ಹಿರಿಯೂರು: ‘ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ಛಾಯಾಗ್ರಾಹಕ ವೃತ್ತಿಯನ್ನೇ ನಂಬಿ ಬದುಕುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅವರ ನೆರವಿಗೆ ಬರಬೇಕು’ ಎಂದು ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಒತ್ತಾಯಿಸಿದರು.
ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಮೂರನೇ ಬಾರಿಗೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
‘ಛಾಯಾಗ್ರಾಹಕರ ಬೇಡಿಕೆಗಳ ಈಡೇರಿಕೆಗೆ ನಡೆಯುವ ಹೋರಾಟಕ್ಕೆ ಕೈ ಜೋಡಿಸುತ್ತೇನೆ. ಸಂಘಕ್ಕೆ ನಿವೇಶನ ಖರೀದಿಸಲು ನೆರವು ನೀಡುತ್ತೇನೆ’ ಎಂದು ತಿಳಿಸಿದ ರಾಜಣ್ಣ, ‘ಕ್ರೀಡೆಗಳಿಂದ ಮನುಷ್ಯರು ಆರೋಗ್ಯಕರವಾಗಿ, ಕ್ರಿಯಾಶೀಲರಾಗಿರುತ್ತಾರೆ. ಪ್ರತಿ ಆಟಕ್ಕೂ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳ ಕಡೆಗೂ ಸಂಘ–ಸಂಸ್ಥೆಗಳು ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಶಿರಾ ತಾಲ್ಲೂಕು ಕಾಡುಗೊಲ್ಲ ಸಮಾಜದ ಅಧ್ಯಕ್ಷ ಈಶಣ್ಣ, ಯುವ ಮುಖಂಡರಾದ ಎನ್.ಧನಂಜಯ, ಜನಾರ್ದನ್, ಚಿತ್ತಪ್ಪ, ವಕೀಲರಾದ ನಾಗರಾಜ್, ಜಿಕೆವಿಕೆ ಜಯರಾಮ್, ತಾಲ್ಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಕೃಷ್ಣಪ್ಪ, ಎಂ.ಎಲ್.ಗಿರಿಧರ್, ಮುನ್ನ ನಾಗಣ್ಣ, ಪಿ.ವೈ.ಗೋವಿಂದಪ್ಪ, ಗೌಸ್, ಸಪ್ತಗಿರಿ ಗೋವಿಂದ್, ಚಂದನ್, ಲಿಂಗರಾಜು, ಮಂಜುನಾಥ್ ಯಾದವ್, ರಾಮಚಂದ್ರರೆಡ್ಡಿ, ತಮ್ಮಣ್ಣ, ನಾಗೇಂದ್ರ, ಪಾರ್ಥ, ಭರತ್, ಸತೀಶ್ ಉಪಸ್ಥಿತರಿದ್ದರು.
ಪಂದ್ಯಾವಳಿಗೆ ರಾಜ್ಯದ ವಿವಿಧ ಭಾಗಗಳಿಂದ 20ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.