ಅರಸಿ ಚಿತ್ರದುರ್ಗ ನಗರದ ಮೂಲಕ ಜೋಗಿಮಟ್ಟಿ ಬೆಟ್ಟಕ್ಕೆ ಹೊರಟಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ವಿ.ಚಂದ್ರಪ್ಪ    

ಚಿತ್ರದುರ್ಗ: ಬರಪೀಡಿತ ಪ್ರದೇಶದಲ್ಲಿ ಎದುರಾಗಿರುವ ಮೇವಿನ ಕೊರತೆಯನ್ನು ನೀಗಿಸಿ ಜಾನುವಾರುಗಳನ್ನು ರಕ್ಷಿಸುವ ಉದ್ದೇಶದಿಂದ ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ಗೋಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ.

ನಾಲ್ಕು ವಾರಗಳಿಗೆ ಸಾಕಾಗುವಷ್ಟು ಮೇವು ಹೊಂದಿರುವ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆಗೆ ಅವಕಾಶ ಸಿಗಲಿದೆ. ಶಾಸಕರ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಕಾರ್ಯಪಡೆಯ ಶಿಫಾರಸು ಆಧರಿಸಿ ಗೋಶಾಲೆ ಕಾರ್ಯಾರಂಭಗೊಳ್ಳಲಿವೆ.

‘ನಾಲ್ಕು ವಾರಕ್ಕಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವು ಇದ್ದಾಗ ಮಾತ್ರ ಗೋಶಾಲೆ ತೆರೆಯಬಹುದು. ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಕೆಲವೆಡೆ ನಾಲ್ಕು ವಾರಗಳಿಗೆ ಸಾಕಾಗುವಷ್ಟು ಮೇವು ಇರುವುದಾಗಿ ಪಶುಪಾಲನಾ ಇಲಾಖೆ ವರದಿ ಸಲ್ಲಿಸಿದೆ. ಇದರ ಆಧಾರದ ಮೇರೆಗೆ ಗೋಶಾಲೆ ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಅನುಮೋದನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾಹಿತಿ ನೀಡಿದ್ದಾರೆ.

ADVERTISEMENT

ಮಳೆ ಕೊರತೆಯಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಜಾನುವಾರು ಮೇವಿಗೂ ನೆರವಾಗುತ್ತಿದ್ದ ಮೆಕ್ಕೆಜೋಳ, ರಾಗಿ, ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ. ಜಾನುವಾರು ಮೇವು ಕೂಡ ಲಭ್ಯವಾಗದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಜಾನುವಾರು ಮೇವು ಒದಗಿಸುವಂತೆ ಪಶುಪಾಲಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇರುವ ಮೇವು ಬೇರೆಡೆಗೆ ಸಾಗಣೆ ಮಾಡದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಇತ್ತೀಚಿಗೆ ಆದೇಶ ಹೊರಡಿಸಿದ್ದಾರೆ.

ಮೇವು ಅರಸಿ ಚಿತ್ರದುರ್ಗ ನಗರದ ಮೂಲಕ ಜೋಗಿಮಟ್ಟಿ ಬೆಟ್ಟಕ್ಕೆ ಹೊರಟಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ವಿ.ಚಂದ್ರಪ್ಪ 

ಗೋಶಾಲೆಗೆ ಅಗತ್ಯವಿರುವ ಮೇವು ಹಾಗೂ ನೀರು ಪೂರೈಕೆಗೆ ಟೆಂಡರ್‌ ಕರೆಯುವ ಪ್ರಕ್ರಿಯೆಗೆ ಜಿಲ್ಲಾಡಳಿತ ಅಣಿಯಾಗಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೋಬಳಿಗೊಂದು, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರಿನಲ್ಲಿ ತಾಲ್ಲೂಕಿಗೆ ಒಂದು ಗೋಶಾಲೆಗೆ ಕೋರಿಕೆ ಬಂದಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 9 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯ ಇದ್ದು, ಗೋಶಾಲೆಗೆ ಯಾವುದೇ ಪ್ರಸ್ತಾವ ಇಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

‘ನಾಲ್ಕು ವರ್ಷಗಳ ಹಿಂದೆ ಗೋಶಾಲೆ ತೆರೆದಿದ್ದಾಗ 28,000 ಜಾನುವಾರುಗಳು ಪ್ರಯೋಜನ ಪಡೆದಿದ್ದವು. ಪ್ರಸಕ್ತ ವರ್ಷ ಹಸಿರು ಬರವಿದ್ದು, ಪರಿಸ್ಥಿತಿ ಹಿಂದಿಗಿಂತ ಪರವಾಗಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ಮೇವು ಇನ್ನಷ್ಟು ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಎ.ಬಾಬುರತ್ನ ತಿಳಿಸಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಕುರಿಗಾಹಿಗಳು ಮೇವು ಅರಸಿ ದಾವಣಗೆರೆ ಜಿಲ್ಲೆಯ ಊರೊಂದರಲ್ಲಿ ಬೀಡುಬಿಟ್ಟಿರುವುದು

ಜಿಲ್ಲೆಯಲ್ಲಿ ಎಮ್ಮೆ, ಎತ್ತು, ಹಸು ಸೇರಿ 3.38 ಲಕ್ಷ ಜಾನುವಾರುಗಳಿವೆ. 13.52 ಲಕ್ಷ ಕುರಿ, 3.85 ಲಕ್ಷ ಮೇಕೆಗಳಿವೆ. ಪ್ರತಿ ಜಾನುವಾರಿಗೆ ನಿತ್ಯ 6 ಕೆ.ಜಿ. ಮೇವಿನ ಅಗತ್ಯವಿದೆ. ಮೇಕೆ ಹಾಗೂ ಕುರಿಗೆ ನಿತ್ಯ ಅರ್ಧ ಕೆ.ಜಿ ಮೇವು ಸಾಕಾಗುತ್ತದೆ. ಮೇವು ಬೆಳೆಯಲು ರೈತರಿಗೆ 13 ಸಾವಿರ ಮೇವಿನ ಬೀಜದ ಕಿಟ್‌ಗಳನ್ನು ಪಶುಪಾಲನಾ ಇಲಾಖೆ ಉಚಿತವಾಗಿ ವಿತರಿಸಿದೆ.

ದಿವ್ಯ ಪ್ರಭು
ತಾಲ್ಲೂಕು ಮಟ್ಟದ ಕಾರ್ಯಪಡೆಯ ಕೋರಿಕೆಯ ಮೇರೆಗೆ ಗೋಶಾಲೆ ತೆರೆಯಲಾಗುವುದು. ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ
–ದಿವ್ಯ ಪ್ರಭು ಜಿ.ಆರ್‌.ಜೆ ಜಿಲ್ಲಾಧಿಕಾರಿ
ಎ.ಬಾಬುರತ್ನ
ಮೇವು ಬೀಜದ ಕಿಟ್‌ಗೆ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಇನ್ನೂ 30 ಸಾವಿರ ಬೀಜದ ಕಿಟ್‌ಗಳನ್ನು ಪೂರೈಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಮೇವು ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ–
ಎ.ಬಾಬುರತ್ನ ಉಪನಿರ್ದೇಶಕ ಪಶುಪಾಲನಾ ಇಲಾಖೆ
ಸರ್ಕಾರ ಕುರಿ ಮೇಕೆ ಸಾಕಣೆದಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇವುಗಳಿಗೂ ನೀರು ಮೇವಿನ ವ್ಯವಸ್ಥೆ ಮಾಡಿದಾಗ ಮಾತ್ರ ಬರಪರಿಹಾರಕ್ಕೆ ನಿಜವಾದ ಅರ್ಥ ಸಿಗಲಿದೆ
–ವಿಶ್ವ ಕುರಿಗಾಹಿ ಮೊಳಕಾಲ್ಮುರು
ದೇವರೆತ್ತು ಮೇವಿಗೆ ₹ 10 ಲಕ್ಷ
ಮ್ಯಾಸಬೇಡ ಬುಡಕಟ್ಟು ಸಮುದಾಯದ ದೇವರೆತ್ತುಗಳ ಮೇವಿಗೆ ರಾಜ್ಯ ಸರ್ಕಾರ ₹ 10 ಲಕ್ಷ ಅನುದಾನ ಒದಗಿಸಿದ್ದು ಅಗತ್ಯಕ್ಕೆ ಅನುಗುಣವಾಗಿ ಮೇವು ಪೂರೈಸಲು ಪಶು ಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಜ್ಜಾಗಿದೆ. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ದೇವರೆತ್ತುಗಳು ಇರುವುದರಿಂದ ₹ 5 ಲಕ್ಷವನ್ನು ಒದಗಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿಗೆ ₹ 3.5 ಲಕ್ಷ ಹಾಗೂ ಚಿತ್ರದುರ್ಗ ತಾಲ್ಲೂಕಿಗೆ ₹ 1.5 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ದೇವರೆತ್ತುಗಳಿಗೆ ಮೇವಿನ ಅಗತ್ಯ ಇದ್ದಾಗ ಈ ಅನುದಾನದಲ್ಲಿ ಖರೀದಿ ಮಾಡುವಂತೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ದೇವರೆತ್ತುಗಳ ಮೇವು ಪೂರೈಕೆಗೆ ಅನುದಾನ ಒದಗಿಸುವಂತೆ ಹಾಗೂ ಗೋಶಾಲೆ ಸೌಲಭ್ಯ ಕಲ್ಪಿಸುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದ್ದರು. ಮೊಳಕಾಲ್ಮುರು ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು ಇದನ್ನು ಬೆಂಬಲಿಸಿದ್ದರು. ಇದು ಸರ್ಕಾರದ ಮೇಲೆ ಒತ್ತಡ ಸೃಷ್ಟಿಸಿತ್ತು.

ಆರಾಧ್ಯ ದೈವಕ್ಕೆ ಮೇವಿನ ಕೊರತೆ -ವಿ.ಧನಂಜಯ ನಾಯಕನಹಟ್ಟಿ:

ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವದ ಪ್ರತೀಕವಾದ ದೇವರೆತ್ತುಗಳಿಗೆ ಬರದ ಪರಿಣಾಮದಿಂದ ಮೇವಿನ ಕೊರತೆ ಉಂಟಾಗಿದ್ದು ಹಸಿವಿನ ವೇದನೆ ಅನುಭವಿಸುತ್ತಿವೆ.

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳು ಬುಡಕಟ್ಟು ಸಂಸ್ಕೃತಿಯ ನೆಲೆವೀಡಾಗಿವೆ. ಅದರಲ್ಲೂ ಪರಿಶಿಷ್ಟ ಪಂಗಡದ ನಾಯಕ ಜನಾಂಗದ ದೈವಗಳು ಬುಡಕಟ್ಟು ಪರಂಪರೆಗೆ ಸೇರಿದ್ದು ಪಶುಪಾಲನೆಯ ಮೂಲಕ ಪರಂಪರೆಯನ್ನು ಸೃಷ್ಟಿಸಿವೆ. ಹಾಗೇ ಇವರು ಬುಡಕಟ್ಟು ದೈವಗಳ ಸ್ವರೂಪದಲ್ಲಿ ದೇವರೆತ್ತಗಳನ್ನು ಕಾಣುತ್ತಾರೆ. ಈ ದೇವರೆತ್ತುಗಳ ಆರೈಕೆ ಆರಾಧನೆ ಎಲ್ಲವನ್ನೂ ನಾಯಕ ಸಮುದಾಯ ಆಚರಿಸಿಕೊಂಡು ಬರುತ್ತಿದೆ. ಇಂತಹ ದೇವರೆತ್ತುಗಳ ಪೋಷಣೆಯ ಹೊಣೆಯನ್ನು ಕಿಲಾರಿಗಳು ವಹಿಸಿಕೊಂಡಿದ್ದಾರೆ.

ಈ ದೇವರೆತ್ತುಗಳು ತಮ್ಮ ವ್ಯಾಪ್ತಿಯಲ್ಲಿರುವ ಅಡವಿಗಳಲ್ಲಿ ಸಿಗುವ ಮೇವು ಆಶ್ರಯಿಸಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಅಡವಿಯಲ್ಲಿ ಮೇವಿನ ಅಭಾವ ಹೆಚ್ಚಾಗಿ ದೇವರೆತ್ತುಗಳು ಮೇವಿಗಾಗಿ ಪರಿತಪಿಸುತ್ತಿವೆ. ಇದನ್ನು ಕಂಡು ಕಿಲಾರಿಗಳು ಯಜಮಾನರು ದೇವರೆತ್ತುಗಳ ಭಕ್ತರು ಸ್ವಂತ ಖರ್ಚಿನಲ್ಲಿ ಮೇವು ಖರೀದಿಸಿ ಕೊಡುವ ಸಂಪ್ರದಾಯಕ್ಕೆ ಮುಂದಾಗಿದ್ದಾರೆ. ಆದರೂ ದೇವರೆತ್ತುಗಳ ಹಸಿವನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ.

ಈ ವರ್ಷ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದೆ. ದೇವರೆತ್ತುಗಳ ಮೇವಿಗೆ ಸಮಸ್ಯೆ ಇದೆ. ಹೊಲಗಳಲ್ಲಿ ಎಲ್ಲಿ ನೋಡಿದರೂ ಒಂದು ಹಿಡಿಯಷ್ಟು ಹುಲ್ಲು ದೊರೆಯುತ್ತಿಲ್ಲ. ಕೆಲ ದೇವರೆತ್ತುಗಳು ಮೇವನ್ನರಿಸಿ ಗುಳೆ ಹೋಗುತ್ತಿವೆ. ಇನ್ನೂ ಕೆಲ ದೇವರೆತ್ತುಗಳ ಕಿಲಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ಯಜಮಾನರು ಮೆಕ್ಕೆಜೋಳ ಬೆಳೆದ ರೈತರ ಬಳಿ ತೆರಳಿ ಜೋಳದ ಸೊಪ್ಪೆಯನ್ನು ತರುತ್ತಿದ್ದಾರೆ. ಅದು ಮುಗಿದ ನಂತರ ಭಕ್ತರು ದಾನಿಗಳು ಸಂಘ ಸಂಸ್ಥೆಗಳ ಸಹಕಾರದಿಂದ ಭತ್ತದ ಹುಲ್ಲು ವ್ಯವಸ್ಥೆಯಾಗುತ್ತದೆ. ಆದರೆ ಈ ವರ್ಷ ಸರ್ಕಾರ ದೇವರೆತ್ತುಗಳಿಗೆ ಮೇವನ್ನು ಒದಗಿಸುವ ಯೋಚನೆಯೇ ಮಾಡಿಲ್ಲ. ಯಾವ ಅಧಿಕಾರಿಯೂ ದೇವರೆತ್ತುಗಳ ಸಂಕಷ್ಟವನ್ನು ಆಲಿಸುತ್ತಿಲ್ಲ.

‘ದೇವರೆತ್ತುಗಳಿಗೆ ಮೇವಿಲ್ಲದೆ ಸೊರಗುವುದನ್ನು ನೋಡಿ ಸಹಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಕೆಲ ದಿನದಿಂದ ಅಲ್ಪಸ್ವಲ್ಪ ಮಳೆಯಾಗಿದೆ. ಹೊಲಗಳ ಬದುಗಳಲ್ಲಿ ಮೇವು ಬೆಳೆಯಲು ಕನಿಷ್ಠ ಒಂದು ತಿಂಗಳು ಬೇಕು. ಅಲ್ಲಿಯವರೆಗೆ ದೇವರೆತ್ತುಗಳ ಮೇವಿಗೆ ಏನು ಮಾಡುವುದು ಎಂದು ದಿಕ್ಕು ತೋಚುತ್ತಿಲ್ಲ’ ಎಂದು ನೆಲಗೇತನಹಟ್ಟಿ ಚನ್ನಕೇಶವ ದೇವರ ಕಿಲಾರಿ ಎ.ಬಿ.ಕುಮಾರ ಗ್ರಾಮಸ್ಥ ಪಿ.ಎನ್.ಮುತ್ತಯ್ಯ ಅಳಲು ತೋಡಿಕೊಳ್ಳುತ್ತಾರೆ.

‘ಕಳೆದ ವರ್ಷ ಸುರಿದ ಮಳೆಯಿಂದ ಬೆಳೆಗಳು ಕೈಸೇರಿ ಮೇವನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಈವರೆಗೂ ಈ ಮೇವು ಆಸರೆಯಾಗಿತ್ತು. ಪ್ರಸಕ್ತ ವರ್ಷ ಎಲ್ಲಿಯೂ ಮೇವು ದೊರೆಯುತ್ತಿಲ್ಲ. ಮೇವು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೇವಿನ ದರ ದುಬಾರಿಯಾಗಿದೆ. ದೇವರೆತ್ತುಗಳು ಮೇವಿಲ್ಲದೆ ಸೊರಗಿ ಹೋಗಿವೆ. ಹೊಲಗಳಲ್ಲಿ ಮೇವು ದೊರೆಯುವವರೆಗೂ ಜಿಲ್ಲಾಡಳಿತ ದೇವರೆತ್ತುಗಳಿಗೆ ಮೇವು ಪೂರೈಸಬೇಕು’ ಎಂದು ಮಲ್ಲೂರಹಳ್ಳಿ ರಾಜಲು ದೇವರೆತ್ತುಗಳ ಕಿಲಾರಿಗಳಾದ ಬೋರಯ್ಯ ಪಾಲಯ್ಯ ಪರಮೇಶಿ ಬೊಮ್ಮಯ್ಯ ಆಗ್ರಹಿಸುತ್ತಾರೆ.

ಕುರಿ ಮೇಕೆಗೆ ಅನನುಕೂಲ-ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು:

ಮಳೆ ಇಲ್ಲದೇ ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಆವರಿಸಿದ್ದು ಮೇವಿಗೆ ಹಾಹಾಕಾರ ಉಂಟಾಗಿದೆ. ಜಾನುವಾರು ಸಾಕಣೆದಾರರಿಗೆ ಹೋಲಿಕೆ ಮಾಡಿದಲ್ಲಿ ಕುರಿ ಮೇಕೆ ಸಾಕಣೆ ಮಾಡುವವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಪರಿಶಿಷ್ಟ ಜಾತಿ ಪಂಗಡದ ಜನ ಹೆಚ್ಚು ವಾಸವಿದ್ದಾರೆ. ಇವರ ಮುಖ್ಯ ಕಸುಬು ಕುರಿ ಮೇಕೆ ಸಾಕಣೆ. ಅದರಲ್ಲೂ ಕೃಷಿ ಕಾರ್ಮಿಕ ಮಹಿಳೆಯರು ಹೆಚ್ಚಾಗಿ ಸಾಕಣೆ ನೆಚ್ಚಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳು ಕುರಿ ಮೇಕೆ ಸಾಕಣೆಯಲ್ಲಿ ಅಗ್ರಸ್ಥಾನವನ್ನೂ ಪಡೆದುಕೊಂಡಿವೆ. ‘ಗೋಮಾಳ ಅರಣ್ಯ ಪ್ರದೇಶ ಮತ್ತು ಬೀಳು ಬಿದ್ದಿರುವ ಹೊಲಗಳು ಕುರಿ ಮೇಕೆಗೆ ಮೇವಿನ ತಾಣಗಳಾಗಿವೆ. ಈ ವರ್ಷ ಮಳೆ ಇಲ್ಲದೇ ಮೇವು ಬೆಳೆದಿಲ್ಲ. ಏಪ್ರಿಲ್‌ ಮೇ ತಿಂಗಳಿನಲ್ಲಿ ಮರಿಗಳನ್ನು ಖರೀದಿಸಿ ಸಾಕಣೆ ಆರಂಭಿಸುತ್ತೇವೆ. ಒಂದೇ ಒಂದು ಹದ ಮಳೆಯಾಗದ ಕಾರಣ ಆರಂಭದಿಂದಲೂ ಮೇವಿಗೆ ಕಷ್ಟಪಡುತ್ತಿದ್ದೇವೆ. ಈಗಲಂತೂ ಸಮಸ್ಯೆ ಹೆಚ್ಚಾಗಿದ್ದು ತುಸು ಮೇವು ಲಭ್ಯವಿರುವ ಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗಿ ಮೇಯಿಸುತ್ತಿದ್ದೇವೆ’ ಎಂದು ಸೂರಮ್ಮನಹಳ್ಳಿಯ ಓಬಣ್ಣ ಹೇಳಿದರು.

‘ಬರ ನಿರ್ವಹಣೆಗೆ ಸರ್ಕಾರ ಗೋಶಾಲೆಗಳನ್ನು ಆರಂಭಿಸುತ್ತದೆ. ಆದರೆ ಅಲ್ಲಿ ದನ ಹಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮೇಕೆ ಕುರಿಗಳಿಗೆ ಮೇವು ನೀಡುವುದಿಲ್ಲ. ಗೋಶಾಲೆ ಪ್ರಯೋಜನ ನಮಗೆ ಸಿಗುವುದಿಲ್ಲ. ಕುರಿ ಮೇಕೆಗೂ ಅವಕಾಶ ನೀಡಬೇಕು ಅಥವಾ ಮೇವು ಖರೀದಿಸಲು ಆರ್ಥಿಕ ಸೌಲಭ್ಯವನ್ನಾದರೂ ನೀಡಬೇಕು’ ಎಂದು ಮಾರಮ್ಮನಹಳ್ಳಿಯ ಸಾಕಣೆದಾರ ಪಾಲಯ್ಯ ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಮೂರು ಗೋಶಾಲೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸರ್ಕಾರಕ್ಕೆ ಪ್ರತಿವರ್ಷ ಕುರಿ ಮೇಕೆಗಳಿಗೂ ಗೋಶಾಲೆಯಲ್ಲಿ ಅವಕಾಶ ನೀಡಬೇಕು ಎಂದು ಕೋರಿ ಪಶುಪಾಲನಾ ಇಲಾಖೆ ಕ್ರಿಯಾಯೋಜನೆ ರೂಪಿಸುತ್ತದೆ. ಆದರೆ ಈ ವರ್ಷವೂ ಅವಕಾಶ ಸಿಕ್ಕಿಲ್ಲ. ‘ಪ್ರತಿದಿನ ತಾಲ್ಲೂಕಿನಲ್ಲಿ ಕುರಿ ಮಂದೆಯನ್ನು ಮೇವಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆಸುವುದು ಸಾಮಾನ್ಯವಾಗಿದೆ. ಯಾವಾಗ ಮಾರಾಟ ಹಂತಕ್ಕೆ ಬರುತ್ತವೆಯೋ ಎಂದು ಅನೇಕರು ತಲೆ ಮೇಲೆ ಕೈಹೊತ್ತಿದ್ದೇವೆ’ ಎಂದು ಕುರಿಗಾಹಿ ವಿಶ್ವ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.