ADVERTISEMENT

ಪರಶುರಾಂಪುರ: ಗ್ರಾ.ಪಂ.ವ್ಯಾಪ್ತಿಯಲ್ಲಿ ಮೇವು; ಬ್ಯಾಂಕ್‌ಗೆ ರೈತರ ಕೂಗು

ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಮೇವಿಲ್ಲದೆ ಪರದಾಟ

ಜೆ.ತಿಮ್ಮಯ್ಯ
Published 25 ಫೆಬ್ರುವರಿ 2024, 6:30 IST
Last Updated 25 ಫೆಬ್ರುವರಿ 2024, 6:30 IST
ಪರಶುರಾಂಪುರದಲ್ಲಿರುವ ಅಹೋಬಳೇಶ್ವರ ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತು ಮತ್ತು ಹಸುಗಳು ಮೇವಿಗಾಗಿ ತಡಕಾಡುತ್ತಿರುವುದು
ಪರಶುರಾಂಪುರದಲ್ಲಿರುವ ಅಹೋಬಳೇಶ್ವರ ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತು ಮತ್ತು ಹಸುಗಳು ಮೇವಿಗಾಗಿ ತಡಕಾಡುತ್ತಿರುವುದು   

ಪರಶುರಾಂಪುರ: ಜಾನುವಾರುಗಳ ರಕ್ಷಣೆಗೆ ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವಿನ ಬ್ಯಾಂಕ್‌ ತೆರೆಯಬೇಕೆಂಬ ಆಗ್ರಹ ರೈತರಿಂದ ಕೇಳಿಬಂದಿದೆ.

ಹೋಬಳಿಯ ಚೌಳೂರು ಗೇಟ್ ಬಳಿ ಗೋಶಾಲೆ ಆರಂಭಿಸಿದ್ದು, ಸಮೀಪದ ಚೌಳೂರು, ಜೆ.ಜೆ ಕಾಲೊನಿ, ದೊಡ್ಡಗೊಲ್ಲರಹಟ್ಟಿ, ಪರಶುರಾಂಪುರದ ಕೆಲ ಜಾನುವಾರುಗಳು ಮಾತ್ರವೇ ಇಲ್ಲಿಗೆ ಬರುತ್ತಿವೆ. ಸಿದ್ದೇಶ್ವರನದುರ್ಗ, ಕ್ಯಾದಿಗುಂಟೆ, ಮಹದೇವಪುರ, ಜಾಜೂರು, ಕಾಮಸಮುದ್ರ, ಮೊದೂರು, ಪಗಡಲಬಂಡೆ, ಕೊರ್ಲಕುಂಟೆ, ಪುಟ್ಲಾರಹಳ್ಳಿ, ಹರವಿಗೊಂಡನಹಳ್ಳಿ ಮುಂತಾದ ಹಳ್ಳಿಗಳಿಂದ ಜಾನುವಾರುಗಳನ್ನು ನಿತ್ಯವೂ ಕರೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಆದಕಾರಣ ಗೋಶಾಲೆ ಆರಂಭವಾಗಿ ತಿಂಗಳಾದರೂ ನಿಗದಿತ ಸಂಖ್ಯೆಯಲ್ಲಿ ಜಾನುವಾರುಗಳು ದಾಖಲಾಗುತ್ತಿಲ್ಲ. ಪ್ರತಿದಿನ 360-380 ದನಗಳು ಮಾತ್ರವೇ ದಾಖಲಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಗೋ ಶಾಲೆಯಲ್ಲಿ ಒಂದು ದನಕ್ಕೆ 6 ಕೆ.ಜಿ ಮತ್ತು ಕರುಗಳಿಗೆ 3 ಕೆ.ಜಿ ಮೇವು ನೀಡುತ್ತಿದ್ದು, ಪ್ರತಿದಿನ ಊರಿನಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ತೆರೆದು ಅಷ್ಟೇ ಪ್ರಮಾಣದ ಮೇವು ನೀಡಿದರೆ ನಮ್ಮ ದನಗಳನ್ನು ರಕ್ಷಿಸಿಕೊಳ್ಳುತ್ತೇವೆ. ಜೊತೆಗೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲೂ ಅನುಕೂಲವಾಗುತ್ತದೆ. ಇಲ್ಲವಾದರೆ ಪ್ರತಿದಿನ ಒಬ್ಬರು ದನಗಳನ್ನು ನೋಡಿಕೊಳ್ಳಬೇಕಾಗುತ್ತದೆ’ ಎಂದು ರೈತರಾದ ನಾಗರಾಜ, ಬಸವರಾಜಪ್ಪ, ಚಿಕ್ಕಣ್ಣ, ತಿಮ್ಮಣ್ಣ ತಿಳಿಸಿದರು.

ADVERTISEMENT

‘ಗೋಶಾಲೆಯಲ್ಲಿ ಕೇವಲ 20-25 ದನಗಳಿಗೆ ಮಾತ್ರ ನೆರಳಿನ ವ್ಯವಸ್ಥೆ ಇದೆ. ಉಳಿದ ದನಕರುಗಳನ್ನು ಮರಗಿಡಗಳ ಅರೆ-ಬರೆ ನೆರಳಿನಲ್ಲಿ ಕಟ್ಟಬೇಕಾದ ಪರಿಸ್ಥಿತಿ ಇದೆ’ ಎಂದು ಜಾನುವಾರುಗಳ ಮಾಲೀಕರು ಬೇಸರ ವ್ಯಕ್ತಪಡಿಸಿದರು.

‘ಪರಶುರಾಂಪುರದಲ್ಲಿರುವ ಅಹೋಬಳೇಶ್ವರ ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತು ಮತ್ತು ಹಸುಗಳು ಮೇವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಸೂಚಿಸಿದ್ದರೂ ಮೇವು ನೀಡುವ ವ್ಯವಸ್ಥೆ ಜಾರಿಯಾಗಿಲ್ಲ. ಅಷ್ಟೂ ದನಗಳನ್ನು ಗೋಶಾಲೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಬುಡಕಟ್ಟು ಸಂಸ್ಕೃತಿ ಪ್ರಕಾರ ದೇವರ ಎತ್ತುಗಳನ್ನು ಹಗ್ಗಗಳಿಂದ ಕಟ್ಟುವಂತಿಲ್ಲ. ಕಿಲಾರಿಯೊಬ್ಬರೇ ಅವುಗಳನ್ನು ನೋಡಿಕೊಳ್ಳುತ್ತಿದ್ದು, ದೇವರ ಎತ್ತುಗಳು ಇರುವ ಸ್ಥಳಕ್ಕೆ ಮೇವು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ನಾಗಭೂಷಣ್ ಒತ್ತಾಯಿಸಿದರು.

‘ಹಿಂದೆಲ್ಲಾ ಗೋಶಾಲೆ ತೆರೆದಾಗ ದೇವರ ಎತ್ತುಗಳಿಗೆ ಅವುಗಳು ಇರುವ ಸ್ಥಳಕ್ಕೆ ಮೇವು ತಂದು ಕೊಡಲಾಗುತ್ತಿತ್ತು. ಈ ಬಾರಿ ಇನ್ನೂ ಮೇವು ನೀಡುತ್ತಿಲ್ಲ. ಅಡವಿಯಲ್ಲಿ ಮೇವಿಲ್ಲ. ದನಗಳ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ’ ಎಂದು ದೇವರ ಎತ್ತುಗಳ ಕಿಲಾರಿ ಚಂದ್ರಣ್ಣ ಬೇಸರ ವ್ಯಕ್ತಪಡಿಸಿದರು.

ಪರಶುರಾಂಪುರ ಸಮೀಪದ ಚೌಳೂರು ಗೇಟ್‌ನಲ್ಲಿನ ಗೋಶಾಲೆ ಕಟ್ಟಡದ ಅರೆ-ಬರೆ ನೆರಳಿನಲ್ಲಿ ಆಶ್ರಯ ಪಡೆದಿರುವ ಎಮ್ಮೆಗಳು

ಜಾನುವಾರುಗಳಿಗೆ ಮೇವು ತರುವ ಸಲುವಾಗಿ ರೈತರು ಪ್ರತಿದಿನ ದೂರದ ಊರಿಗೆ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಮೇವು ಬ್ಯಾಂಕ್ ತೆರೆದು ಮೇವು ನೀಡಿದಲ್ಲಿ ರೈತರ ಸಮಯ ಹಾಗೂ ಶ್ರಮ ಉಳಿಯುತ್ತದೆ

–ನರಸಿಂಹಯ್ಯ ಸಿದ್ದೇಶ್ವರನದುರ್ಗ

ದೇವರ ಎತ್ತುಗಳಿಗೆ ಗೋಶಾಲೆಯ ಮೇವು ನೀಡಬೇಕೋ ಅಥವಾ ಬೇರೆ ಅನುದಾನದಲ್ಲಿ ಮೇವು ಖರೀದಿಸಿ ಕೊಡಬೇಕೋ ಎಂಬುದರ ಕುರಿತು ಚರ್ಚಿಸಿ ಶೀಘ್ರವೇ ಮೇವು ಒದಗಿಸಲಾಗುವುದು

–ರಾಜೇಶ್ ಕಂದಾಯ ನಿರೀಕ್ಷಕ ಪರಶುರಾಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.